ಧಾರವಾಡ - ಹುಬ್ಬಳ್ಳಿ

ಶಿಕ್ಷಣ ಎನ್ನುವುದು ಒಂದು ಸಾಧನೆ: ಡಿಸಿ ದಿವ್ಯ ಪ್ರಭು

ಶಿಕ್ಷಣ ಎನ್ನುವುದು ಒಂದು ಸಾಧನೆ: ಡಿಸಿ ದಿವ್ಯ ಪ್ರಭು

ಧಾರವಾಡ 23: ಶಿಕ್ಷಣ ಇಲ್ಲವೆಂದರೆ ಯಾವುದರಲ್ಲೂ ಸಾಧನೆ ಮಾಡಲು ಸಾಧ್ಯವಿಲ್ಲ. ಶಿಕ್ಷಣ ಎನ್ನುವುದು ಒಂದು ಸಾಧನೆ. ಈ ಮೂಲಕ ಮನುಷ್ಯ ಎಂಥ ಸಮಸ್ಯೆ ಎದುರಾದರೂ ಅವುಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ. ಇದನ್ನು ರಾಣಿ ಚನ್ನಮ್ಮನ ಬದುಕಿನಿಂದ ಕಲಿಯಬಹುದಾಗಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್‌.ಜೆ. ನುಡಿದರು. 

ಅವರು  ಕರ್ನಾಟಕ ವಿದ್ಯಾವರ್ಧಕ ಸಂಘವು, ಶ್ರೀಮತಿ ಶಾಂತಾದೇವಿ ಮಾಳವಾಡ ದತ್ತಿ ನಿಮಿತ್ತ, ಕಿತ್ತೂರು ಚನ್ನಮ್ಮಳ ವಿಜಯೋತ್ಸವಕ್ಕೆ 200 ವರ್ಷ ಸವಿನೆನಪಿನ ಅಂಗವಾಗಿ ಹಮ್ಮಿಕೊಂಡಿದ್ದ ಒಂದು ದಿನದ ವಿಚಾರ ಸಂಕಿರಣ, ವಿದ್ಯಾರ್ಥಿಗಳ ಜಾಥಾ ಉದ್ಘಾಟಿಸಿ ಮಾತನಾಡುತ್ತಿದ್ದರು. 

ಮಹಿಳೆಯಾದವಳು ಜೀವನದಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ಅವುಗಳನ್ನು ಎದುರಿಸಿದಾಗಲೇ ಏನಾದರೂ ಸಾಧನೆ ಮಾಡಲು ಸಾಧ್ಯ. ಕಿತ್ತೂರ ಚನ್ನಮ್ಮ ಎಷ್ಟೊಂದು ಸಮಸ್ಯೆಗಳನ್ನು ಎದುರಿಸಿದವಳು. ಅವಳು ಎದುರಿಸದೇ ಹಾಗೇ ಮನೆಯಲ್ಲಿ ಉಳಿದಿದ್ದರೆ ಇಂದು ಚನ್ನಮ್ಮನನ್ನು ನಾವು ಸ್ಮರಿಸಿಕೊಳ್ಳಲು ಆಗುತ್ತಿದ್ದಿಲ್ಲ. ಮನೆಯನ್ನು ತೂಗಿಸಿ, ಮಕ್ಕಳನ್ನು ಆರೈಕೆ ಮಾಡುತ್ತಾ ತನಗೆ ಇಷ್ಟವಾದ ವಿಷಯಗಳಲ್ಲಿ ಸಾಧನೆ ಮಾಡುತ್ತಾಳೆಂದರೆ ಅವಳಿಗೆ ಸಾಮಾನ್ಯರಿಗಿಂತ ಒಂದೂವರೆ ಪಟ್ಟು ಶಕ್ತಿ ಹೆಚ್ಚಿದೆ ಎಂಬುದು ಸಂಶೋಧನೆಯ ಫಲಿತಾಂಶ ಹೇಳುತ್ತದೆ. 

ವಿದ್ಯಾರ್ಥಿಗಳು ತಮಗಿರುವ ಕೀಳರಿಮೆಯಿಂದ ಹೊರಗೆ ಬರಬೇಕು. ನಾನು ಕಪ್ಪಗಿದ್ದೇನೆ. ನಾನು ದಪ್ಪಗಿದ್ದೇನೆ, ನನಗೆ ಇಂಗ್ಲೀಷ ಬರತಾ ಇಲ್ಲ ಎನ್ನುವ ಮನೋಭಾವನೆಯಿಂದ ಹೊರಬರಬೇಕು. ದೇಶ ಕಂಡ ಸಾಧಕರ ಬದುಕನ್ನು ನೋಡಬೇಕು. ಗಾಂಧೀಜಿ ತುಂಡು ಬಟ್ಟೆಯಲ್ಲಿ, ಬಡಕಲು ದೇಹದಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಸೌಂದರ್ಯ ಎನ್ನುವುದು ನಮ್ಮ ಸಾಧನೆ ಆಗಬೇಕೇ ವಿನಃ ಬಾಹ್ಯಸೌಂದರ್ಯವಲ್ಲ, ಅದು ಕ್ಷಣಿಕ. ಸಾಧನೆ ಸೌಂದರ್ಯ ಶಾಶ್ವತವಾಗಿರುತ್ತದೆ ಎಂದರು. 

