ಉಗಾರ ಖುರ್ದ ಪುರಸಭೆಯಿಂದ ಭವ್ಯ ಭಾವೈಕ್ಯತೆಯ ಬಾವುಟ ರ್ಯಾಲಿಯ ಪಾದಯಾತ್ರೆ
ಶೇಡಬಾಳ 14: ಭಾರತ ದೇಶದ 75 ನೇ ಸ್ವಾತಂತ್ರ್ಯ "ಆಜಾದಿ ಕಾ ಅಮೃತ ಮಹೋತ್ಸವ"ದಲ್ಲಿ 135 ಕೋಟಿ ಜನರು ಸಂಭ್ರಮಿಸಿ ಅವರ ದೇಶ ಭಕ್ತಿಯನ್ನು ಕಂಡು ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮ ಜೀವ ಬಲಿದಾನ ಮಾಡಿದ ರಾಷ್ಟ್ರದ ಮಹಾಪುರುಷರು, ವೀರ ಮರಣ ಹೊಂದಿದ ಯೋಧರು ಸ್ವರ್ಗದಲ್ಲಿಯೇ ಇದ್ದು ಸಂತೋಷ ಪಡುತ್ತಿದ್ದಾರೆಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಅವರು ಶನಿವಾರ ದಿ. 13 ರಂದು ಉಗಾರ ಖುರ್ದ ಪುರಸಭೆ ಏರ್ಪಡಿಸಿದ್ದ 75 ನೇ ಸ್ವಾತಂತ್ರ್ಯ "ಆಜಾದಿ ಕಾ ಅಮೃತ ಮಹೋತ್ಸವ"ದ ಭವ್ಯ ಭಾವೈಕ್ಯತೆಯ ಬಾವುಟ ರ್ಯಾಲಿಯ ಪಾದಯಾತ್ರೆಯಲ್ಲಿ ಭಾಗವಹಿಸಿ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಅವರು ಮುಂದೆ ಮಾತನಾಡುತ್ತಾ ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಜನರು ತ್ಯಾಗ, ಬಲಿದಾನ ಹೊಂದಿದ್ದಾರೆ. ಇಂದು ನಾವು ಭಾರತೀಯರು ಯಾವುದೇ ಜಾತಿ, ಮತ, ಪಂಥ, ಪಕ್ಷ ಎಂಬ ಭೇದ ಭಾವ ಎಸಗದೇ ಸರ್ವರು ಒಂದುಗೂಡಿ ಈ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವುದು ಅವರ ತ್ಯಾಗ ಬಲಿದಾನಕ್ಕೆ ಸಂದ ಗೌರವವಾಗಿದೆ ಎಂದು ಹೇಳಿದರು.
ಇದೇ ರೀತಿ ಪ್ರತಿಯೊಬ್ಬರಲ್ಲೂ ದೇಶಾಭಿಮಾನ, ದೇಶ ಭಕ್ತಿ ಮುಂದುವರೆಯಲಿ, ಜಗತ್ತಿನಲ್ಲಿ ಭಾರತ ದೇಶ ದೊಡ್ಡಣ್ಣನಾಗಿ ಮೆರೆಯಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಂಗವಾಗಿ ಇಲ್ಲಿನ ಚೆನ್ನಮ್ಮ ಸರ್ಕಲ್ನಿಂದ ಪ್ರಾರಂಭವಾದ ಮೆರವಣಿಗೆ ಲಕ್ಷ್ಮೀ ದೇವಿಯ ಮಂದಿರಕ್ಕೆ ಬಂದು ಸಭೆಯಾಗಿ ಮಾರ್ಪಟ್ಟಿತು. ಬಸ್ ನಿಲ್ದಾಣದ ಮುಂದೆ ಏರ್ಪಡಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವವದರ ಜತೆಗೆ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ, ಪರಿಶಿಷ್ಟ ಪಂಗಡದವರಿಗೆ ಹೊಲಿಗೆ ಯಂತ್ರ ವಿತರಣೆ, ಪರಿಶಿಷ್ಟ ಪಂಗಡದವರಿಗೆ ಸೋಲಾರ ವಿತರಣೆ, ಪೌರ ಕಾರ್ಮಿಕರಿಗೆ ಸೋಲಾರ ಹಾಗೂ ಹೊಲಿಗೆ ಯಂತ್ರ ವಿತರಣೆ, ಅಂಬೇಡಕರ ಆಶ್ರಯ ಯೋಜನೆಯಡಿ ಸುಮಾರು 18 ಮನೆಗಳ ಮಂಜೂರಾತಿ ಪತ್ರ ವಿತರಣೆ, ಶಾಸಕರ ಜನಸಂರ್ಪಕ ಕಾರ್ಯಾಲಯದ ವತಿಯಿಂದ ಸುಮಾರು 200 ಪಿಂಚಣಿ ಫಲಾನುಭವಿಗಳಿಗೆ ಆದೇಶ ಪತ್ರ ವಿವರಣೆ ಹಾಗೂ ಚೆನ್ನಮ್ಮ ವೃತ್ತದಿಂದ ಏಕ್ ಸರ್ಕಲ್ ಕುಡಚಿ ರೋಡ ಸುಮಾರು 1.50 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ, ಶಾಲಾ ಕೋಣೆಗಳ ಉದ್ಘಾಟನೆ ನೆರವೇರಿಸಿದರು.
ಈ ಸಮಯದಲ್ಲಿ ಉಗಾರ ಬುದ್ರುಕ ಗ್ರಾಪಂ ಅಧ್ಯಕ್ಷ ಅಣ್ಣಾಗೌಡ ಪಾಟೀಲ, ದಾದಾ ಪಾಟೀಲ, ರಾಜೇಂದ್ರ ಪೋತದಾರ, ರಾಜೇಶ ಪಾಟೀಲ, ಸುಭಾಷ ಕುರಾಡೆ, ಯೋಗೇಶ ಕುಂಬಾರ, ಪ್ರಫುಲ ಥೋರುಸೆ, ನಂದಿನಿ ಪರಾಕಟೆ, ಮದನ ದೇಶಿಂಗೆ, ಹೀನಾ ಶೇಖ, ರಾಜು ಪಾಟೀಲ, ಪ್ರಕಾಶ ಥೋರುಸೆ, ಸದಾಸಿವ ಸಿಂಗೆ, ಅಶೋಕ ಕಾಂಬಳೆ, ನಾಮದೇವ ಖರಾಡೆ, ಪುರಸಭೆಯ ಮುಖ್ಯಾಧಿಕಾರಿ ಸುನೀಲ ಬಬಲಾದಿ, ಕಾಗವಾಡ ಪಿಎಸ್ಐ ಬಿ.ಎಂ.ರಬಕವಿ ಸೇರಿದಂತೆ ಎಲ್ಲ ಪುರಸಭೆ ಸದಸ್ಯರು, ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಇದ್ದರು