ಜಾತ್ರೆ, ಉತ್ಸವ ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಮೂಡಿಸುವ ಸಂಕೇತ: ಪಾಟೀಲ
ಇಂಡಿ: ಹಬ್ಬ, ಹರಿದಿನ, ಜಾತ್ರೆ, ಉತ್ಸವಗಳು ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಸಂಸ್ಕಾರಗಳನ್ಮ್ನ ಬಿತ್ತಿ ಬೆಳೆಯುವದರ ಜೊತೆಗೆ ಸರ್ವ ಜನಾಂಗದವರಲ್ಲಿ ಸಾಮರಸ್ಯ ಮೂಡಿಸುವ ಸಂಕೇತಗಳಾಗಿವೆ ಎಂದು ಮಾಜಿ ಶಾಸಕ ರವಿಕಾಂತ್ ಪಾಟೀಲ ಹೇಳಿದರು.
ಅವರು ಶನಿವಾರ ತಾಲೂಕಿನ ಬೋಳೆಗಾಂವ ಗ್ರಾಮದಲ್ಲಿ ಮಾರುತೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಧರ್ಮಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ವಿವಿಧ ಋತುಮಾನಗಳಲ್ಲಿ ನಡೆಯುವ ಹಬ್ಬ, ಹರಿದಿನಗಳಲ್ಲಿ ನಾವು ಮಾಡುವ ಅಡುಗೆ, ಆಹಾರ ಸೇವನೆಯ ಸಂಪ್ರದಾಯಗಳು ಮನುಷ್ಯನ ಆರೋಗ್ಯಕ್ಕೆ ಪೂರಕವಾಗಿವೆ. ಸರ್ವಜನಾಂಗದವರು ಒಂದೆಡೆ ಸೇರಿ ಸಾಮರಸ್ಯದಿಂದ ಬದುಕಲು ಪೂರಕ ವಾತಾವರಣ ಸೃಷ್ಟಿಸುತ್ತಲಿವೆ ಎಂದು ಹೇಳಿದರು.
ಹಳ್ಳಿಗಳಲ್ಲಿ ಹಿರಿಯರು ನಾನಾ ಸಮಾರಂಭಗಳಲ್ಲಿ ಹಾಡುವ ಹಾಡುಗಳು, ಒಗಟುಗಳು, ಹಂತಿ ಪದಗಳು, ಗೀಗೀ ಪದಗಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಈಚೆಗೆ ಟಿವಿ ಪ್ರಭಾವದಿಂದಾಗಿ ಜನತೆಯಲ್ಲಿ ಈ ಕುರಿತು ಆಸಕ್ತಿ ಕಡಿಮೆಯಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ವಿರಾಜ ರವಿಕಾಂತ ಪಾಟೀಲ, ರಾಜಕುಮಾರ ಕಪ್ಪೇನವರ್, ಸೇರಿದಂತೆ ಅನೇಕರು ಇದ್ದರು.