ಕೊನೆಗೂ ಸಾರ್ವಜನಿಕ ಶೌಚಾಲಯ ಸಾರ್ವಜನಿಕರ ಉಪಯೋಗಕ್ಕೆ ಮುಕ್ತ
ರಾಣಿಬೆನ್ನೂರ,20: ಸ್ವಚ್ಛ ಭಾರತ ಮಿಷನ್ ಯೋಜನೆಯಡಿಯಲ್ಲಿ ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯ ಹತ್ತಿರ ಪಿಬಿ ರಸ್ತೆಯ ಪಕ್ಕದಲ್ಲಿ ನಗರಸಭೆ ವತಿಯಿಂದ ನಿರ್ಮಿಸಲಾಗಿರುವ ಅಂದಾಜು 26.90 ಲಕ್ಷ ರೂ ವೆಚ್ಚದ ಸಾರ್ವಜನಿಕ ಶೌಚಾಲಯ ಕೊನೆಗೂ ಸಾರ್ವಜನಿಕರ ಉಪಯೋಗಕ್ಕೆ ಮುಕ್ತವಾಗಿದೆ.
ಕಳೆದ ವರ್ಷ ಕಾಮಗಾರಿಗೆ ಚಾಲನೆ ದೊರೆತಿದ್ದು, ವರ್ಷದೊಳಗೆ ಕಾಮಗಾರಿ ನಿರ್ಮಿಸಲು ಉದ್ದೇಶಿಸಿದ್ದ ಈ ಶೌಚಾಲಯ ಕಳೆದ ನಾಲ್ಕು ತಿಂಗಳಿನಿಂದ ಕಾಮಗಾರಿ ಪೂರ್ಣಗೊಂಡರೂ ಸಹ ಸಾರ್ವಜನಿಕರಿಗೆ ಇದರ ಪ್ರಯೋಜನ ಪಡೆಯಲು ಆಗಿರಲಿಲ್ಲ. ಅಂಗವಿಕಲರು ಸೇರಿ ಸಾರ್ವಜನಿಕರಿಗೆ ಅನುಕೂಲವಾಗುವ ಸೌಲಭ್ಯಗಳನ್ನು ಈ ಶೌಚಾಲಯದಲ್ಲಿ ಕಲ್ಪಿಸಲಾಗಿದೆ.
ಉದ್ಘಾಟನೆಗಾಗಿ ಕಾಯುತ್ತಿದ್ದ ಈ ಶೌಚಾಲಯವು ಸಾರ್ವಜನಿಕರಿಗೆ ಬಹಳಷ್ಟು ತೊಂದರೆ ಆಗಿತ್ತು. ಸದಾ ಜನನೀಬೀಡ ಪ್ರದೇಶವಾಗಿದ್ದ ಈ ಸ್ಥಳದಲ್ಲಿ ಶೌಚಾಲಯವಿಲ್ಲದೇ ಸಾರ್ವಜನಿಕರು ಬಹಳಷ್ಟು ತೊಂದರೆ ಅನುಭವಿಸಿದ್ದರು. ತುರ್ತಾಗಿ ಈ ಶೌಚಾಲಯ ಸಾರ್ವಜನಿಕರಿಗೆ ನೀಡಿ ಎಂದು ಜನರು ಆಗ್ರಹಿಸಿದ್ದರು.
ನಗರಸಭೆ ಅಧಿಕಾರಿಗಳು ಹಾಗೂ ಶಾಸಕರು ಶೌಚಾಲಯವನ್ನು ಸಾರ್ವಜನಿಕರು ಉಪಯೋಗಿಸಲು ಬುಧವಾರದಂದು ಸಾಂಕೇತಿಕವಾಗಿ ಚಾಲನೆ ನೀಡಿದರು. ಇದರಿಂದಾಗಿ ಈ ಶೌಚಾಲಯ ವರ್ಷದ ನಂತರ ಸಾರ್ವಜನಿಕರಿಗೆ ಮುಕ್ತವಾದಂತಾಗಿದೆ.
ಶಾಸಕ ಪ್ರಕಾಶ್ ಕೋಳಿವಾಡ, ನಗರಸಭಾ ಪೌರಾಯುಕ್ತ ಎಫ್ಐ ಇಂಗಳಗಿ ನಗರಸಭಾ ಸದಸ್ಯರುಗಳಾದ ಪುಟ್ಟಪ್ಪ ಮರಿಯಮ್ಮನವರ, ಶಶಿಧರ್ ಬಸೇನಾಯ್ಕರ್, ಗುತ್ತಿಗೆದಾರ ಚಂದ್ರಣ್ಣ ರಾಮಾಳದ, ಬಸವರಾಜ್ ಹುಚ್ಚಗೊಂಡರ ಸೇರಿದಂತೆ ನಗರಸಭೆಯ ಆರೋಗ್ಯ ಅಧಿಕಾರಿಗಳು, ಇಂಜಿನಿಯರಗಳು, ಸಿಬ್ಬಂದಿಗಳು, ಸಾರ್ವಜನಿಕರು ಇದ್ದರು.