ಸಚಿವ ಶ್ರೀಮಂತ ಪಾಟೀಲ, ವೃಷಭ ಗಣೆಗೆ ಸತ್ಕಾರ
ಶೇಡಬಾಳ 14: ಕಳೆದ 30 ವರ್ಷಗಳಿಂದ ಬೇಸಿಗೆ ಸಮಯದಲ್ಲಿ ಈ ಭಾಗದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗುತ್ತಿತ್ತು. ಇದರಿಂದಾಗಿ ರೈತರು ಕಷ್ಟ ಪಟ್ಟು ಬೆಳೆದ ಬೆಳೆಗಳು ಒಣಗಿ ಸಾಕಷ್ಟು ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದರು. ಆದರೆ ಕಳೆದ 2 ವರ್ಷಗಳಿಂದ ಸಚಿವ ಶ್ರೀಮಂತ ಪಾಟೀಲರು ಹಾಗೂ ವಿದ್ಯುತ್ ಇಲಾಖೆಯ ಅಧಿಕಾರಿಗಳ ಸಹಕಾರದಿಂದ ಈ ಭಾಗದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿಲ್ಲ. ಇದರಿಂದಾಗಿ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ಉಂಟಾಗದೇ ರೈತರು ಬೆಳೆದ ಬೆಳೆಗಳು ಹಸಿರಿನಿಂದ ಕಂಗೊಳಿಸುತ್ತಿವೆ. ಇದರ ಶ್ರೇಯಸ್ಸೆಲ್ಲ ಸಚಿವ ಶ್ರೀಮಂತ ಪಾಟೀಲರಿಗೆ ಸಲ್ಲುತ್ತದೆ ಎಂದು ರೈತ ಮುಖಂಡ ಸುಭಾಷ ಕಟಾರೆ ಹೇಳಿದರು.
ಮಂಗಳವಾರ ದಿ. 15 ರಂದು ಕಾಗವಾಡ ಪ್ರವಾಸಿ ಮಂದಿರದಲ್ಲಿ ಕಾಗವಾಡ ಭಾಗದ ಹಲವಾರು ಯಾತ ನೀರಾವರಿ ಸಂಘಗಳ ವತಿಯಿಂದ ಕೈಮಗ್ಗ, ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಶ್ರೀಮಂತ ಪಾಟೀಲ ಹಾಗೂ ಕಾಗವಾಡ ಹೆಸ್ಕಾಂ ಇಲಾಖೆಯ ಅಧಿಕಾರಿ ವೃಷಭ ಗಣೆಯವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಕಾಗವಾಡ ಭಾಗದ ಕೃಷ್ಣಾ ನದಿ ತೀರದಲ್ಲಿ ನೂರಾರು ಯಾತ ನೀರಾವರಿ ಸಂಘಗಳ ವಿದ್ಯುತ್ ಪಂಪ್ಸೆಟ್ಗಳು ಹಾಗೂ ಇನ್ನಿತರ ರೈತರ ನೂರಾರು ಪಂಪಸೆಟ್ಗಳಿವೆ. ಈ ಪಂಪಸೆಟ್ಗಳ ಮೂಲಕ ರೈತರು ತಮ್ಮ ಜಮೀನುಗಳಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸಿಕೊಂಡಿದ್ದಾರೆ. ಸುಮಾರು 20 ಸಾವಿರ ಕುಟುಂಬಗಳು ಈ ನೀರಾವರಿ ಮೂಲಕ ಉಪಜೀವನ ಸಾಗಿಸುತ್ತಿದ್ದಾರೆ. ಕಡು ಬೇಸಿಗೆಯಲ್ಲಿಯೂ ಕಾಗವಾಡ ತಾಲೂಕಿನ ಕೃಷ್ಣಾ ನದಿ ತೀರದ ರೈತರಿಗೆ ವಿದ್ಯುತ್ ಸಮಸ್ಯೆ ಉಂಟಾಗದಂತೆ ಕಾಳಜಿ ವಹಿಸಿ ಅವರ ಸಹಾಯಕ್ಕೆ ಬಂದುದರಿಂದ ಈ ಭಾಗದ ರೈತರೆಲ್ಲ ಸೇರಿಕೊಂಡು ಅವರನ್ನು ಸತ್ಕರಿಸಿ ಸನ್ಮಾನಿಸಲಾಗುತ್ತಿದೆ ಎಂದು ಕಟಾರೆ ಹೇಳಿದರು.
ಸನ್ಮಾನ ಸ್ವೀಕರಿಸಿ ಸಚಿವ ಶ್ರೀಮಂತ ಪಾಟೀಲ ಮಾತನಾಡುತ್ತಾ ರೈತರ ಸಮಸ್ಯೆಗಳಿಗೆ ಸ್ಪಂದಿಸುವುದೇ ನನ್ನ ಆದ್ಯ ಕರ್ತವ್ಯವಾಗಿದೆ. ನಾನು ನಿಮ್ಮ ಸೇವಕನಾಗಿ ಸೇವೆ ಸಲ್ಲಿಸಿದ್ದೇನೆ ವಿನಃ ಇದರಲ್ಲಿ ನನ್ನದೇನು ಮಹತ್ತರವಾದ ಪಾತ್ರವಿಲ್ಲವೆಂದು ಹೇಳಿದ ಅವರು ಕಾಗವಾಡ ಮತಕ್ಷೇತ್ರದ ರೈತರ, ಬಡ ಜನರ, ದಿನ ದಲಿತರ ಸೇವೆಗಾಗಿಯೇ ತಮ್ಮ ಸಮಯವನ್ನು ಮೀಸಲಿಡುವುದಾಗಿ ಸಚಿವರು ಹೇಳಿದರು.
ಕಾಗವಾಡ ಹೆಸ್ಕಾಂ ಇಲಾಖೆಯ ಅಧಿಕಾರಿ ವೃಷಭ ಗಣೆಯವರನ್ನು ಸತ್ಕರಿಸಿ ಸನ್ಮಾನಿಸಲಾಯಿತು.
ಸುಭಾಷ ಕಟಾರೆ, ಪ್ರಕಾಶ ಮಿರ್ಜೆ, ಕಾಕಾಸಾಬ ಚೌಗಲಾ, ಅರುಣ ಜೋಷಿ, ರಾಜಗೌಡ ಪಾಟೀಲ, ಪವನ ಪಾಟೀಲ, ಪ್ರಕಾಶ ಪಾಟೀಲ, ಶೀಲಾದಾರ ಚವ್ಹಾಣ, ಪ್ರಕಾಶ ದೊಂಡಾರೆ, ಬಿ.ಎ.ಪಾಟೀಲ, ಬಾಬಾಸಾಬ ಚೌಗಲೆ, ಶಾಂತಿನಾಥ ಕಿನಂಗೆ, ಶಾಂತಿನಾಥ ಕರವ, ವಿನೋದ ದೇವನೆ, ವಿಠ್ಠಲ ಪವಾರ, ಶಶಿಕಾಂತ ಜೋಷಿ ಸೇರಿದಂತೆ ಅನೇಕರು ಇದ್ದರು.
ಅರುಣ ಜೋಷಿ ಸ್ವಾಗತಿಸಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.