ಪ್ರತ್ಯೇಕ ಸಹಕಾರ ಸಚಿವಾಲಯ ಸ್ಥಾಪನೆ: ಮೋದಿಜಿಗೆ ಹೊಸಮಠ ಅಭಿನಂದನೆ
ಗೋಕಾಕ 09: ಕೇಂದ್ರ ಸರ್ಕಾರದಲ್ಲಿ ಪ್ರತ್ಯೇಕ ಸಹಕಾರ ಸಚಿವಾಲಯ ಸ್ಥಾಪನೆಯಾಗಿದ್ದು ರಾಜ್ಯದ ಸಹಕಾರಿಗಳ ಕನಸು ನನಸಾಗಿದೆ. ಬಹುದಿನದ ಬೇಡಿಕೆಯನ್ನು ಈಡೇರಿಸಿದ ಪ್ರಧಾನಿ ನರೇಂದ್ರ ಮೋದಿಜಿ ಅವರಿಗೆ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ನಿರ್ದೇಶಕರಾದ ಡಾ.ಸಂಜಯ ಹೊಸಮಠ ಅವರು ಅಭಿನಂದನೆ ಸಲ್ಲಿಸಿದರು.
ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಸನ್2014 ಮತ್ತು ಸನ್2020ರ ರಾಷ್ಟ್ರೀಯ ಸಹಕಾರ ಒಕ್ಕೂಟ ಎನ್.ಸಿ.ಯ್ಯೂ.ಐ (ನ್ಯಾಷನಲ್ ಕೋ.ಆಪರೇಟಿವ್ ಯೂನಿಯನ್ ಆಫ್ ಇಂಡಿಯಾ) ಇದರ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಹಾಮಂಡಳದಿಂದ ಡಾ.ಹೊಸಮಠರು ಭಾಗಿಯಾಗಿ ಕೇಂದ್ರದಲ್ಲಿ ಪ್ರತ್ಯೇಕ ಸಹಕಾರ ಸಚಿವಾಲಯದ ಅಗತ್ಯವಿದ್ದ ವಿಷಯ ಮಂಡನೆ ಮಾಡಿ ಮನವಿ ಸಲ್ಲಿಸಿದ್ದೆ. ಸಹಕಾರದಿಂದ ಸಮೃದ್ಧಿ ಎಂಬ ತತ್ವಕ್ಕೆ ಕೇಂದ್ರ ಸರಕಾರದ ಕ್ರಮ ನಿಜಕ್ಕೂ ಶ್ಲಾಘನೀಯ. ಈ ಒಂದು ಐತಿಹಾಸಿ ಕನಿರ್ಣಯದಿಂದ ದೇಶದಲ್ಲಿ ಸಹಕಾರ ಸಂಘಗಳು ಇನ್ನಷ್ಟು ಬಲಿಷ್ಠ ಹಾಗೂ ಅಭಿವೃದ್ಧಿ ಹೊಂದಲು ಅನುಕೂಲಕವಾಗುತ್ತದೆ. ಒಂದು ಗ್ರಾಮಕ್ಕೆ ಒಂದು ಸಹಕಾರ ಸಂಘ ಎಂಬ ಕಲ್ಪನೆಯನ್ನು ಹೊಂದಿದ ರಾಷ್ಟ್ರಪಿತ ಮಹಾತ್ಮಗಾಂಧಿಯವರ ಆಶಯ ಸಹ ಈ ಮೂಲಕ ಇಡೇರಿದಂತಾಗಿದೆ ಎಂದು ತಿಳಿಸಿದ್ದಾರೆ.
ಸನ್2020ರಲ್ಲಿ ಡಾ.ಹೊಸಮಠ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ನಿಯೋಗವು ಕೇಂದ್ರ ವೃತ್ತ ಸಚಿವಾಲಯ, ಕೃಷಿ ಹಾಗೂ ಸಹಕಾರ ಸಚಿವಾಲಯ ಮತ್ತು ಕೇಂದ್ರ ನೇರತೆರಿಗೆ ವಿಭಾಗದ ಸಿ.ಬಿ.ಡಿ.ಟಿ (ಸೆಂಟರಲ್ ಬೋರ್ಡ ಆಫ್ ಡೈರೆಕ್ಟ್ ಟ್ಯಾಕ್ಸಸ್) ಕಚೇರಿಗಳಿಗೆ ಭೇಟಿ ನೀಡಿ ಕೇಂದ್ರದಲ್ಲಿ ಪ್ರತ್ಯೇಕ ಸಹಕಾರ ಸಚಿವಾಲಯದ ಬೇಡಿಕೆಯ ಮನವಿಯನ್ನು ಆಯಾ ವಿಭಾಗದ ಮುಖ್ಯಸ್ಥರಿಗೆ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.