ಮೇಲು ಸೇತುವೆ ಸೋರಿಕೆ ದುರಸ್ತಿಗೆ 4.99 ಕೋಟಿ ರೂ. ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ
ಇಂಜನೀಯರ ಕೆ. ರವಿಗೆ ರೈತರಿಂದ ಸತ್ಕಾರ
ಕಾಗವಾಡ 09: ತಾಲೂಕಿನ ಐನಾಪುರ ಏತ ನೀರಾವರಿ ಯೋಜನೆಯ ಮೂಲಕ ನೀರೊದಗಿಸುವ ಮೇಲು ಸೇತುವೆ ಸೋರಿಕೆಯನ್ನು ಅಧಿಕಾರಿಗಳು ಮುಖ್ಯ ಕಾಲುವೆ ದುರಸ್ತಿಗೊಳಿಸಲು 4.99 ಕೋಟಿ ರೂ. ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದೆ, ಅದಕ್ಕಾಗಿ ರೈತ ಮುಖಂಡರು ಇಂಜನೀಯರ ಕೆ. ರವಿ ಅವರನ್ನು ಸನ್ಮಾನಿಸಿದರು.
ಬುದುವಾರ ದಿ. 9ರಂದು ಐನಾಪುರದ ರೈತ ಮುಖಂಡರು ಹಾಗೂ ಪಟ್ಟಣ ಪಂಚಾಯತ ಸದಸ್ಯರಾದ ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ, ಪಿಕೆಪಿಎಸ್ ಅಧ್ಯಕ್ಷ ಕುಮಾರ ಅಪರಾಜ ಸೇರಿದಂತೆ ಅನೇಕ ಮುಖಂಡರು ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕೆ.ರವಿ ಅವರಿಗೆ ಸನ್ಮಾನಿಸಿ ಧನ್ಯವಾದಗಳನ್ನು ಸಲ್ಲಿಸಿದರು.
ರೈತ ಮುಖಂಡ ಅರುಣ ಗಾಣಿಗೇರ ಮಾತನಾಡಿ ಕಳೆದ 12 ವರ್ಷಗಳಿಂದ ಈ ಯೋಜನೆ ಪ್ರಾರಂಭಗೊಂಡಿದೆ. ಕಳಪೆ ಮಟ್ಟದ ಕಾಮಗಾರಿಯಾಗಿರುವದರಿಂದ ಮೇಲ್ ಕಾಲುವೆ ನಿರಂತರವಾಗಿ ಸೋರಿಕೆಯಾಗುತ್ತಿರುವದರಿಂದ ಐನಾಪುರ ಪಟ್ಟಣದ ನೂರಾರು ಎಕರೆ ಕ್ಷೇತ್ರದಲ್ಲಿ ನೀರು ನುಗ್ಗಿ ರೈತರ ಜಮೀನುಗಳು ಹಾಳಾಗಿವೆ. ಈ ಕುರಿತಂತೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿಕೊಂಡರು ಪ್ರಯೋಜನವಾಗಿರಲಿಲ್ಲ. ಮೊನ್ನೆ ರೈತರು ರೊಚ್ಚಿಗೆದ್ದು ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡಿ ಈ ಅಧಿಕಾರಿಗಳು ರೈತರ ಭಾವನೆಗಳಿಗೆ ಸ್ಪಂದಿಸುತ್ತಿಲ್ಲ ಇವರೊಬ್ಬ ಬೇಜವಾಬ್ದಾರಿ ಅಧಿಕಾರಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಆದರೆ ಅವರು ಕೇವಲ 20 ದಿನಗಳಲ್ಲಿ 5 ಕೋಟಿ ರೂ ಅನುದಾನ ಮಂಜೂರು ಮಾಡಿಸಿಕೊಂಡು ಬಂದು ತಾವು ಬೇಜವಾಬ್ದಾರಿ ಅಧಿಕಾರಿಯಲ್ಲ, ತಾನೊಬ್ಬ ಜವಾಬ್ದಾರಿಯುತ ಅಧಿಕಾರಿ ಎಂದು ಕೆ, ರವಿ ಅವರು ಸಾಬೀತು ಪಡಿಸಿದ್ದಾರೆ. ಅವರಿಗೆ ರೈತ ಸಮುದಾಯದ ವತಿಯಿಂದ ಅಭಿನಂಧನೆಗಳನ್ನು ಸಲ್ಲಿಸುತ್ತೇವೆ ಎಂದು ಅರುಣ ಗಾಣಿಗೇರ ಹೇಳಿದರು.
ಅಭಿಯಂತರರಾದ ಕೆ.ರವಿ ಮಾತನಾಡಿ ಮುಖ್ಯ ಕಾಲುವೆ ನೀರು ಸೋರಿಕೆಯಿಂದ ರೈತರಿಗೆ ತೊಂದರೆಯಾಗಿತ್ತು. ರೈತರು ಪ್ರತಿಭಟನೆ ಕೈಗೊಂಡಿದ್ದರು. ಬೇಡಿಕೆಗಳು ಸೂಕ್ತವಾಗಿರುವದರಿಂದ ಹಿರಿಯ ಅಧಿಕಾರಿಗಳಿ 4.99 ಕೋಟಿ ರೂ. ಅನುದಾನಕ್ಕೆ ಆಡಳಿತಾತ್ಮಕ ಮಂಜೂರಾತಿ ನೀಡಿದ್ದು ಬರುವ ವರ್ಷದೊಳಗಾಗಿ ರಿಪೇರಿಗೊಳಿಸುವುದಾಗಿ ಭರವಸೆ ನೀಡಿದರು.
ರೃತ ಮುಖಂಡರಾದ ಅರುಣ ಗಾಣೀಗೇರ, ಪ್ರವೀಣ ಗಾಣಿಗೇರ, ಕುಮಾರ ಅಪರಾಜ, ರಾಜೇಂದ್ರ ಪೋತದಾರ, ಆಧಿನಾಥ ದಾನೊಳ್ಳಿ, ಅರವಿಂದ ಕಾರ್ಚಿ, ಸುರೇಶ ಅಡಿಸೇರಿ ಸೇರಿದಂತೆ ಅನೇಕ ರೈತರು ಅಭಿಯಂತರರಾದ ಕೆ. ರವಿ, ಪ್ರಶಾಂತ ಪೋತದಾರ, ಸಾಗರ ಪವಾರ ಇವರನ್ನು ಸನ್ಮಾನಿಸಿದರು.