ಕೆನಾಲ್ ಕಾಲುವೆಗೆ ನೀರು ಹರಿಸಲು ರೈತಸಂಘ ಆಗ್ರಹ
ಸಿಂದಗಿ 16: ತಾಲೂಕಿನ ಗಣಿಹಾರ-ಹಿಕ್ಕಣಗುತ್ತಿ ಗ್ರಾಮಗಳ ವ್ಯಾಪ್ತಿಯಲ್ಲಿನ ನಂ.32 ಡಿಸ್ಟ್ರಿಬ್ಯೂಟರ್ ಕೆನಾಲ್ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ರೈತಸಂಘದ ಜೊತೆಗೂಡಿ ಗ್ರಾಮಸ್ಥರು ಮಂಗಳವಾರ ರಾಂಪೂರ ಪಿ.ಎ.ಗ್ರಾಮದಲ್ಲಿರುವ ಕೆಬಿಜೆಎನ್ಎಲ್ ವಲಯ-2ರ ಮುಖ್ಯ ಅಭಿಯಂತರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ರೈತಸಂಘ ಯುವ ಘಟಕ ರಾಜ್ಯಾಧ್ಯಕ್ಷ ನಿಂಗರಾಜ ಅತನೂರ ಮಾತನಾಡಿ, ನಾರಾಯಣಪೂರ ಡ್ಯಾಮ್ನಲ್ಲಿ ಸಾಕಷ್ಟು ನೀರಿದ್ದರೂ ನಂ.32ರ ಡಿಸ್ಟ್ರಿಬ್ಯೂಟರ್ ಕೆನಾಲ್ ಕಾಲುವೆಗೆ ಕಳೆದ ಜುಲೈನಿಂದ ಕೆಬಿಜೆಎನ್ಎಲ್ ಅಧಿಕಾರಿಗಳು ನೀರು ಹರಿಸುತ್ತಿಲ್ಲ. ಆದರೆ, ಕಾಲುವೆಯಲ್ಲಿ ನೀರು ಹರಿಸುತ್ತಾರೆ ಎಂಬ ಆಸೆಯಿಂದ ತಾಲೂಕಿನ ಗಣಿಹಾರ-ಹಿಕ್ಕಣಗುತ್ತಿ ಗ್ರಾಮಗಳ ರೈತರು ಲಕ್ಷಾಂತರ ರೂಪಾಯಿ ಸಾಲ-ಸೋಲ ಮಾಡಿ ಗೋಧಿ, ಕಡಲೆ, ಜವಿಗೋಧಿ, ಜೋಳ ಮೊದಲಾದ ಬೆಳೆಗಳನ್ನು ಬೆಳೆದಿದ್ದು, ನೀರಿನ ಕೊರತೆಯಿಂದ ಅವು ಈಗ ಒಣಗುತ್ತಿವೆ. ಇದರಿಂದ ಈ ಎರಡು ಗ್ರಾಮಗಳ ರೈತರು ಸಾಲದ ಸುಳಿಗೆ ಸಿಲುಕಿದ್ದು ಆತ್ಮಹತ್ಯೆ ಮಾಡಿಕೊಳ್ಳುವಂತಹ ವಾತಾವರಣ ಸೃಷ್ಠಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾಲ ಮಾಡಿ ರೈತರು ಬೆಳೆದಿರುವ ಬೆಳೆಗಳು ಸದ್ಯ ನೀರಿಲ್ಲದೇ ಒಣಗುತ್ತಿರುವುದಕ್ಕೆ ಕೆಬಿಜೆಎನ್ಎಲ್ ಇಲಾಖೆಯೆ ನೇರ ಕಾರಣವಾಗಿದೆ. ಬೆಳೆ ಹಾನಿಯ ಪರಿಹಾರವನ್ನು ಸಂಕಷ್ಟಕ್ಕೀಡಾಗಿರುವ ರೈತರಿಗೆ ಕೆಬಿಜೆಎನ್ಎಲ್ ಇಲಾಖೆ ಪಾವತಿಸಬೇಕು. ಇಲ್ಲದಿದ್ದರೆ ರೈತರ ಜೊತೆಗೂಡಿ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದರು.
ಮೇಲಾಧಿಕಾರಿಗಳು ಕೂಡಲೇ ಕೆನಾಲ್ ಕಾಲುವೆಯಲ್ಲಿ ನೀರು ಹರಿಸಿ ರೈತರ ಬೆಳೆಗಳನ್ನು ಉಳಿಸಬೇಕು ಮತ್ತು ಬೇಸಿಗೆ ಕಾಲದಲ್ಲಿ ಕೆನಾಲ್ ಕಾಲುವೆಯ ಹೂಳು ಎತ್ತುವ ಕೆಲಸ ಮಾಡಬೇಕು ಇಲ್ಲದಿದ್ದಲ್ಲಿ ರೈತಸಂಘವು ಗ್ರಾಮಸ್ಥರ ಜೊತೆಗೂಡಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುಖಂಡ ಜಟ್ಟೆಪ್ಪ ಗೊಟಗುಣಕಿ ಮಾತನಾಡಿ, ಕೆನಾಲ್ ಕಾಲುವೆಗೆ ನೀರು ಹರಿಸದಿರುವುದಕ್ಕೆ ಗಣಿಹಾರ, ಹಿಕ್ಕಣಗುತ್ತಿ ಗ್ರಾಮಗಳ ರೈತರು ಅನೇಕ ಬಾರಿ ಕೆಬಿಜೆಎನ್ಎಲ್ ಕಚೇರಿಗೆ ಬಂದು ಮೌಖಿಕವಾಗಿ ತಿಳಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಏಕೆಂದರೆ, ಕಚೇರಿಯಲ್ಲಿ ಅಧಿಕಾರಿಗಳೇ ರೈತರ ಕೈಗೆ ಸಿಗುವುದಿಲ್ಲ. ಹೀಗಿರುವಾಗ ರೈತರು ಯಾರ ಹತ್ತಿರ ಸಮಸ್ಯೆ ಹೇಳಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಮುಖ್ಯ ಅಭಿಯಂತರ ಮನ್ಮಥಯ್ಯ ಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಗ್ರಾಮಸ್ಥರಾದ ಪುಂಡಲಿಕ ರಾಠೋಡ, ಮಡಿವಾಳಪ್ಪ ಗೊಟಗುಣಕಿ, ಗುರುಲಿಂಗಪ್ಪ ಯಾತನೂರ, ರಮೇಶ ಶಿವಣಗಿ, ಸಿದ್ದಪ್ಪ ಐರೋಡಗಿ, ಗುರಪ್ಪ ಗೊಟಗುಣಕಿ, ಮಲ್ಲಿಕಾರ್ಜುನ ಕುಂಬಾರ, ಮಲಕಣ್ಣ ಐರೋಡಗಿ, ಅರ್ಜುನ ಅಮ್ಮಾಗೋಳ, ವಿಠ್ಠಲ ರಾಠೋಡ, ನಾನಾಗೌಡ ಇಂಗಳಿಗೆ, ಮಡಿವಾಳಪ್ಪ ಹಳ್ಳಿ, ನಾಗಪ್ಪ ಬಿರಾದಾರ, ಸೇರಿದಂತೆ ಅನೇಕ ರೈತರಿದ್ದರು.