ಸಾಧಕರಿಗೆ ಸನ್ಮಾನ ಸಮಾರಂಭ
ಇಂಡಿ: ನಾಡಿನಲ್ಲಿ ಅಂದು ಬಂಥನಾಳದ ಲಿಂಗೈಕ್ಯ ಸಂಗನಬಸವ ಮಹಾಶಿವಯೋಗಿಗಳು ಮಾಡಿದ ಶೈಕ್ಷಣಿಕ ಕ್ರಾಂತಿಯ ಫಲವಾಗಿ ಇಂದು ಪೊಲೀಸ್ ಇಲಾಖೆಯಲ್ಲಿ ಪಿಎಸ್‌ಐ ಆಗಿ ನೇಮಕ ಆಗಲು ಸಾಧ್ಯವಾಯಿತು ಎಂದು ಸಾಧಕ ವಿದ್ಯಾರ್ಥಿನಿ ಉಮಾ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕಿನ ಲಚ್ಯಾಣದ ಸಿದ್ಧಲಿಂಗ ಮಹಾರಾಜರ ಕಮರಿಮಠದಲ್ಲಿ ಇಲ್ಲಿನ ಕಮರಿಮಠದ ಸೇವಾ ಸಮಿತಿ ಹಾಗೂ ಗ್ರಾಮದ ಹಿರಿಯ ನಾಗರಿಕರ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಬಳಿಕ ಅವರು ಮಾತನಾಡಿ, ಕೇವಲ ಉದ್ಯೋಗ ಪಡೆಯುವದು ಸಾಧನೆ ಅಲ್ಲ. ನಾವು ಎಷ್ಟು ಜನರಿಗೆ ಸೇವೆ ಸಲ್ಲಿಸುತ್ತೇನೆ ಅನ್ನುವದು ಮುಖ್ಯ ಎಂದರು.
ಪಿ.ಎಸ್.ಐ. ಹುದ್ದೆ ನಾನು ಬಯಸಿದ ಹುದ್ದೆಯಲ್ಲ, ಬಯಸದೆ ಬಂದ ಹುದ್ದೆ. ಈ ಹುದ್ದೆಯಲ್ಲಿ ಏಳು ಬೀಳುಗಳು ಸಹಜ, ಈ ಗ್ರಾಮದ ಶಿಕ್ಷಕರ, ಹಿರಿಯರ ಮಾರ್ಗದರ್ಶನದಲ್ಲಿ ನಾನು ಮುನ್ನಡೆಯುತ್ತೇನೆ. ಪಾಲಕರು ಹಣವನ್ನು ಮೀಸಲಿಡುವದಾದರೆ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಮೀಸಲಿಡಬೇಕು ಎಂದು ಹೇಳಿದರು.
ಇನ್ನೊರ್ವ ಸಾಧಕ ಅಹಿರಸಂಗದ ಗ್ರಾಮದ ಸಿದ್ದಾರಾಮ ಕುದರಿ ಮಾತನಾಡಿ, ನಾನು ಲಚ್ಯಾಣದಲ್ಲೆ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಶಿಕ್ಷಣ ಪಡೆದಿದ್ದೇನೆ. ಪ್ರಾಥಮಿಕ ಹಂತದಲ್ಲಿ ನನ್ನ ಶಿಕ್ಷಣಕ್ಕೆ ಗೊತ್ತು ಗುರಿ ಇರಲಿಲ್ಲ. ಪ್ರೌಢ ಶಾಲೆಯಲ್ಲಿ ಚಿಗುರೊಡೆದ ಡಾಕ್ಟರ್ ಆಗಬೇಕು ಎಂಬ ಕನಸನ್ನು ನಿರಂತರ ಪರಿಶ್ರಮದ ಮೂಲಕ ಎಂಬಿಬಿಎಸ್. ವ್ಯಾಸಂಗಕ್ಕೆ ಈಚೆಗೆ ಪ್ರವೇಶ ಪಡೆದು ಕನಸು ನನಸಾಗಿಸಿಕೊಂಡೆ ಎಂದು ಸಂತಸ ವ್ಯಕ್ತಪಡಿಸಿದರು.
