ಪ್ರತಿಯೊಬ್ಬರು ಮನೆಯಲ್ಲಿ ಜಾನುವಾರುಗಳನ್ನು ಸಾಕುವುದು ಅವಶ್ಯ; ಪ್ರಭುನೀಲಕಂಠ ಸ್ವಾಮೀಜಿ ಕರೆ: ಬೃಹತ್ ಜಾನುವಾರ ಪ್ರದರ್ಶನ ಜಾತ್ರೆ
ಲೋಕದರ್ಶನ ವರದಿ
ಬೈಲಹೊಂಗಲ 24: ಕೃಷಿ ಪ್ರಧಾನ ಭಾರತ ದೇಶದಲ್ಲಿ ಜಾನುವಾರುಗಳ ಸಂಖ್ಯೆ ಇಳಿಮುಖವಾಗುತ್ತಿದ್ದು ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಜಾನುವಾರುಗಳನ್ನು ಸಾಕುವುದು ಅತಿ ಅವಶ್ಯವಾಗಿದೆ ಎಂದು ಶಾಖಾ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ ಕರೆ ನೀಡಿದರು.
ಅವರು ಬುಧವಾರ ಪಟ್ಟಣದ ಐತಿಹಾಸಿಕ ಮರಡಿಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ಈಶಪ್ರಭು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ನಾಡಿನ ಸಮಸ್ತ ರೈತರ ಆಶ್ರಯದಲ್ಲಿ ಬೃಹತ್ ಜಾನುವಾರ ಪ್ರದರ್ಶನ ಜಾತ್ರೆಗೆ ಚಾಲನೆ ನೀಡಿ ಮಾತನಾಡಿ, ಇಂತಹ ಕಾರ್ಯಕ್ರಮ ಆಯೋಜಿಸುವದರಿಂದ ರೈತರಿಗೆ ಪ್ರೋತ್ಸಾಹ ನೀಡಲು ಸಹಕಾರಿಯಾಗಲಿದೆ ಎಂದರು.
ಚಿತ್ರನಟ ಶಿವರಂಜನ ಬೋಳನ್ನವರ, ಸವದತ್ತಿ ಎಪಿಎಂಸಿ ಸದಸ್ಯ ಎಫ್.ಎಸ್.ಸಿದ್ದನಗೌಡ್ರ, ಪುರಸಭೆ ಮಾಜಿ ಉಪಾಧ್ಯಕ್ಷ ಮಹಾಂತೇಶ ತುರಮರಿ ಮಾತನಾಡಿ, ಯಾಂತ್ರಿಕ ಕಾಲದೊಳಗೆ ಸಿಲುಕಿದ ಇಂದಿನ ಯುವ ಪೀಳಿಗೆ ಪಶು ಸಂಪತ್ತನ್ನು ಮರೆಯುತ್ತಿದ್ದಾರೆ. ಅವರಲ್ಲಿ ಆಸಕ್ತಿ ಮೂಡಿಸಿ ಪಶು ಸಂಪತ್ತಿನ ಬಗ್ಗ ಜಾಗೃತಿ ತರುವ ಮೂಲಕ ದೇಶಿಯ ದನಕರುಗಳನ್ನು ಉಳಿಸಿ ಬೆಳೆಸುವ ಗುರುತರ ಜವಾಬ್ದಾರಿ ಸಮಾಜದ ಮುಖಂಡರ ಮೇಲಿದೆ ಎಂದರು.
ಜಾತ್ರೆಗಳು ಮನರಂಜನೆಗೆ ಸೀಮಿತವಾಗದೇ ಇಂತಹ ಜಾನುವಾರು ಜಾತ್ರೆಗಳನ್ನು ಹಮ್ಮಿಕೊಳ್ಳುವ ಮೂಲಕ ಹೊಸ ಪಶು ತಳಿಗಳ ಅಭಿವೃದ್ದಿ ಜೊತೆಗೆ ಯುವ ಕೃಷಿಕರಲ್ಲಿ ನವ ಚೈತನ್ಯವನ್ನು ಮೂಡಿಸುವ ಮೂಲಕ ಕೃಷಿ ಅಭಿವೃದ್ದಿ ಪರ ಚಟುವಟಿಕೆಗಳನ್ನು ಕೈಗೊಳ್ಳಲು ಸಹಾಯಕವಾಗುತ್ತದೆ. ಆದ್ದರಿಂದ ಬರುವ ದಿನಗಳಲ್ಲಿ ಎಪಿಎಂಸಿ ಹಾಗೂ ಪಶುಸಂಗೋಪನಾ ಇಲಾಖೆಯಿಂದ ಸರ್ಕಾರದ ಕಾರ್ಯಕ್ರಮವಾಗಿ ಹಮ್ಮಿಕೊಳ್ಳುವುದರ ಮೂಲಕ ಬೈಲಹೊಂಗಲ ಜಾನುವಾರು ಪೇಟೆ ಗತವೈಭವವನ್ನು ಮರಳಿಸಲು ಅಧಿಕಾರಿಗಳು ಪ್ರಯತ್ನ ಮಾಡಬೇಕೆಂದು ಆಗ್ರಹಿಸಿದರು.
