ಅಧ್ಯಕ್ಷರಾಗಿ ಫಾತೀಮಾ ನದಾಫ, ಉಪಾಧ್ಯಕ್ಷರಾಗಿ ಸತೀಶ ಜಗತಾಪ
ಕಾಗವಾಡ,26: ತಾಲೂಕಿನ ಉಗಾರ ಖುರ್ದ ಪುರಸಭೆಗೆ ಅತೀ ಚುರಿಸಿನಿಂದ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಫಾತೀಮಾ ನದಾಫ ಅಧ್ಯಕ್ಷರಾಗಿ ಮತ್ತು ಸತೀಶ ಜಗತಾಪ ಉಪಾಧ್ಯಕ್ಷರಾಗಿ ಚುನಾಯಿತರಾಗುವದರೊಂದಿಗೆ ಪುರಸಭೆ ಆಡಳಿತ ಕಾಂಗ್ರೆಸ್ ಪಾಲಾಗಿದೆ.
ಸೋಮವಾರ ದಿ. 26 ರಂದು ಪುರಸಭೆ ಕಾರ್ಯಾಲಯದಲ್ಲಿ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಹಿಂದುಳಿದ ಮಹಿಳೆ (ಅ) ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಂಚಿಕೆಯಾಗಿದ್ದು, ಒಟ್ಟು 23 ಸದಸ್ಯರಲ್ಲಿ ಕಾಂಗ್ರೆಸ್ನ 11 ಸದಸ್ಯರು, ಬಿಜೆಪಿಯ 7 ಸದಸ್ಯರು ಮತ್ತು ಪಕ್ಷೇತರ 5 ಜನ ಸದಸ್ಯರು ಚುನಾವಣೆ ಪ್ರಕ್ರೀಯೆಯಲ್ಲಿ ಭಾಗವಹಿಸಿದ್ದರು.
ಇನ್ನೂ 5 ಜನ ಪಕ್ಷೇತರ ಅಭ್ಯರ್ಥಿಗಳು ಬಿಜೆಪಿಗೆ ಬೆಂಬಲ ನೀಡಿದ್ದು, ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಫಾತೀಮಾ ರಸೂಲ ನದಾಫ್, ಉಪಾಧ್ಯಕ್ಷ ಸ್ಥಾನಕ್ಕೆ ಸತೀಶ ಕೃಷ್ಣಾ ಜಗತಾಪ ಅದರಂತೆ ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಹೀನಾ ಫಾರೂಖ ಶೇಖ, ಉಪಾಧ್ಯಕ್ಷ ಸ್ಥಾನಕ್ಕೆ ಪಲ್ಲವಿ ವಿನಾಯಕ ಕಾಮೇರಿ ಇವರು ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಶಾಸಕರ ಮತದೊಂದಿಗೆ ಸಮಬಲದ ಹೋರಾಟದ ಮಧ್ಯೆ ಚಿಕ್ಕೋಡಿ ಸಂಸದರಾದ ಪ್ರೀಯಾಂಕಾ ಜಾರಕಿಹೊಳಿಯವರ ನಿರ್ಣಾಯಕ ಮತದೊಂದಿಗೆ ಕಾಂಗ್ರೆಸ್ನ ಅಭ್ಯರ್ಥಿಗಳು 13 ಮತಗಳನ್ನು ಪಡೆಯುವದರೊಂದಿಗೆ ಕೇವಲ 1 ಮತದಿಂದ ಆಯ್ಕೆಗೊಂಡಿರುವುದಾಗಿ ಚುನಾವಣಾಧಿಕಾರಿಗಳಾದ ತಹಶೀಲ್ದಾರ ರಾಜೇಶ ಬುರ್ಲಿ ಘೋಷಣೆ ಮಾಡಿದರು.
ಘೋಷಣೆ ಹೊರ ಬರುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿಹಂಚಿ, ಸಂಭ್ರಮಿಸಿದರು. ಮುಂಜಾಗ್ರತಾ ಕ್ರಮವಾಗಿ ಕಾಗವಾಡ ಪಿಎಸ್ಐ ಜಿ.ಜಿ. ಬಿರಾದರ ಪೊಲೀಸ್ ಸಿಬ್ಬಂದಿಯೊಂದಿಗೆ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು. ಈ ವೇಳೆ ಶಾಸಕ ರಾಜು ಕಾಗೆ ಮತ್ತು ಸಂಸದೆ ಪ್ರೀಯಾಂಕಾ ಜಾರಕಿಹೊಳಿ ಮಾತನಾಡಿ, ಚುನಾವಣೆಯಲ್ಲಿ ಮಾತ್ರ ರಾಜಕೀಯ ಇಗೇನಿದ್ದರೂ ಉಗಾರ ಖುರ್ದ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗಾಗಿ ಎಲ್ಲ ಸದಸ್ಯರನ್ನು ಒಟ್ಟಿಗೆ ಸೇರಿಸಿ, ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಮಯದಲ್ಲಿ ಮುಖಂಡರಾದ ಶಂಕರ ವಾಘಮೋಡೆ, ಶಿವಗೌಡಾ ಕಾಗೆ, ರಾಜು ಮದನೆ, ಬಾಳು ಇಸಾಪೂರ, ಸಂಜು ಶಿಂಧೆ, ದೀಲೀಪ ಹುಲ್ಲೋಳ್ಳಿ, ಈಶ್ವರ ಕಾಂಬಳೆ, ವಿಶ್ವನಾಥ ಶಿರಹಟ್ಟೆ, ವಿಜಯ ಅಸೋದೆ, ಶೇಖರ ಕುರಾಡೆ, ಮೋಸಿನ ಶೇಖ, ಗಣೇಶ ಹೇಮಕರ, ರೋಹಿತ ಬಸನಾಯಿಕ, ಸಜೀನ ಜಗತಾಪ ಸೇರಿದಂತೆ ಪುರಸಭೆ ಸದಸ್ಯರು, ಸಿಬ್ಬಂದಿ ವರ್ಗದವರು, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.