ಪರಿಸರ ನೈರ್ಮಲ್ಯವಾಗಿಡುವುದು ಪ್ರತಿಯೊಬ್ಬರ ಹೊಣೆ : ಹಂಪಿಹೊಳಿ
ಗುಳೇದಗುಡ್ಡ.21: ನಾವು ವಾಸಿಸುವ ನಮ್ಮ ಸುತ್ತಮುತ್ತಲ ಪರಿಸರ ಯಾವತ್ತೂ ಸುಚಿಯಾಗಿರಬೇಕು. ಹಾಗಾದಾಗ ಮಾತ್ರ ನಾವು ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ. ಪರಿಸರವನ್ನು ನೈರ್ಮಲ್ಯವಾಗಿಡುವುದು ಪ್ರತಿಯೊಬ್ಬರ ಹೊಣೆಯೂ ಆಗಿದೆ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಕೆ.ಪಿ.ಹಂಪಿಹೊಳಿ ಹೇಳಿದರು.
ಸೋಮವಾರ ವಿಶ್ವ ಸೊಳ್ಳೆ ದಿನಾಚರಣೆ ಅಂಗವಾಗಿ ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕಟಗೇರಿ, ಗ್ರಾಪಂ ಹಂಗರಗಿ, ಸರ್ಕಾರಿ ಪ್ರೌಢಶಾಲೆ ಹಂಗರಗಿ ಇವುಗಳ ಸಹಯೋಗದಲ್ಲಿ ತಾಲೂಕಿನ ಹಂಗರಗಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಾಥಾ ಮತ್ತು ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಪರಿಸರದಲ್ಲಿ ಹಲವಾರು ಕೀಟ ಜನ್ಯಗಳು ನಮ್ಮ ಜೊತೆಗೆ ಜೀವಿಸುತ್ತವೆ. ಕೇವಲ ಮೂರು ಜಾತಿಯ ಸೊಳ್ಳೆಗಳು ಕಚ್ಚುವುದರಿಂದ ಐದು ರೋಗಗಳು ಹರಡುತ್ತವೆ. ಈ ಐದು ರೋಗಗಳ ನಿಯಂತ್ರಣ ಒಂದು ಸವಾಲ್ ಆಗಿದೆ. ಅದಕ್ಕಾಗಿ ನಾವು ವಾಸಿಸುವ ಪರಿಸರ ಸುಚಿಯಾಗಿರಬೇಕು. ನಮ್ಮ ಮನೆಯ ಸುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಹಾಗೂ ಸೊಳ್ಳೆಗಳು ಕಚ್ಚದಂತೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಸೊಳ್ಳೆಗಳಿಂದ ಹರಡುವ ರೋಗಗಳನ್ನು ಸಂಪೂರ್ಣ ನಿಯಂತ್ರಣ ಮಾಡುವುದು ನಮ್ಮ ಇಲಾಖೆಯ ಮುಖ್ಯ ಗುರಿಯಾಗಿದೆ ಎಂದರು.
ತಾಲೂಕು ಮಲೇರಿಯಾ ತಾಂತ್ರಿಕ ಮೇಲ್ವಿಚಾರಕ ಎಂ.ಎಸ್.ಅಂಗಡಿ ಮಾತನಾಡಿ, 2025ಕ್ಕೆ ಸೊಳ್ಳೆಗಳಿಂದ ಹರಡುವ ರೋಗಗಳ ಸಂಪೂರ್ಣ ನಿಯಂತ್ರಣ ಇಲಾಖೆಯ ಗಿರಿಯಾಗಿದೆ. ಇಂದಿನಿಂದಲೇ ನಾವು ಈ ರೋಗಗಳ ಬಗ್ಗೆ ಜಾಗ್ರತವಹಿಸಬೇಕಾಗಿದೆ ಎಂದು ಶಾಲಾ ಮಕ್ಕಳಿಗೆ ತಿಳಿಸಿದರು.
