ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಸತ್ಕಾರ ಸಮಾರಂಭ
ಇಂಡಿ 04: ಹೊಟ್ಟೆಪಾಡಿಗಾಗಿ ಊರೂರು ಸುತ್ತಿಕೊಂಡು ಜೀವನ ಕಟ್ಟಿಕೊಳ್ಳುವ ನಮ್ಮ ಚನ್ನದಾಸ ಸಮುದಾಯದವರಲ್ಲಿ ಹಲವು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ 80ಕ್ಕಿಂತ ಹೆಚ್ಚು ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದು ಶ್ಲಾಘನೀಯ ಎಂದು ಚನ್ನದಾಸರ ಸಮಾಜದ ಜಿಲ್ಲಾಧ್ಯಕ್ಷ ಸಂಜು ದಶವಂತ ಹೇಳಿದರು.
ಅವರು ಶುಕ್ರವಾರ ತಾಲ್ಲೂಕಿನ ಚವಡಿಹಾಳ ಗ್ರಾಮದ ಚನ್ನದಾಸರ ಸಮುದಾಯಭವನದಲ್ಲಿ ನಡೆದ ಚನ್ನದಾಸರ ಸಮಾಜದ 11ವಿದ್ಯಾರ್ಥಿಗಳಿಗೆ ಸಮಾಜದ ಪರವಾಗಿ ಹಮ್ಮಿಕೊಂಡ ಸತ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಮಕ್ಕಳನ್ನು ಶಿಕ್ಷಣದ ಜೊತೆಗೆ ಸಂಸ್ಕಾರವಂತರನ್ನಾಗಿ ಮಾಡಬೇಕಿದೆ. ಆ ಜವಾಬ್ದಾರಿ ಪ್ರತಿಯೊಬ್ಬ ಪಾಲಕರ ಮೇಲಿದೆ. ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಅವರಿಗಾಗಿ ಆಸ್ತಿ ಮಾಡುವ ಹುಚ್ಚು ಬಿಟ್ಟು ಅವರೇ ಸಮಾಜಕ್ಕೆ ದೊಡ್ಡ ಆಸ್ತಿಯಾಗುವಂತೆ ರೂಪಿಸಬೇಕೆಂದರು.
ವಿದ್ಯಾರ್ಥಿಗಳ ಮುಂದಿನ ಶಿಕ್ಷಣಕ್ಕೆ ಅವಶ್ಯಕತೆ ಇದ್ದಲ್ಲಿ ಮಂಗಳೇಶ್ವರಿ ಸಹೋದರರ ವತಿಯಿಂದ ನೆರವು ನೀಡುವುದಾಗಿ ಘೋಷಿಸಿ, ಸನ್ಮಾನಿತರಾದ 11ವಿದ್ಯಾರ್ಥಿನಿಯರಿಗೆ ತಲಾ ಒಂದು ಸಾವಿರ ರೂಪಾಯಿ ಗೌರವಧನ ನೀಡಿದರು.
ಭಾಗ್ಯವಂತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಾಂತಪ್ಪ ದಶವಂತ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ವಿದ್ಯಾರ್ಥಿಗಳಿಗೆ 5000 ರೂಪಾಯಿ ಪ್ರೋತ್ಸಾಹ ಧನ ನೀಡಿದರು. ಕಾಮಣ್ಣ ದಶವಂತ, ಮಾರುತಿ ದಶವಂತ, ಅಪ್ಪಾಜಿ ದಶವಂತ, ಮಹಾದೇವ ದಶವಂತ, ನಾಗರಾಜ ದಶವಂತ, ಶಿವಾನಂದ ದಶವಂತ, ಸಂತೋಷ ದಶವಂತ, ರಾಮಣ್ಣ ದಶವಂತ, ಲಾಲಸಾಬ ದಶವಂತ, ಲೋಕೇಶ್ ದಶವಂತ, ಭಾಗಣ್ಣ ದಶವಂತ, ಸಂತೋಶ ದಶವಂತ, ರವಿ ದಶವಂತ ಸೇರಿದಂತೆ ಮತ್ತಿತರರು ಇದ್ದರು.