ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಮಂಜುನಾಥಗೌಡ
ರಾಣೇಬೆನ್ನೂರು 05: ಹಸಿರಿದ್ದರೆ ಉಸಿರು. ಆರೋಗ್ಯಯುತ ಜೀವನ ಮತ್ತು ಬದುಕು ಸುಂದರವಾಗಿರಬೇಕಾದರೆ ಇಂದು ಹಸಿರು ಪರಿಸರ ಅಧಿಕ ಪ್ರಮಾಣದಲ್ಲಿ ಬೆಳೆಸಬೇಕಾದ ಅಗತ್ಯವಿದೆ ಎಂದು ಎಸ್ ಕೆ ಡಿ ಆರ್ ಡಿ ಪಿ ತಾಲೂಕ ಯೋಜನಾಧಿಕಾರಿ ಮಂಜುನಾಥಗೌಡ ಎಂ. ಹೇಳಿದರು.
ಬುಧವಾರ ತಾಲೂಕಿನ ಅಂತರವಳ್ಳಿ ಗ್ರಾಮದ ಬಿ. ಎ. ಜೆ. ಎಸ್. ಎಸ್. ಪ್ರೌಢಶಾಲೆಯಲ್ಲಿ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಆಯೋಜಿಸಿದ್ದ, ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳು ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಶಿಕ್ಷಣ ಕಷ್ಟೇ ಸೀಮಿತವಾಗದೆ, ಪರಿಸರ ವಿನಾಶದಿಂದಾಗುವ ಪರಿಣಾಮ ಮತ್ತು ಪರಿಸರ ಸಮತೋಲನತೆಗೆ ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳು ಕುರಿತಂತೆ ಚಿಂತಿಸಬೇಕಾದ ಅಗತ್ಯವಿದೆ ಎಂದರು.
ವಿದ್ಯಾರ್ಥಿಗಳು ಭವ್ಯ ಭಾರತದ ಭಾವಿ ಪ್ರಜೆಗಳು, ಸಮಾಜದ ಸ್ವಸ್ಥತೆಗೆ ಪರಿಸರ ಉಳಿಸಿ ಬೆಳೆಸುವ ಅಗತ್ಯವಿದ್ದು, ಪರಿಸರದ ರಕ್ಷಣೆಗಾಗಿ ತಮ್ಮ ಸಾಮಾಜಿಕ ಕಳಕಳಿ ಮೆರೆಯಲು ಮುಂದಾಗಬೇಕು. ಎಂದ ಅವರು, ವಿದ್ಯಾರ್ಥಿ ದೆಸೆಯಿಂದಲೇ, ಸಾಮಾಜಿಕ ಸೇವೆ ಆರಂಭವಾದಾಗ ಮಾತ್ರ ವ್ಯಕ್ತಿತ್ವವನ್ನು ನೀರೂಪಿಕೊಳ್ಳಲು ಸಾಧ್ಯವಾಗುವುದು ಎಂದರು.
ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಪ್ರವೀಣ್ ಎನ್. ಕೆ. ಅವರು ಪರಿಸರ ಮಾಹಿತಿ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಗ್ರಾಮೀಣ ಪ್ರದೇಶದಲ್ಲಿರುವ ನಮ್ಮ ಶಾಲೆಯು, ಮತ್ತು ಅದರ ಆಡಳಿತ ಮಂಡಳಿಯ ಮುಖ್ಯಸ್ಥರು ಶಾಲೆಯ ಆರಂಭದಿಂದಲೂ, ಶಾಲಾವರಣದಲ್ಲಿ ಸುಂದರ ಪರಿಸರ ನಿರ್ಮಿಸಲು ಮುಂದಾಗಿದ್ದರು. ಪರಿಣಾಮ ಇಂದು ಪ್ರೌಢಶಾಲೆ, ಶಾಂತ ವಾತಾವರಣದಲ್ಲಿದ್ದು ಶೈಕ್ಷಣಿಕ ಪ್ರಗತಿಗೆ, ಮಕ್ಕಳ ವಿದ್ಯಾರ್ಜನೆಗೆ ಮುಖ್ಯ ಕಾರಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಪ್ರೇಮಿ ನಾಗರಾಜ ಬಣಕಾರ್, ಕೃಷಿ ವಲಯ ಮೇಲ್ವಿಚಾರಕ ರಮೇಶ, ಸೇವಾ ಪ್ರತಿನಿಧಿ ಭಾಗ್ಯ ವಲಯ ಮೇಲ್ವಿಚಾರಕಿ ಶ್ರೀಮತಿ ಸವಿತಾ, ಪ್ರೌಢ ಶಾಲೆಯ ಶಿಕ್ಷಕರಾದ ರವಿ ಗೌಡ ಎಸ್, ಬಿ.ಕೆ.ವಿದ್ಯಾಧರ, ಎಸ್ ಎಸ್ ಮೋಡಬಾಗಿಲ, ರುಕ್ಷಾನಾಬಾನು ಎಂ, ಆರ್., ಮಂಜುನಾಥ್ ಎಂ.ವೈ.ಸೇರಿದಂತೆ ಗ್ರಾಮದ ಅನೇಕ ಗಣ್ಯರು, ಒಕ್ಕೂಟದ ಮತ್ತು ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು. ಪರಿಸರ ರಕ್ಷಣೆ ಮತ್ತು ಜಾಗೃತಿ ಮಾಹಿತಿ ಕುರಿತಂತೆ ಸಮಾರಂಭಕ್ಕೂ ಮುನ್ನ, ನೂರಾರು ವಿದ್ಯಾರ್ಥಿಗಳೊಂದಿಗೆ ಗ್ರಾಮದಲ್ಲಿ ಜಾಗೃತಿ ಮೆರವಣಿಗೆ ನಡೆಸಲಾಯಿತು.