ನಕಲಿ ಐಪಿಎಸ್ ಅಧಿಕಾರಿಗೆ ಮೂರು ವರ್ಷ ಜೈಲು
ಅಥಣಿ 3: ಸಾರ್ವಜನಿಕರಿಗೆ ಹಾಗೂ ಕೆಲವು ಲಿಸ್ ಸಿಬ್ಬಂದಿಗಳಿಗೆ ನಾನು ಐಪಿಎಸ್ ಅಧಿಕಾರಿ ಎಂದು ವಂಚಿಸಿದ ಆರೋಪಿಗೆ ಅಥಣಿ ಪ್ರಧಾನ ನ್ಯಾಯಾಲಯ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ ಹತ್ತು ಸಾವಿರ ರೂಪಾಯಿ ದಂಡವನ್ನು ವಿಧಿಸಿ ತೀರ್ಪು ನೀಡಿದೆ.
ತಾಲೂಕಿನ ಸಂಬರಗಿ ಗ್ರಾಮದ ನಿವಾಸಿ ಅಶೋಕ ಭೀಮರಾವ ಪವಾರ ಎಂಬಾತ ತಾನು ಐ.ಪಿ.ಎಸ್ ಅಧಿಕಾರಿಯೆಂದು ನಂಬಿಸಿ ಸಾರ್ವಜನಿಕರು ಹಾಗೂ ಪೋಲೀಸ್ ಸಿಬ್ಬಂದಿ, ಅಧಿಕಾರಿ, ಗಣ್ಯರನ್ನು ವಂಚಿಸಿರುವ ಆರೋಪ ಸಾಬೀತಾಗಿದ್ದರಿಂದ ಅಥಣಿ ಪ್ರಧಾನ ಜೆಎಂಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ವಿಶ್ವನಾಥ ಸಿ, ಗೌಡರ ಇವರು ತೀರ್ಪು ನೀಡಿದ್ದಾರೆ.
ಘಟನೆ ವಿವರ: 2004 ರಲ್ಲಿ ತಾಲೂಕಿನಾದ್ಯಂತ ನಾನು ಐ.ಪಿ.ಎಸ್ ಅಧಿಕಾರಿ ಎಂದು ಸಂಚರಿಸುತ್ತಿದ್ದ ವ್ಯಕ್ತಿ ನಕಲಿ ಐಡಿ ತೋರಿಸಿ ಪೋಲೀಸ್ ಅಧಿಕಾರಿಯಂತೆ ವರ್ತಿಸಿ ಪೇದೆಗಳಿಗೆ ಹಾಗೂ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ. ಹೀಗೆ 2004ರಲ್ಲಿ ನವೆಂಬರ 18ರಂದು ದುರುದ್ದೇಶದಿಂದ ಪೋಲೀಸ್ ಅಧಿಕಾರಿಯಂತೆ ನಟಿಸಿ ಅಪರಾಧವೆಸಗಿರುವುದು ಸಾಬೀತಾಗಿತ್ತು. ಈ ಬಗ್ಗೆ ಅಂದಿನ ಅಥಣಿ ಪಿಎಸ್ಐ ಕಿಶೋರ ಭರಣಿ ದೂರು ನೀಡಿದ್ದರು. ತದನಂತರ ಚಿಕ್ಕೋಡಿ ಡಿವೈಎಸ್ಪಿ ಪಿ.ಆರ್. ಬಟಕುರ್ಕಿ ಅವರು ತನಿಖೆ ಮಾಡಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸತತ 16 ವರ್ಷಗಳಿಂದ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಅಥಣಿ ಪ್ರಧಾನ ಜೆಎಫ್ಎಂಸಿ ನ್ಯಾಯಾಲಯದ ನ್ಯಾಯಾಧೀಶ ವಿಶ್ವನಾಥ ಗೌಡರ ಅವರು ಆರೋಪಿ ಅಶೋಕ ಪವಾರ ವಿರುದ್ಧದ ಆರೋಪ ಸಾಬೀತಾಗಿದ್ದರಿಂದ ಅಪರಾಧಿಗೆ ಶಿಕ್ಷೆ ವಿಧಿಸಿ ತೀರ್ಪನ್ನು ನೀಡಿದ್ದಾರೆ.