ಧಾರವಾಡ - ಹುಬ್ಬಳ್ಳಿ

ಶಿಕ್ಷಣವು ಸಕಲ ಸಮಸ್ಯೆಗಳಿಗೆ ಸಂಜೀವಿನಿ: ಉಮೇಶ ಬೊಮ್ಮಕ್ಕನವರ

ಶಿಕ್ಷಣವು ಸಕಲ ಸಮಸ್ಯೆಗಳಿಗೆ ಸಂಜೀವಿನಿ: ಉಮೇಶ ಬೊಮ್ಮಕ್ಕನವರ

ಧಾರವಾಡ 11:  ಶಿಕ್ಷಣವು ಸಕಲ ಸಮಸ್ಯೆಗಳಿಗೆ ಸಂಜೀವಿನಿ. ಶಿಕ್ಷಕರು ವಿದ್ಯಾರ್ಥಿಗಳ ವೈಯಕ್ತಿಕ ಸಮಸ್ಯೆಗಳನ್ನು ಗಮನಿಸಿ ಅವರ ವರ್ತನೆಯಲ್ಲಿ ಪರಿವರ್ತನೆ ತಂದು ಗುಣಮಟ್ಟದ ಶಿಕ್ಷಣವನ್ನು ನೀಡುವುದು ಇಂದಿನ ಅಗತ್ಯವಾಗಿದೆ ಎಂದು ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ ತಿಳಿಸಿದರು.  

 ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ಯೋಜನೆಯಿಂದ 2023-24ನೇ ಸಾಲಿನಲ್ಲಿ ಎಸ್‌.ಎಸ್‌.ಎಲ್‌.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶಾಲಾ ಪ್ರತಿಶತ ಪರಿಣಾಮ ಹೆಚ್ಚಿಸಿದ ಪ್ರೌಢ ಶಾಲಾ ಮುಖ್ಯ ಶಿಕ್ಷಕರಿಗೆ ಸಂಘವು ಹಮ್ಮಿಕೊಂಡಿದ್ದ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡುತ್ತಿದ್ದರು.  

ಮುಂದುವರೆದು ಮಾತನಾಡಿದ ಅವರು, ಶಿಕ್ಷಕರು ಕೊರತೆಗಳ ಮಧ್ಯೆಯೂ ಕೊಟ್ಟ ಕೆಲಸವನ್ನು ಪ್ರಾಮಾಣಿಕವಾಗಿ ಬದ್ಧತೆಯಿಂದ ಮಾಡಬೇಕಾಗಿದೆ. ಗುಣಮಟ್ಟದ ಶಿಕ್ಷಣವನ್ನು ನೀಡಲು ಶಿಕ್ಷಕರಷ್ಟೇ ಜವಾಬ್ದಾರಿ ಪಾಲಕರದೂ  ಇದೆ. ವಿದ್ಯಾರ್ಥಿಗಳ ಕಲಿಕೆಯಲ್ಲುಂಟಾದ ದೋಷಗಳ ಕ್ಷೇತ್ರಗಳ ರೂಪರೇಷೆಯನ್ನು ಸಿದ್ಧಪಡಿಸಿಕೊಂಡುನ ಸಮುದಾಯದ ಸಹಭಾಗಿತ್ವದೊಂದಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂದು ಹೇಳಿದರು.  

ಕ.ವಿ.ವ. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ದಾರವಾಡ ಜಿಲ್ಲೆಯು ಎಸ್‌.ಎಸ್‌.ಎಲ್‌.ಸಿ. ಫಲಿತಾಂಶ ಹೆಚ್ಚಿಸಲು ವಾಸ್ತವಿಕ ನೆಲೆಗಟ್ಟಿನ ಮೇಲೆ ಗಂಭೀರ ಚಿಂತನೆ ಮಾಡಬೇಕಿದೆ. ಈ ದೆಸೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ವಿಶೇಷ ಗಮನ ಹರಿಸಿದ್ದು ನಾವೆಲ್ಲರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ಕ.ವಿ.ವ. ಸಂಘ ಕಳೆದ 2 ವರ್ಷದಿಂದ ಎಸ್‌.ಎಸ್‌.ಎಲ್‌.ಸಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿ ಪರೀಕ್ಷಾ ಭಯ ನಿವಾರಣೆಗೆ ಶ್ರಮಿಸುತ್ತಿದೆ ಎಂದರು.  

