ಪರಿಶಿಷ್ಟರಿಗೆ ರಸ್ತೆಯಲ್ಲಿ ಓಡಾಡದಂತೆ ಬಹಿಷ್ಕಾರ: ನ್ಯಾಯಕ್ಕಾಗಿ ಅಹೋರಾತ್ರಿ ಉಪವಾಸ ಸತ್ಯಾಗ್ರಹ
ರಾಣೇಬೆನ್ನೂರು 24: ಪರಿಶಿಷ್ಟ ಪಂಗಡಕ್ಕೆ ಸೇರಿದ ವಾಲ್ಮೀಕಿ ಸಮಾಜದವರನ್ನು ಸರಕಾರ ಲಕ್ಷ, ಲಕ್ಷ ಖರ್ಚು ಮಾಡಿ ಸರಕಾರ ನಿರ್ಮಿಸಿರುವ ಸಾರ್ವಜನಿಕ ರಸ್ತೆಯಲ್ಲಿ ಓಡಾಡದಂತೆ ಬಹಿಷ್ಕಾರ ಹಾಕಿ ಮುಳ್ಳು, ಕಲ್ಲುಗಳನ್ನು ಹಾಕಿ ಇನ್ನೂ ಅಸ್ಪೃಶ್ಯತೆಯ ಅಟ್ಟಹಾಸ ಮೆರೆಯುತ್ತಿರುವುದನ್ನು ಖಂಡಿಸಿ ನ್ಯಾಯಕ್ಕಾಗಿ ಸಮಾನತೆಗಾಗಿ, ಪರಿಶಿಷ್ಟ ಮಹಿಳೆಯರು, ಮಕ್ಕಳಾದಿಯಾಗಿ ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಘಟನೆ ತಾಲೂಕಿನ ಮುದೇನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಲಕನಹಳ್ಳಿಯಲ್ಲಿ ಜರುಗಿದೆ.
ವಾಲ್ಮೀಕಿ ಮತ್ತು ಕುರುಬ ಸಮಾಜ ಎರಡೇ ಎರಡು ಕೋಮಿನ ಜನರು ವಾಸಿಸುವ ಈ ಪುಟ್ಟ ಗ್ರಾಮದಲ್ಲಿ ಈ ಹಿಂದಿನ ಶಾಸಕರ ಅನುದಾನದಲ್ಲಿ ನಿರ್ಮಿಸಿದ ಕಾಂಕ್ರೇಟ್ ರಸ್ತೆಯಲ್ಲಿ ವಾಲ್ಮೀಕಿ ಕೋಮಿಗೆ ಸೇರಿದವರಿಗೆ ಪ್ರವೇಶವಿಲ್ಲ ಎಂದು ನಿರ್ಭಂಧ ವಿಧಿಸಿ ಅಲ್ಲಿ ಕಲ್ಲು ಮುಳ್ಳುಗಳನ್ನು ಹಾಕಿರುವುದೇ ಈ ಘಟನೆಗೆ ಸಾಕ್ಷಿಯಾಗಿದೆ. ಕಳೆದ ಒಂದೂವರೆ ವರ್ಷದಿಂದ ಈ ಬಗ್ಗೆ ಜಿಲ್ಲಾಡಳಿತ ಮತ್ತು ತಾಲೂಕಾಡಳಿತದ ಗಮನಕ್ಕೆ ತಂದು ನ್ಯಾಯ ಒದಗಿಸಬೇಕೆಂದು ಹಲವು ಬಾರಿ ಮನವಿ ಮಾಡಿದರೂ ಮತ್ತು ದಿನನಿತ್ಯ ದೈನಂದಿನ ಕೆಲಸಕ್ಕೆ ಅವಶ್ಯವಿರುವ ರಸ್ತೆಯಲ್ಲಿ ಓಡಾಡದಂತೆ ಬಹಿಷ್ಕಾರ ಹಾಕಿರುವುದನ್ನು ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಸಮಾಜ ಕಲ್ಯಾಣಾಧಿಕಾರಿಗಳು, ಪೊಲೀಸ್ ಇಲಾಖೆಯವರ ಗಮನಕ್ಕೆ ತಂದಿದ್ದರೂ ಕೂಡಾ ನಮ್ಮ ಬಗ್ಗೆ ಸರಕಾರ ನಿರ್ಲಕ್ಷ ಮಾಡಿದೆ,
ಕಾರಣ ನಮಗೆ ನ್ಯಾಯ ಸಿಗಬೇಕು, ನಾವು ಕೂಡಾ ಎಲ್ಲರಂತೆ ನೆಮ್ಮದಿಯಿಂದ ಬಾಳಲು ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ಇಂದು ಬೆಳಗ್ಗೆ ‘9’ ಘಂಟೆಯಿಂದ ಬಹಿಷ್ಕಾರ ಹಾಕಿರುವ ಗ್ರಾಮದ ರಸ್ತೆಯ ಮುಂದೆ ಪರಿಶಿಷ್ಟ ಪಂಗಡಕ್ಕೆ ಸೇರಿದ ಗ್ರಾಮದ ನಿವಾಸಿಗಳು, ಮಹಿಳೆಯರು, ಮಕ್ಕಳಾದಿಯಾಗಿ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದರೂ ಕೂಡ ಇದುವರೆಗೂ ಜಿಲ್ಲಾಡಳಿತ, ತಾಲೂಕಾಡಳಿತ ನಮ್ಮ ಬಗ್ಗೆ ನಮ್ಮ ರಕ್ಷಣೆಯ ಬಗ್ಗೆ ನಮಗಾಗಿರುವ ಅನ್ಯಾಯದ ಬಗ್ಗೆ ನ್ಯಾಯ ಕೊಡಿಸಲು ಗ್ರಾಮಕ್ಕೆ ಬಾರೆದೆ ಇರುವುದು ಸಾಕಷ್ಟು ನೋವು ತಂದಿದೆ ಎಂದು ಧರಣಿ ನಿರತರು ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧರಣಿ ಮುಂದುವರಿದಿದೆ, ಧರಣಿ ಸತ್ಯಾಗ್ರಹದಲ್ಲಿ ಕಮಲಮ್ಮ ಪಾಟೀಲ, ನೇತ್ರಾ ಎಸ್ ಪಾಟೀಲ, ಗೀತಾ ಪಾಟೀಲ, ವೀಣಾ ಓಲೇಕಾರ, ರೇಖಮ್ಮ ಎಚ್. ರೇವಣಗೌಡ ಗೌಡ್ರ, ಶ್ರೀಕಾಂತ ಪಾಟೀಲ, ರಾಜು ಓಲೇಕಾರ, ಕೊಟ್ರ್ಪ ನಂದಿಗಾವಿ, ಹನುಮಂತಪ್ಪ ಓಲೇಕಾರ, ಹನುಮಂತಪ್ಪ ಎಸ್. ಗೌಡ್ರ ಮುಂತಾದವರು ತಮ್ಮ ಸಣ್ಣ ಸಣ್ಣ ಮಕ್ಕಳೊಂದಿಗೆ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ಹಲಗೇರಿ ಪಿ.ಎಸ್.ಐ. ಬಿರಾದಾರ ಸೂಕ್ತ ಪೊಲೀಸ್ ಬಂದೊಬಸ್ತ್ ಒದಗಿಸಿದ್ದಾರೆ.