ಇಂಡಿ

ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯಕ್ರಮ

ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯಕ್ರಮ

ಇಂಡಿ: ಮತದಾರರ ಪಟ್ಟಿಗೆ 18 ವರ್ಷ ಮೇಲ್ಪಟ್ಟ ನೂತನ ಮತದಾರರನ್ನು ಮತ್ತು ಹೆಸರು ಬಿಟ್ಟು ಹೋಗಿದ್ದರೆ, ಡಿಲಿಟ್ ಆಗಿದ್ದರೆ, ಸಾಕ್ಷಿ ಪಡೆದು ಮತದಾರ ಪಟ್ಟಿಯಲ್ಲಿ ಸೇರಿಸಬೇಕು. ನ 8 ರಿಂದ ಡಿ. 12ರ ವರೆಗೆ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಡೆಯುತ್ತಿದೆ ಎಂದು ಕಂದಾಯ ಉಪವಿಭಾಗಾಧಿಕಾರಿ ರಾಮಚಂದ್ರ ಗಡದೆ ಹೇಳಿದರು. 

ಬುಧವಾರ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ವಿಜಯಪುರ ತಾಲೂಕಾ ಆಡಳಿತ ಇಂಡಿ ಅವರ ಸಹಯೋಗದಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2023ರ ಜಾಗೃತಿ ಜಾಥಾಕ್ಕೆ ಜಾಲನೆ ನೀಡಿ ಮಾತನಾಡಿದ ಅವರು. 

ಸಾರ್ವಜನಿಕರು ವೋಟರ್ ಹೆಲ್ಪ್‌ಲೈನ್ ಆ್ಯಪ್‌ನಲ್ಲಿ ನಮೂನೆ 6, 7, 8 ಮತ್ತು 8ಎ ಅರ್ಜಿಗಳನ್ನು ಆನ್‌ಲೈನ್ ಮೂಲಕ ದಾಖಲೆಪತ್ರ ಸಮೇತ ಅಪ್‌ಲೋಡ್ ಮಾಡಬಹುದು. ನ.8ರಿಂದ ಡಿ.12ರವರೆಗೆ ಮತದಾರರು ಹಕ್ಕು ಮತ್ತು ಆಕ್ಷೇಪಣಾ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು. 

ತಹಶೀಲ್ದಾರ ನಾಗಯ್ಯ ಹಿರೇಮಠ ಮಾತನಾಡಿ, ಇಂದಿನ ವಿದ್ಯಾರ್ಥಿಗಳೇ ನಾಳಿನ ಭಾರತದ ಪ್ರಜೆಗಳು ಮತ್ತು ನಾಯಕರು.  ಭಾರತ ಸರ್ಕಾರ ಚುನಾವಣಾ ಆಯೋಗವು ಮತದಾರ ಪಟ್ಟಿಯನ್ನು ಪ್ರಕಟಿಸಿದೆ ಅದರಲ್ಲಿ ತಿದ್ದುಪಡಿ ಅಥವಾ ಮತದಾರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶ ಇದೆ. ನಿಗದಿತ ದಿನಾಂಕದೊಳಗೆ ಅರ್ಜಿಸಲ್ಲಿಸಿ, ಮತದಾನ ಹಕ್ಕನ್ನು ಪಡೆಯಬೇಕು ಎಂದರು. 

ಶಾಲಾ ವಿದ್ಯಾರ್ಥಿಗಳು ಮತದಾರ ಪಟ್ಟಿ ಕುರಿತಾದ ವಿವಿಧ ಮಾಹಿತಿ ಒಳಗೊಂಡಂತೆ ಸ್ಲೋಗನ್ಗಳನ್ನು ಹಿಡಿದು ಘೋಷಣೆ ಕೂಗಿದರು. ಶಾಂತೇಶ್ವರ ಕಾಲೇಜು, ಸಿ.ವಿ.ರಾಮನ್ ಕಾಲೇಜು ಮತ್ತು ಅಂಜುಮನ್ ಕಾಲೇಜಿನ ವಿದ್ಯಾರ್ಥಿಗಳು ನಗರದ ಮಿನಿ ವಿಧಾನ ಸೌಧದಿಂದ ಬಸವೇಶ್ವರ ವೃತ್ತ, ಅಂಬೇಡ್ಕರ ವೃತ್ತ ಮೂಲಕ ಜಾಥಾ ನಡೆಯಿತು.  

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ ಮದ್ದಿನ, ನಂದಿಪ ರಾಠೋಡ, ಐಇಸಿ ಸಂಯೋಜಕಿ ಡಾ. ಜ್ಞಾನಜ್ಯೋತಿ ಚಾಂದಕವಟೆ, ವ್ಯವಸ್ಥಾಪಕ ನಾರಾಯಣಪುರ,  ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ, ವಿವಿಧ ಶಾಲೆ, ಕಾಲೇಜುಗಳ ಶಿಕ್ಷಕ, ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ತಾಲೂಕು ಆಡಳಿತದ ಅಧಿಕಾರಿಗಳು ಸಾರ್ವಜನಿಕರು ಇದ್ದರು. 

ಸುದ್ದಿ ಓದಿ