ಇಂಡಿ

ಕುಡಿಯುವ ನೀರಿನ ಸಮಸ್ಯೆ ಕುರಿತು ಅಗತ್ಯ ಕ್ರಮ ಅವಶ್ಯ: ಗಡಾದೆ

ಕುಡಿಯುವ ನೀರಿನ ಸಮಸ್ಯೆ ಕುರಿತು ಅಗತ್ಯ ಕ್ರಮ ಅವಶ್ಯ: ಗಡಾದೆ


ಇಂಡಿ: ಬೇಸಿಗೆಯಲ್ಲಿ ಬಿಸಿಲಿನ ತಾಪ ದಿನೇ ದಿನೇ ಏರಿಕೆಯಾಗುತ್ತಿದ್ದು ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಬರುವ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಲಕ್ಷಣಗಳು ಕಂಡು ಬರುತ್ತಿದ್ದು ಸಮಸ್ಯೆ ಇರುವೆಡೆ ಅಗತ್ಯ ಕ್ರಮ ಅವಶ್ಯ ಎಂದು ಕಂದಾಯ ಉಪವಿಭಾಗಾಧಿಕಾರಿ ರಾಮಚಂದ್ರ ಗಡಾದೆ ಹೇಳಿದರು.  

ಅವರು ಶುಕ್ರವಾರ ಪಟ್ಟಣದ ತಾಲೂಕು ವಿಧಾನಸೌಧದ ಕಂದಾಯ ಉಪವಿಬಾಗಾಧಿಕಾರಿಗಳ ಕಚೇರಿಯಲ್ಲಿ ಇಂಡಿ ತಾಲೂಕಿನ ಕುಡಿಯುವ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳ ಮತ್ತು ಪಿಡಿಓಗಳ ಸಭೆಯಲ್ಲಿ ಮಾತನಾಡಿದರು.  

ಅಡವಿ ವಸತಿ ಮತ್ತು ಸಣ್ಣ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗಬಹುದು. ದೊಡ್ಡ ಗ್ರಾಮಗಳಿಗೆ ಬಹು ಹಳ್ಳಿ ಕುಡಿಯುವ ನೀರಿನ ಯೋಜನೆಯಲ್ಲಿ ಕೆರೆಗಳ ಮುಖಾಂತರ ನೀರು ಸರಬರಾಜು ಮಾಡಲಾಗುತ್ತದೆ. ಭೀಮಾ ತೀರದ ಗ್ರಾಮಗಳಲ್ಲೂ ಕುಡಿಯುವ ನೀರಿನ ತೊಂದರೆಯಾಗಬಹುದು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಪಂ ಮಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಬೇಕೆಂದರು.  

ಗ್ರಾಮಾಂತರ ಪ್ರದೇಶದಲ್ಲಿ ಎಲ್ಲೂ ನೀರಿನ ಸಮಸ್ಯೆ ಇಲ್ಲ. ಯಾವುದೇ ಗ್ರಾಮದಲ್ಲಿ ಬೋರವೆಲ್ ನೀರು ಕಡಿಮೆಯಾದರೆ ರೀ ಬೋರ್ ಮಾಡಲಾಗುವದು. ಅಗತ್ಯವಿದ್ದರೆ ಟ್ಯಾಂಕರ ಮೂಲಕ ನೀರು ಸರಬರಾಜಗೆ ಕ್ರಮ ತೆಗೆದುಕೊಳ್ಳಲಾಗುವದು. ರಿಪೇರಿಯಾಗಬೇಕಾಗಿರುವ ಶುದ್ಧ ನೀರಿನ ಘಟಕಗಳನ್ನು  ದುರಸ್ತಿಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವದು ಎಂದರು. 

ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಕೃಷ್ಣಾ ಕಾಲುವೆಯಿಂದ ಕೆರೆಯಲ್ಲಿ ನೀರು ಸಂಗ್ರಹಿಸಲಾಗುತ್ತಿದ್ದು ಕಾಲುವೆ ಮೇಲಿನ ಅನಧಿಕೃತ ಪಂಪಶೆಟ್ಟುಗಳನ್ನು ತೆರವುಗೊಳಿಸಲು ಕ್ರಮ ತೆಗೆದುಕೊಳ್ಳಲು ಹೆಸ್ಕಾ ಅಧಿಕಾರಿಗಳಿಗೆ ತಿಳಿಸಿದರು.  

ಹೆಸ್ಕಾಂ ಅಧಿಕಾರಿಗಳು ತಂಡ ರಚಿಸಿ ಕ್ರಮ ತೆಗೆದುಕೊಳ್ಳುವದಾಗಿ ತಿಳಿಸಿದರು.  

ಇದೇ ವೇಳೆ ಚೋರಗಿ, ಚವಡಿಹಾಳ, ಬಬಲಾದ  ಗ್ರಾಮಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಕುರಿತು ಜನರ ಜೊತೆ ಚರ್ಚಿಸಿದರು.  

ಯುಕೆಪಿ ಇಇ ಮನೋಜಕುಮಾರ ಗಡಬಳ್ಳಿ, ತಾ.ಪಂ ಇಓ ಸುನೀಲ ಮದ್ದೀನ, ತಹಸೀಲ್ದಾರ ಸಿ.ಎಸ್‌.ಕುಲಕರ್ಣಿ, ಚಿಕ್ಕ ನೀರಾವರಿಯ ಬಸವರಾಜ ಬಿರಾದಾರ, ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಮಂಡಳಿಯ ಆರ್‌.ಎಸ್ ರುದ್ರವಾಡಿ, ಹೆಸ್ಕಾಂ ಎಸ್‌.ಆರ್‌. ಮೆಡೆದಾರ, ಪಿಡಿಓ ಸಿ.ಜಿ.ಪಾರೆ, ಬಸವರಾಜ ಬಬಲಾದ, ಪ್ರಕಾಶ ರಾಠೋಡ, ಎಚ್‌.ವಿ. ರಜಪೂತ, ಬಾಬು ಉಮದಿ, ಗ್ರಾ.ಪಂ. ಸದಸ್ಯರಾದ ಯಲಗೊಂಡ ಪೂಜಾರಿ, ಪ್ರಕಾಶ ಹಲಸಂಗಿ, ಸಾಹೇಬಗೌಡ ಬಿರಾದಾರ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