ಪ್ರತಿಯೊಬ್ಬರಿಗೂ ಕಾನೂನಿನ ತಿಳಿವಳಿಕೆ ಅಗತ್ಯ: ಬಂಡೆ
ಇಂಡಿ: ಒಬ್ಬ ಮನುಷ್ಯ ಸಮಾಜದಲ್ಲಿ ನೆಮ್ಮದಿಯುತ ಜೀವನ ನಡೆಸಲು ಕಾನೂನಿನ ತಿಳಿವಳಿಕೆ ಎಂಬುದು ಆಹಾರ, ನೀರು ಮತ್ತು ಗಾಳಿಯಷ್ಟೇ ಅಗತ್ಯವಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಕಾನೂನು ಸೇವೆಗಳ ದಿನ ಮತ್ತು ವಿಶ್ವ ಉರ್ದು ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಶಿಕ್ಷಕ ಎಸ್.ಎಸ್. ಅರಬ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನವನ್ನು ನಿರುಪಯುಕ್ತವಾಗಿ ಕಳೆಯದೇ ಕಾನೂನನ್ನು ಸರಿಯಾಗಿ ತಿಳಿದುಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾಗಿಸಬೇಕು ಎಂದು ಹೇಳಿದರು.
ಶಿಕ್ಷಕ ಎಸ್.ಎಂ. ಮಕಾನದಾರ ಮಾತನಾಡಿ, ಅಲ್ಲಮ ಇಕ್ಬಾಲ್ ಒಬ್ಬ ಶ್ರೇಷ್ಠ ಉರ್ದು ಕವಿ ಮತ್ತು ಚಿಂತಕ. ಅವರು ತಮ್ಮ ಸ್ವಯಂ ಪರಿಕಲ್ಪನೆಯ ಮೂಲಕ ಉಪಖಂಡದ ಯುವಜನತೆಗೆ ಹೊಸ ಜೀವನವನ್ನು ನೀಡಿ, ಉರ್ದು ಭಾಷೆಯ ಶ್ರೇಷ್ಠತೆಯನ್ನು ಎತ್ತಿ ಹಿಡಿದವರಾಗಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕಿ ನೂರಜಹಾನ ನದಾಫ ಶಾಲೆಗೆ 3 ಡಜನ್ ಸ್ಟೀಲ್ ಗ್ಲಾಸ್‌ಗಳನ್ನು ಕಾಣಿಕೆಯಾಗಿ ನೀಡಿದರು. ಶಾಲಾ ಮುಖ್ಯ ಗುರು ಎ.ಎಂ. ಬೆದ್ರೇಕರ ಅಧ್ಯಕ್ಷತೆವಹಿಸಿ ಮಾತನಾಡಿದರು.
ಎಸ್.ಎಚ್. ಮೈದರಗಿ, ಎನ್.ಬಿ. ಚೌಧರಿ, ಎಸ್.ಪಿ. ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.