ಗುಳೇಗುಡ್ಡ

ಶೋಷಿತ ಸಮುದಾಯಗಳು ಸೌಲಭ್ಯಗಳಿಂದ ವಂಚಿತ : ಮಾವಿನಮರದ

ಶೋಷಿತ ಸಮುದಾಯಗಳು ಸೌಲಭ್ಯಗಳಿಂದ ವಂಚಿತ : ಮಾವಿನಮರದ

ಗುಳೇದಗುಡ್ಡ 18:  ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಎಪ್ಪತ್ತು ದಶಕಗಳು ಕಳೆದರೂ ಶೋಷಿತ ಸಮುದಾಯಗಳು ಇನ್ನೂ ಹಲವು ಸೌಲಭ್ಯಗಳಿಂದ ವಂಚಿತವಾಗಿವೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ತಮ್ಮ ಕಳವಳವನ್ನು ವ್ಯಕ್ತಪಡಿಸಿದರು.  ತಾಲೂಕಿನ ಮಾತಂಗ ಸಮಾಜ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಸಂಘಟನೆ, ಹೋರಾಟದಿಂದ ತಮ್ಮ ಹಕ್ಕುಗಳನ್ನು ಪಡೆದು ಮುಖ್ಯವಾಹಿನಿಗೆ ಬರಬೇಕಿದೆ. ಅಂದಾಗ ಮಾತ್ರ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕನಸು ನನಸಾಗಲು ಸಾಧ್ಯ. ಪ್ರತಿಯೊಬ್ಬರೂ ವಿದ್ಯಾವಂತರಾಗಿಗಬೇಕಿದೆ. ವಿದ್ಯಾವಂತರಾದಾಗ ಮಾತ್ರ ಸಂವಿಧಾನದ ಆಶಯಗಳನ್ನು ಅರಿಯಲು ಹಾಗೂ ನಮ್ಮ ಹಕ್ಕು ಮತ್ತು ಕರ್ತವ್ಯದ ಬಗ್ಗೆ ಅರಿವು ಮೂಡಲು ಸಾಧ್ಯ ಎಂದರು.  

ಅಭಿಯಾನದ ಸಂಚಾಲಕ ಬಸವರಾಜ ಲಾಯದಗುಂದಿ ಮಾತನಾಡುತ್ತಾ ಹೊಸದಾಗಿ ರಚನೆಯಾಗಿರುವ ಗುಳೇದಗುಡ್ಡ ತಾಲೂಕಿನಲ್ಲಿನ ಮಾತಂಗ ಸಮಾಜ ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ಸಂಘಟನಾತ್ಮಕವಾಗಿಯೂ ಹಿಂದುಳಿದಿದೆ. ಎಲ್ಲ ಗ್ರಾಮಗಳ ಸಮಾಜ ಬಾಂಧವರನ್ನು ಒಂದೇ ವೇದಿಕೆಗೆ ತರುವ ಮೂಲಕ ಸರ್ವತೋಮುಖವಾಗಿ ಸಬಲಗೊಳಿಸುವ ಚಿಂತನೆಯಿಂದ ಈ ಹೊಸ ಹೆಜ್ಜೆ ಇಟ್ಟಿದ್ದೇವೆ. ಇದಕ್ಕೆ ಎಲ್ಲರೂ ಕೈಗೂಡಿಸಬೇಕು ಎಂದು ಮನವಿ ಮಾಡಿದರು. 

 ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಅತಿಥಿಗಳಾಗಿ ಮಾತನಾಡಿ, ನಮ್ಮ ಉದ್ಧಾರ ನಮ್ಮ ಕೈಯಲ್ಲಿದೆ. ಯಾರೂ ನಮ್ಮನ್ನು ಬಂದು ಉದ್ಧರಿಸುವುದಿಲ್ಲ. ಶಿಕ್ಷಣ, ಶಿಸ್ತು, ಪರಿಶ್ರಮ, ಸಂಘಟನೆಯಿಂದ ಬದುಕು ರೂಪಿಸಿಕೊಂಡು ಉಳಿದ ಸಮಾಜಗಳಂತೆ ತಲೆಯೆತ್ತಿ ಬದುಕುವ ಹೊಣೆಗಾರಿಕೆ ಇಂದು ಮಾತಂಗ ಸಮಾಜದ ಯುವಕರ ಹೆಗಲಮೇಲಿದೆ. ಆ ದಿಸೆಯಲ್ಲಿ ಈ ಅಭಿಯಾನ ಸೂಕ್ತ ವೇದಿಕೆಯಾಗಲಿ ಎಂದು ಹಾರೈಸಿದರು.  ಮಾತಂಗ ಸಮಾಜದ ತಾಲೂಕಾ ಅಧ್ಯಕ್ಷ ಮೂಕಪ್ಪ ಬೂದನಗಡ ಮಾತನಾಡಿದರು.