ಮಾಜಿ ಎಪಿಎಂಸಿ ಸದಸ್ಯ ಪ್ರಕಾಶ ಮೇಟಿ ಜಾಥಾಕ್ಕೆ ಚಾಲನೆ ನೀಡಿ ನಂತರ ಮಾತನಾಡಿ, ನಮ್ಮ ಗ್ರಾಮದ ಜನತೆಗೆ ಸೊಳ್ಳೆಗಳ ಬಗ್ಗೆ ಹಾಗೂ ಸೊಳ್ಳೆಗಳಿಂದ ಹರಡುವ ರೋಗಗಳ ಕುರಿತು ಮಾಹಿತಿ ಪ್ರತಿ ವರ್ಷ ನೀಡಲಾಗುತ್ತಿದೆ. ಹಾಗೂ ನಮ್ಮ ಗ್ರಾಮದ ಪ್ರತಿ ಕುಟುಂಬ ದವರಿಗೂ ಆರೋಗ್ಯ ಇಲಾಖೆಯಿಂದ ಸೊಳ್ಳೆ ಪರದೆ ವಿತರಿಸಲಾಗಿದೆ. ನಾವು ಇಂದಿನಿಂದಲೇ ಎಚ್ಚರಿಕೆವಹಿಸಿ ಸೊಳ್ಳೆಗಳಿಂದ ಹರಡುವ ರೋಗಗಳಿಂದ ಮುಕ್ತರಾಗೋಣ ಎಂದರು.
ತಾಪಂ ಮಾಜಿ ಅಧ್ಯಕ್ಷ ಪ್ರಮೋದ ಕವಡಿಮಟ್ಟಿ ಮಾತನಾಡಿ, ಗ್ರಾಮದಲ್ಲಿ ಆರೋಗ್ಯ ಇಲಾಖೆಯಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಬರಲಾಗಿದೆ. ಆದರೂ ನಮ್ಮಲ್ಲಿ ಇನ್ನೂ ಸ್ವಚ್ಚತೆಯ ಬಗ್ಗೆ ಹೆಚ್ಚಿನ ಅರಿವು ಕಂಡುಬರುತ್ತಿಲ್ಲ. ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಪಿಡಿಓ ರಾಮಚಂದ್ರ ಮೈತ್ರಿ ಮಾತನಾಡಿ, ಗ್ರಂದಲ್ಲಿ ಪಂಚಾಯತಿಯಿಂದಲೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆದರೂ ಸಾರ್ವಜನಿಕರಲ್ಲಿ ಸಹ ಸ್ವಯಂ ಅರಿವು ಬೇಕಾಗುತ್ತದೆ. ಆರೋಗ್ಯ ಇಲಾಖೆಯೊಂದಿಗೆ ಕೈ ಜೊಡಿಸಿ ಕೆಲಸ ಮಾಡಲಾಗುತ್ತಿದೆ ಎಂದರು. ಹಿರಿಯ ಆರೋಗ್ಯ ನಿರೀಕ್ಷಕ ಬಿ.ಎಸ್.ಮದ್ಲಿ ಇದ್ದರು. ಗ್ರಾಪಂ ಸದಸ್ಯ ಮಲ್ಲಪ್ಪ ಕುರಿ, ಫಕೀರಪ್ಪ ಉಗಲವಾಟ, ಹಣಮಂತ ಬಿಳೇಕಲ್, ಬಸವರಾಜ ಹಾನಾಪೂರ, ವೈದ್ಯಾಧಿಕಾರಿ ಡಾ.ಕೆ.ಟಿ.ಗಾಜಿ, ಡಾ.ಜ್ಯೋತಿ ಶಿವನಾಯ್ಕರ್ ಆರೋಗ್ಯ ಇಲಾಖಾ ಸಿಬ್ಬಂದಿ, ಶಿಕ್ಷಕರು, ಗ್ರಾಮದ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸಿ.ವೈ.ಸಂಗಮ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಎಸ್.ಬಿ. ಚಿಕ್ಕಲಕಿ ನಿರೂಪಿಸಿದರು. ಜೆ.ಬಿ. ಲಕ್ಕುಂಡಿ ವಂದಿಸಿದರು.
ಜಾಥಾ : ಕಾರ್ಯಕ್ರಮಕ್ಕೂ ಮೊದಲು ಶಾಲಾ ಮಕ್ಕಳು, ಶಿಕ್ಷಕರು, ಗ್ರಾಪಂ ಸಿಬ್ಬಂದಿ, ಅಂಗನವಾಡಿ, ಆಶಾ ರ್ಕಾಕರ್ತೆಯರು, ಗ್ರಾಮದ ಪ್ರಮುಖರ ಸಹಭಾಗಿತ್ವದಲ್ಲಿ ಗ್ರಾಮದ ಬೀದಿಗಳಲ್ಲಿ ಘೋಷಣೆಗಳ ನಾಮಫಲಕಗಳೊಂದಿಗೆ ಘೋಷಣೆ ಕೂಗುತ್ತ ಸಾರ್ವಜನಿಕರಿಗೆ ಶಾಲಾ ಮಕ್ಕಳು ಅರಿವು ಮೂಡಿಸಿದರು.