ಕನ್ನಡ ಮಾದ್ಯಮದಲ್ಲಿ ವ್ಯಾಸಂಗ ಮಾಡಿದ ನಾನು ನಾಗರಬೆಟ್ಟ ಶಾಲೆಯಲ್ಲಿ ವೈದ್ಯನಾಗಬೇಕು ಎಂಬ ಕನಸಿನೊಂದಿಗೆ ವ್ಯಾಸಂಗ ಮಾಡುತ್ತಿರುವಾಗ, ಇಂಗ್ಲೀಷ ಮಾದ್ಯಮದಲ್ಲಿ ಸಿ.ಬಿ.ಎಸ್.ಸಿ. ಸಿಲೆಬಸ್ ಓದಿದ ಸಹಪಾಠಿಗಳಿಂದ ಅವಮಾನಿತನಾದೆ. ಬಳಿಕ ಛಲ ಬಿಡದೆ ಓದಿ ನಿಟ್ ಪರೀಕ್ಷೆಯಲ್ಲಿ 2020ನೇ ರಾ್ಯಂಕ ಪಡೆದು ನಯಾ ಪೈಸೆ ಇಲ್ಲದೆ ಎಂಬಿಬಿಎಸ್. ಪ್ರವೇಶ ಪಡೆದೆ ಎಂದು ಭಾವುಕನಾಗಿ ನುಡಿದರು.
ಸಾನಿಧ್ಯವಹಿಸಿದ ತದ್ದೇವಾಡಿಯ ಮಹಾಂತ ಸ್ವಾಮೀಜಿ ಮಾತನಾಡಿ, ಮುಖದ ಸೌಂದರ್ಯ ಕೇವಲ ಬಣ್ಣದಿಂದ ಬರುವದಿಲ್ಲ. ಅದು ವಿದ್ಯೆಯಿಂದ ಬರುತ್ತದೆ. ಈ ಗ್ರಾಮದಲ್ಲಿ ಸ್ವಾತಂತ್ರ್ಯದ ನಂತರ ಪೊಲೀಸ್ ಇಲಾಖೆಯಲ್ಲಿ ಪ್ರಥಮ ಬಾರಿಗೆ ಪಿಎಸ್‌ಐ. ಆದ ಕೀರ್ತಿ ಕುಮಾರಿ ಉಮಾ ಚಂದ್ರಕಾಂತ ಪಾಟೀಲ ಅವರಿಗೆ ಸಲ್ಲುತ್ತದೆ. ಇದು ಈ ಹಿಂದೆ ಈ ಭಾಗದಲ್ಲಿ ಜೋಳಿಗೆ ಹಿಡಿದು ಜೋಳ ಸಂಗ್ರಹಿಸಿ ಶಿಕ್ಷಣ ಸಂಸ್ಥೆ ಕಟ್ಟಿದ ಬಂಥನಾಳದ ಪೂಜ್ಯ ಸಂಗನಬಸವ ಮಹಾಶಿವಯೋಗಿಗಳಿಗೆ ಸಲ್ಲುತ್ತದೆ ಎಂದರು.
ಅರಣ್ಯ ರಕ್ಷಕ ಡಿ.ಎ. ಮುಜಗೊಂಡ ಮಾತನಾಡಿ, ಬಂಥನಾಳ ಶಿವಯೋಗಿಗಳು ಕಟ್ಟಿ ಬೆಳಸಿದ ಶಿಕ್ಷಣ ಪಡೆದು ಉನ್ನತ ಸಾಧನೆಗೈದ ಇರ್ವರು ವಿದ್ಯಾರ್ಥಿಗಳ ಸಾಧನೆ ಭಾವಿ ವಿದ್ಯಾರ್ಥಿಗಳಿಗೆ ಆದರ್ಶವಾಗಲಿ ಎಂದರು.
ಮೋರಾರ್ಜಿ ದೇಸಾಯಿ ವಸತಿ ಪ್ರೌಢ ಶಾಲೆಯ ಶಿಕ್ಷಕ ಅನೀಲ ಪರೆಣ್ಣವರ ಮಾತನಾಡಿ, ನಮ್ಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ, ಪಿಎಸ್‌ಐ. ಆಗಿ ಉನ್ನತ ಹುದ್ದೆ ಅಲಂಕರಿಸಿದ ವಿದ್ಯಾರ್ಥಿನಿ ಉಮಾ ಪಾಟೀಲ ಅವರ ಸಾಧನೆ ಸಂತಸ ತಂದಿದೆ ಎಂದರು.
ಕಾರ್ಯಕ್ರಮದ ಉದ್ಘಾಟಿಸಿದ ಅಹಿರಸಂಗದ ಮಲ್ಲಿಕಾರ್ಜುನ ಶಿವಾಚಾರ್ಯರು, ಸಾನಿಧ್ಯವಹಿಸಿದ ಆಳೂರಿನ ಶಂಕರಾನಂದ ಸ್ವಾಮೀಜಿ ಮಾತನಾಡಿದರು.
ವೇದಿಕೆಯಲ್ಲಿ ಅತಿಥಿಯಾಗಿ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಿರಗಪ್ಪ ಯಳಮೇಲಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಹಾಗೂ ಸುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಧನರಾಜ ಮುಜಗೊಂಡ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.