   ತಾಲೂಕು ವ್ಯಾಪ್ತಿಯ 38 ಗ್ರಾಮಗಳಲ್ಲಿನ ಮಾತಂಗ ಸಮಾಜದಲ್ಲಿ ಶೈಕ್ಷಣಿಕ, ಔದ್ಯೋಗಿಕ,ಆರ್ಥಿಕ, ಸಾಂಸ್ಕೃತಿಕ ಹಾಗೂ ಸಂಘಟನೆ ಕುರಿತಂತೆ ಅರಿವು ಮೂಡಿಸುವ ಮೊದಲ ಹಂತದ ಜಾಗೃತಿ ಅಭಿಯಾನವನ್ನು ಮಾತಂಗ ಮಹಾಸಭಾದ ಸದಸ್ಯರು ಮಂಗಳಗುಡ್ಡದ ಮಂಗಳಮ್ಮ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಮಂಗಳಮ್ಮನ ಸನ್ನಿಧಿಯಿಂದ ಆರಂಭವಾದ ಅಭಿಯಾನ ತಾಲೂಕಿನ ಕಾಟಾಪುರ, ಮಂಗಳಗುಡ್ಡ, ಚಿಮ್ಮಲಗಿ, ರಾಘಾಪುರ, ನಾಗರಾಳ, ಲಾಯದಗುಂದಿ, ಅಸಂಗಿ, ಬೂದಿನಗಡ, ಹುಲ್ಲಿಕೇರಿ, ಹಾನಾಪುರ, ಮುರುಡಿ, ತೂಗಣಸಿ, ಕೋಟೆಕಲ್ ಮುಂತಾದ ಗ್ರಾಮಗಳಲ್ಲಿ ಸಂಚರಿಸಿ ಮಾತಂಗ ಸಮಾಜದ ಕುಂದು ಕೊರತೆಗಳನ್ನು ಆಲಿಸಲಾಯಿತು. 

  ಎರಡನೇ ಹಂತದ ಅಭಿಯಾನದಲ್ಲಿ ತಾಲೂಕಿನ ಇನ್ನುಳಿದ ಗ್ರಾಮಗಳಿಗೆ ಭೇಟಿ ನೀಡುವುದಾಗಿ ಸಂಘಟಕರು ಭರವಸೆ ನೀಡಿದರು. ಈ ಮಧ್ಯೆ ಚಿಮ್ಮಲಗಿ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್, ಬಾಬು ಜಗಜೀವನರಾಮ ಅವರ ಜಯಂತಿಯನ್ನು  ಆಚರಿಸಲಾಯಿತು. ಯಮನಪ್ಪ ಗುಳೇದಗುಡ್ಡ, ನೀಲಪ್ಪ ಚಿಮ್ಮಲಗಿ, ರವಿಕುಮಾರ ಹಂಗರಗಿ, ಮಂಜುನಾಥ ಹೊಸಮನಿ, ಯಲ್ಲಪ್ಪ ಕಟಗೇರಿ, ಸಿದ್ದು ಗುಳೇದಗುಡ್ಡ, ಪರಶುರಾಮ ಹುಬ್ಳೀಕರ್, ಮಂಜುನಾಥ ತೋಗುಣಸಿ, ಚಂದಪ್ಪ ಪರ್ವತಿ ಸೇರಿದಂತೆ 36 ಗ್ರಾಮಗಳ ಮಾತಂಗ ಸಮಾಜದ ಮುಖಂಡರು ಜಾಗೃತಿ ಅಭಿಯಾನದಲ್ಲಿ ಭಾವಹಿಸಿದ್ದರು. ಮಾತಂಗ ಸಮಾಜದ ಮೊದಲ ಹಂತದ ಜಾಗೃತಿ ಅಭಿಯಾನವನ್ನು ಮಾತಂಗ ಮಹಾಸಭಾದ ಸದಸ್ಯರು ತಾಲೂಕಿನ ಮಂಗಳಗುಡ್ಡದ ಮಂಗಳಮ್ಮ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಸುದ್ದಿ ಓದಿ