ರೋಗ ಹತೋಟಿಗೆ ಬರಬೇಕಾದರೆ ರೈತರ ಜವಾಬ್ದಾರಿಯೂ ಬಹಳ ಮುಖ್ಯ: ಹೊಸಮನಿ
ಶಿಗ್ಗಾವಿ : ತಾಲೂಕಿನಾದ್ಯಂತ ಇಲ್ಲಿಯವರೆಗೆ ಶಿಗ್ಗಾವಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ 306 ಜಾನುವಾರುಗಳಿಗೆ ಒಕ್ಕರಿಸಿದ ರೋಗ. ಚಿಕಿತ್ಸೆಯಿಂದ 256 ಜಾನುವಾರುಗಳು ಸಂಪೂರ್ಣ ಗುಣಮುಖವಾಗಿವೆ. ಶನಿವಾರದವರೆಗೆ ಆರು ಎತ್ತುಗಳು ಸಾವನ್ನಪ್ಪಿವೆ ನಿರಂತರ ಚಿಕಿತ್ಸೆ ನಡೆಯುತ್ತಿದ್ದು ರೈತರು ಯಾವುದೇ ಆತಂಕಕ್ಕೊಳಗಾಗುವ ಅವಶ್ಯಕತೆ ಇಲ್ಲ ಎಂದು ಪಶುವೈದ್ಯಾಧಿಕಾರಿ ಆರ್.ವೈ. ಹೊಸಮನಿ ತಿಳಿಸಿದರು.
ರೋಗ ಹತೋಟಿಗೆ ಬರಬೇಕಾದರೆ ಸಾರ್ವಜನಿಕರು ಮತ್ತು ರೈತರ ಜವಾಬ್ದಾರಿಯೂ ಬಹಳ ಮುಖ್ಯವಾಗಿದೆ. ರೋಗದಿಂದ ಬಳಲುವ ಜಾನುವಾರುಗಳು ಸಾಯುವ ಪ್ರಮಾಣ ತುಂಬ ಕಡಿಮೆ ಇದೆ. ಪ್ರತ್ಯೇಕವಾಗಿರಿಸಿ ಉಪಚರಿಸಿದರೆ ರೋಗ ಗುಣವಾಗುವುದು. ಆದಾಗ್ಯೂ ಜಾನುವಾರುಗಳು ಸಾವನ್ನಪ್ಪಿದರೆ ಕ್ರಿಮಿನಾಶಕ ಸಿಂಪಡಿಸಿ ಆಳವಾದ ಗುಂಡಿಯಲ್ಲಿ ಹೂಳಬೇಕು.
ತಾಲೂಕಿನ ರೈತರ ಜಾನುವಾರುಗಳಿಗೆ ಕಾಡುತ್ತಿರುವ ಚರ್ಮ ಗಂಟು ರೋಗ ದಿನದಿಂದ ದಿನಕ್ಕೆ ಹೆಚ್ಚಾಗಿ ಜಾನುವಾರುಗಳನ್ನು ಬಲಿ ಪಡೆಯುತ್ತಿದೆ. ಕಳೆದ ಒಂದು ವಾರದಿಂದ ಗಂಟು ರೋಗಕ್ಕೆ ತುತ್ತಾಗಿ ಬಳಲುತ್ತಿದ್ದ ತಾಲೂಕಿನ ಹಿರೇಮಲ್ಲೂರ ಗ್ರಾಮದ ಶಶಿಕುಮಾರ್ ಮುದ್ದಪ್ಪನವರ, ಬನ್ನಿಕೊಪ್ಪ ಗ್ರಾಮದಲ್ಲಿ ಶಿವನಗೌಡ ಹೊಸಗೌಡರ್ ಮತ್ತು ಹಿರೆಮನಕಟ್ಟಿ ಗ್ರಾಮದ ಶಂಕ್ರ್ಪ ಜಾರಗಟ್ಟಿ ಎಂಬವರ ಬೆಲೆಬಾಳುವ 3 ಎತ್ತುಗಳು ಮೃತಪಟ್ಟಿದ್ದು ರೈತರನ್ನು ಆತಂಕಕ್ಕೀಡುಮಾಡಿದೆ.
ರೋಗದಿಂದ ಸಾವನ್ನಪ್ಪಿದ ಎತ್ತಿನ ಮಾಲಕರು ಮುಂಗಾರು ಬೆಳೆಯಿಲ್ಲದೆ ಕಂಗಾಲಾದಂತ ಸಮಯದಲ್ಲಿ ಹಿಂಗಾರು ಬಿತ್ತಲು ಹೊಲಗಳನ್ನು ಹಸನು ಮಾಡಬೇಕು ಎನ್ನುವಂತಹ ಸಂದರ್ಭದಲ್ಲಿ ಗಿಣಿಯಂತೆ ಸಾಕಿದ ಎತ್ತು ರೋಗಕ್ಕೆ ತುತ್ತಾಗಿ ಸಾವನ್ನಪ್ಪಿರುವುದು ಹೊಲಗಳನ್ನು ಹೊಸ ನಾಗಿಸುವುದು ಹೇಗೆ ಎಂದು ಚಿಂತೆ ಮಾಡುವಂತಾಗಿದೆ.
ಚರ್ಮ ಗಂಟು ರೋಗ ಹತೋಟಿಗೆ ತರಲು ಅಗತ್ಯವಿರುವ ಚಿಕಿತ್ಸೆ ಮೂಲಕ ಸಾಕಷ್ಟು ಪ್ರಯತ್ನ ಮಾಡುತ್ತಿದ್ದು. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳಿಗೆ ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಫಾಗಿಂಗ್ ಮಷೀನ್ ಮೂಲಕ ಕೀಟನಾಶಕ ಸಿಂಪರಣೆ ಮಾಡಲು ತಿಳಿಸಲಾಗಿದ್ದು. ಹುಲ್ಲುಗಾವಲು ಪ್ರದೇಶ ಇರುವಲ್ಲಿ ಕಳೆನಾಶಕ ಓಷಧಗಳನ್ನು ಸಿಂಪರಣೆ ಮಾಡಿ ಗ್ರಾಮಗಳನ್ನು ಸ್ವಚ್ಛವಾಗಿಡಲು ತಿಳಿಸಲಾಗಿದೆ. ಸಾರ್ವಜನಿಕರು ಸಹ ತಮ್ಮ ಮನೆ ಸುತ್ತಲಿನ ವಾತಾವರಣವನ್ನು ಸಾಧ್ಯವಾದಷ್ಟು ಸ್ವಚ್ಛತೆ ಕಾಪಾಡಿಕೊಂಡರೆ ಅತಿ ಶೀಘ್ರದಲ್ಲಿಯೇ ಈ ರೋಗವನ್ನು ಹತೋಟಿಗೆ ತರಬಹುದು ಎಂದು ಪಶು ವೈದ್ಯಾಧಿಕಾರಿ ಡಾ.ಆರ್.ವೈ.ಹೊಸಮನಿ ಎನ್ನುತ್ತಾರೆ.