ಡಿಮ್ಹಾನ್ಸ್‌ನ ಮನೋವೈದ್ಯಕೀಯ ಸಮಾಜ ಕಾರ್ಯಕರ್ತ ಪ್ರಶಾಂತ ಪಾಟೀಲ ಮಾತನಾಡಿ, ಶಿಕ್ಷಕರೇ ಶಿಕ್ಷಣ ವ್ಯವಸ್ಥೆಯ ಆಧಾರ ಸ್ತಂಭ. ದೇಶದ ಉಜ್ವಲ ಭವಿಷ್ಯ ಅವರನ್ನೇ ಅವಲಂಬಿಸಿದೆ ಎಂದರು.  

ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಮಾತನಾಡಿ, ಭಾರತದ ಭವಿತವ್ಯ  ವರ್ಗದ ಕೋಣೆಯಲ್ಲಿದೆ. ಶಿಕ್ಷಕರೇ ದೇಶದ ಉಜ್ವಲ ಭವಿಷ್ಯದ ನಿಯಂತ್ರಕರು. ಪ್ರಾಥಮಿಕ ಹಂತದಿಂದಲೇ ವಿದ್ಯಾರ್ಥಿಗಳಿಗೆ ಗುಣಾತ್ಮಕ ಬುನಾದಿ ಹಾಕಬೇಕು. ಭಾರತಕ್ಕೆ ಫೀನ್‌ಲ್ಯಾಂಡ ದೇಶದ ಶೈಕ್ಷಣಿಕ ಮಾನದಂಡ ಅಗತ್ಯವಾಗಿದೆ ಎಂದರು. 

ಚಿಲಕವಾಡ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಡಾ. ಪ್ರಭಾಕರ ಲಗಮಣ್ಣವರ, ತಡಕೋಡ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಭುವನೇಶ್ವರಿ ಕತ್ತಿ, ಧಾರವಾಡ ಕರ್ನಾಟಕ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಎನ್‌.ಎನ್‌. ಸವಣೂರ, ಯರೇಬೂದಿಹಾಳ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ವಸಂತ ಅರಮನಿ ಹಾಗೂ ಭೈರಿದೇವರಕೊಪ್ಪದ ಶ್ರೀ ಶಿವಾನಂದ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಪಿ. ಎನ್‌. ಬಾಳಪ್ಪಗೌಡರ ಅವರನ್ನು ಕರ್ನಾಟಕ ವಿದ್ಯಾವರ್ಧಕ ಸಂಘದ ಯೋಜನೆಯಿಂದ 2023-24ನೇ ಸಾಲಿನಲ್ಲಿ ಎಸ್‌.ಎಸ್‌.ಎಲ್‌.ಸಿ ವಾರ್ಷಿಕ ಸಭೆಯಲ್ಲಿ  ಶಾಲಾ ಪ್ರತಿಶತ ಪರಿಣಾಮ ಹೆಚ್ಚಿಸಿದ ಕಾರಣಕ್ಕಾಗಿ ಸಂಘದಿಂದ ಆತ್ಮೀಯವಾಗಿ ಗೌರವಿಸಿ, ಸನ್ಮಾನಿಸಲಾಯಿತು.  

ಕೋಶಾಧ್ಯಕ್ಷ ಸತೀಶ ತುರಮರಿ ಸ್ವಾಗತಿಸಿದರು. ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡೀನ ನಿರೂಪಿಸಿದರು. ಮಹಾಂತೇಶ ನರೇಗಲ್ ವಂದಿಸಿದರು. ಪ್ರಮೀಳಾ ಜಕ್ಕಣ್ಣವರ ಪ್ರಾರ್ಥಿಸಿದರು. ಶಿವಾನಂದ ಹೂಗಾರ ವಚನ ಹಾಡಿದರು.   

ಕಾರ್ಯಕ್ರಮದಲ್ಲಿ ಶಿವಾನಂದ ಭಾವಿಕಟ್ಟಿ, ಎಂ.ಎಂ. ಚಿಕ್ಕಮಠ, ಡಿ.ಜಿ. ಶೆಟ್ಟಿ, ವಿಜಯಲಕ್ಷ್ಮಿ ಕಲ್ಯಾಣಶೆಟ್ಟರ, ಬಿ.ಬಿ. ಪಾಟೀಲ, ಪ್ರಾಚಾರ್ಯ ಗೋವಿಂದರೆಡ್ಡಿ, ಕೆ.ಎಂ. ಅಂಗಡಿ, ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗದವರು ಇದ್ದರು. 


ಸುದ್ದಿ ಓದಿ