ಎಪಿಎಂಸಿ ಕಾರ್ಯದರ್ಶಿ ಎಸ್.ಎಸ್.ಅರಳಿಕಟ್ಟಿ ಮಾತನಾಡಿ, ಜಾನುವಾರು ಪ್ರದರ್ಶನ ಜಾತ್ರೆಗಳು ಬೇರೆ ಜಿಲ್ಲೆಗಳಲ್ಲಿ ಸರ್ಕಾರದ ಮಟ್ಟದಲ್ಲಿ ಆಚರಣೆ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು ಈ ಕುರಿತು ಜನಪ್ರತಿನಿಧಿಗಳು ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಮುಂದಿನ ಜಾನುವಾರು ಜಾತ್ರೆಯನ್ನು ಸರ್ಕಾರದ ಮಟ್ಟದಲ್ಲಿ ಆಚರಿಸುವ ಭರವಸೆ ನೀಡಿದರು.
ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಪುರಸಭೆ ಅಧ್ಯಕ್ಷ ಬಾಬು ಕುಡಸೋಮನ್ನವರ, ಎಪಿಎಂಸಿ ಅಧ್ಯಕ್ಷ ಸತ್ಯಪ್ಪ ಭರಮನ್ನವರ, ಮಹಾಂತೇಶ ಮತ್ತಿಕೊಪ್ಪ, ಶ್ರೀಶೈಲ ಹಂಪಿಹೊಳಿ, ಸಣ್ಣಪುಂಡಲೀಕ ಹೋಟಿ ಮಡಿವಾಳಪ್ಪ ಹೋಟಿ, ರುದ್ರ್ಪ ಹೊಸಮನಿ, ಮುರಗೇಶ ಗುಂಡ್ಲುರ, ಶಿವಪ್ಪ ಲಿಂಬೇನ್ನವರ, ಬಸಪ್ಪ ಜಂಬಗಿ, ಅಣ್ಣಪ್ಪ ಅರಳಿಕಟ್ಟಿ, ಶಂಕರ ಸುಣಗಾರ, ಜಗದೀಶ ಜಂಬಗಿ,ಅಶೋಕ ಮತ್ತಿಕೊಪ್ಪ, ವಿಠ್ಠಲ ದಾಸೋಗ, ರಮೇಶ ತೋಲಗಿ, ಮಾರುತಿ ತಿಗಡಿ, ಶ್ರೀಶೈಲ ಹಂಪಿಹೊಳಿ, ಸೋಮನಾಥ ಸೊಪ್ಪಿಮಠ, ಶೇಖಪ್ಪ ಜತ್ತಿ, ಮಲ್ಲಿಕಾರ್ಜುನ ಹುಂಬಿ, ಉಳವಪ್ಪ ಉಪ್ಪಿನ, ಸೇರಿದಂತೆ ನೂರಾರು ರೈತರು, ಎಪಿಎಂಸಿ ಸಿಬ್ಬಂದಿ ವರ್ಗ, ಸಾರ್ವಜನಿಕರು ಇದ್ದರು.
ಎಪಿಎಂಸಿ ಸಹಾಯಕ ಅಧಿಕಾರಿ ಸುನೀಲ ಗೊಡಬೋಲೆ ನಿರೂಪಿಸಿ, ವಂದಿಸಿದರು.
ಗಮನ ಸೆಳೆದ ಹೋರಿಗಳು: ಜಾನುವಾರು ಪ್ರದರ್ಶನ ಜಾತ್ರೆಯಲ್ಲಿ ವಿವಿಧ ತಳಿಗಳ ಜಾನುವಾರುಗಳು ನೋಡುಗರ ಕಣ್ಮಣ ಸೆಳೆದವು.