ಗುರುವಿಗೆ ಸನ್ಮಾನ ಜ್ಞಾನಕ್ಕೆ ಸಲ್ಲುವ ಸತ್ಕಾರ: ಅರ್ಚನಾ ಅಥಣಿ
ಕಾಗವಾಡ 07: ಶಿಕ್ಷಕನಾದವ ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸುವ ಜೊತೆಗೆ ತಾನು ಕೂಡ ನಿರಂತರವಾಗಿ ಕಲಿಯುತ್ತಾ ಸಾಗುತ್ತಾನೆ. ಯಾವುದೇ ಮತ್ಸರ ಭಾವಗಳಿಗೆ ಅವಕಾಶವಿಲ್ಲದ ಏಕೈಕ ವೃತ್ತಿ ಶಿಕ್ಷಕರದ್ದಾಗಿದೆ. ಅಂತೆಯೇ 25 ವರ್ಷಗಳ ಬಳಿಕ ತಮಗೆ ಕಲಿಸಿದ ಗುರುವಿಗೆ ಸನ್ಮಾನ ಮಾಡುತ್ತಿರುವುದು ಜ್ಞಾನಕ್ಕೆ ಸಲ್ಲುವ ಸತ್ಕಾರ ಎಂದು ಸಾಹಿತಿ ಡಾ. ಅರ್ಚನಾ ಅಥಣಿ ಹೇಳಿದರು.
ಅವರು ಹುನ್ನೂರು ಗ್ರಾಮದ ಸರಕಾರಿ ಫ್ರೌಢ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯ 1987-1997 ನೇ ಶೈಕ್ಷಣಿಕ ವರ್ಗದ ಹಳೆಯ ವಿದ್ಯಾರ್ಥಿಗಳಿಂದ ಗುರುಗಳ ಸನ್ಮಾನ, ಗುರುಶಿಷ್ಯರ ತ್ರಿವಳಿಕೂಟ ಗುರುವಂದನೆ, ಹಾಗೂ ಸ್ನೇಹ ಸಮ್ಮೀಲನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
25 ವರ್ಷಗಳ ನಂತರ ಅಂದಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಒಂದೇ ವೇದಿಕೆಯ ಮೇಲೆ ಸಮಾಗಮವಾಗಿರುವುದು ಭಾವುಕ ಸಂದರ್ಭ ಇದಾಗಿತ್ತು ಎಂದರು. ಆಗೀನ ಕಾಲದಲ್ಲಿ ಶಿಕ್ಷಣದ ಬಗ್ಗೆ ಉದಾಶೀನತೆ ತೋರಿದ ವಿದ್ಯಾರ್ಥಿಗಳಿಗೆ ತಿದ್ದಿ ಬುದ್ಧಿ ಕಲಿಸಿದ ಗುರುಗಳ ಶ್ರಮದಿಂದ ಇಂಜನೀಯರುಗಳು, ಡಾಕ್ಟರುಗಳು, ರಾಜಕೀಯ ಮುಖಂಡರುಗಳು, ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರು, ಪೊಲೀಸ್ ಅಧಿಕಾರಿಗಳು ಆಗಿ ನಾಡಿನ ತುಂಬ ಸೇವೆ ಸಲ್ಲಿಸುತ್ತಿದ್ದಾರೆ. ಇಂಥ ವೈಭವಪೂರ್ಣ ಕಾರ್ಯಕ್ರಮವನ್ನು ನೋಡಿದಾಗ ನಮ್ಮಲ್ಲಿ ಸಂಸ್ಕಾರ ಮತ್ತೇ ಜಾಗೃತವಾಗುತ್ತಿರುವುದು ಸ್ಪಷ್ಟ ಎಂದು ಡಾ. ಅರ್ಚನಾ ಅಥಣಿ ಬಣ್ಣಿಸಿದರು.
ಸಾನಿಧ್ಯವನ್ನು ವಿಶ್ವನಾಥ ಮಹಾಸ್ವಾಮಿಗಳು ಮಾತನಾಡುತ್ತ ಪಾಲಕರು ತಮ್ಮ ಮಕ್ಕಳಿಗೆ ಆಸ್ತಿ ಮಾಡದೆ, ಮಕ್ಕಳಿಗೆ ಉತ್ತಮವಾದ ಗುಣಮಟ್ಟದ ಶಿಕ್ಷಣವನ್ನು ಕೊಡಿಸಿ ಮಕ್ಕಳನ್ನೇ ಈ ದೇಶದ ಆಸ್ತಿಯನ್ನಾಗಿ ಮಾಡಬೇಕೆಂದರು. ವಿದ್ಯಾರ್ಥಿಗಳಲ್ಲಿ ಆರೋಗ್ಯ, ಶಿಸ್ತು, ಶಿಕ್ಷಣ, ಮತ್ತು ಸಾಮರ್ಥ್ಯ ಈ ನಾಲ್ಕು ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೋ ಅವರು ಜೀವನದಲ್ಲಿ ಯಶಸ್ವಿಯಾಗುತ್ತಾರೆ ಎಂದರು.
ನಿವೃತ್ತ ಪ್ರಾಚಾರ್ಯ ಎಸ್.ಎಂ.ಕೋಲೂರ, ಡಾ.ಲಿಂಗಾನಂದ ಗವಿಮಠ, ಸೇರಿದಂತೆ ಅನೇಕ ಹಳೆಯ ವಿದ್ಯಾರ್ಥಿಗಳು ಅಧಿಕಾರಿಗಳು ಪಾಲ್ಗೊಂಡಿದ್ದರು. ಮುಖ್ಯ ಅತಿಥಿಗಳಾದ ಸಾಹಿತಿ ಡಾ.ಅರ್ಚನಾ ಅಥಣಿ ಹಾಗೂ ಡಾ.ಲಿಂಗಾನಂದ ಗವಿಮಠ ಅವರನ್ನು ಸನ್ಮಾನಿಸಿದರು.