ರಾಜ್ಯದ ಒಳ್ಳೆಯ ಜಿಲ್ಲಾಧಿಕಾರಿ ಎಂದು ಪ್ರಶಸ್ತಿ ಬಂದಿದ್ದಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಜಿಲ್ಲಾಧಿಕಾರಿಗಳನ್ನು ಸನ್ಮಾನಿಸಲಾಯಿತು.  

ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಇತಿಹಾಸವನ್ನು ಸರಿಯಾಗಿ ಕಟ್ಟಿಕೊಡುವ ಕಾಲ ಈಗ ಬಂದಿದೆ. ಝಾನ್ಸಿರಾಣಿ ಬ್ರಿಟೀಷರ ವಿರುದ್ಧ ಹೋರಾಡಿದ ಮೊದಲ ಮಹಿಳೆಯಲ್ಲ. ಅವಳಿಗಿಂತ ಮೂವತ್ತು ವರ್ಷ ಮೊದಲೇ ಬ್ರಿಟಿಷರ ವಿರುದ್ಧ ಕಿತ್ತೂರರಾಣಿ ಚನ್ನಮ್ಮ ಹೋರಾಡಿದ್ದನ್ನು ಹೇಳಬೇಕಾಗಿದೆ. ನಿಜವಾದ ಇತಿಹಾಸ ಉಳಿಸಬೇಕಾಗಿದೆ ಎಂದರು.  

ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ವಿದ್ಯಾರ್ಥಿಗಳಿಗೆ, ಯುವಕರಿಗೆ ಮಾದರಿಯಾಗಿದ್ದಾರೆ. ಜಿಲ್ಲೆಯನ್ನು ಅಭಿವೃದ್ಧಿಪಥದತ್ತ ಕೊಂಡೊಯುತ್ತಿದ್ದಾರೆ ಎಂದರು. 

ಸಂಘದ ಪದಾಧಿಕಾರಿಗಳಾದ ಪ್ರೊ. ಮಾಲತಿ ಪಟ್ಟಣಶೆಟ್ಟಿ, ಸತೀಶ ತುರಮರಿ, ಶಂಕರ ಕುಂಬಿ ಮತ್ತು  ಕಾರ‌್ಯಕಾರಿ ಸಮಿತಿ ಸದಸ್ಯ ಡಾ. ಶ್ರೀಶೈಲ ಹುದ್ದಾರ ವೇದಿಕೆಯಲ್ಲಿದ್ದರು. ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಕಾರ್ಯಕ್ರಮ ನಡೆಸಿಕೊಟ್ಟರು. 

ಅಲಂಕೃತ ವಾಹನದಲ್ಲಿ ಕಿತ್ತೂರು ಚನ್ನಮ್ಮನ ಭಾವಚಿತ್ರದೊಂದಿಗೆ ಹಾಗೂ ಕಿತ್ತೂರು ಚನ್ನಮ್ಮ, ಸಂಗೋಳ್ಳಿ ರಾಯಣ್ಣ ಮುಂತಾದವರ ವೇಷಭೂಷಣಗಳೊಂದಿಗೆ, ಸಂಘದ ಪದಾಧಿಕಾರಿಗಳು, ಸದಸ್ಯರು, ವಿದ್ಯಾರ್ಥಿಗಳು,  ಸಂಘದಿಂದ ಜಾಥಾ ಹೊರಟು, ವಿವೇಕಾನಂದ ವೃತ್ತದ ಮೂಲಕ ಸಂಘಕ್ಕೆ ಆಗಮಿಸಿ ಸಮಾವೇಶಗೊಂಡಿತು. 

ಸಂಘದ ಕಾರ‌್ಯಕಾರಿ ಸಮಿತಿ ಸದಸ್ಯರಾದ ವೀರಣ್ಣ ಒಡ್ಡೀನ, ಗುರು ಹಿರೇಮಠ, ಡಾ. ಧನವಂತ ಹಾಜವಗೋಳ ಹಾಗೂ ಶಿವಾನಂದ ಭಾವಿಕಟ್ಟಿ, ನಿಂಗಣ್ಣ ಕುಂಟಿ, ಎಸ್‌. ಜಿ. ಪಾಟೀಲ, ಶಂಕರಲಿಂಗ ಶಿವಳ್ಳಿ, ಎಸ್‌. ಬಿ. ಅಯ್ಯನಗೌಡರ ದಂಪತಿಗಳು, ಮೋಹನ ಪಾಟೀಲ, ಚಂದ್ರು ಅಮಿನಗಡ, ಪ್ರಭು ಹಂಚಿನಾಳ ಮುಂತಾದವರು ಹಾಗೂ ವಿವಿಧ ಕಾಲೇಜುಗಳಿಂದ ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಭಾಗವಹಿಸಿದ್ದರು. 


ಸುದ್ದಿ ಓದಿ