ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ಬಹುದೊಡ್ಡ ಧಾರ್ಮಿಕ ಹಬ್ಬವಾಗಿದೆ: ಕುನ್ನೂರ
ಲೋಕದರ್ಶನ ವರದಿ
ಶಿಗ್ಗಾವಿ 21: ನಗರದ ಗ್ರಾಮದೇವತೆ (ದ್ಯಾಮವ್ವದೇವಿ) ಜಾತ್ರಾ ಮಹೋತ್ಸವವನ್ನು ಪ್ರತಿಐದು ವರ್ಷಕ್ಕೊಮ್ಮೆ ಕಳೆದ ಇಪ್ಪತ್ತು ವರ್ಷಗಳಿಂದ ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿದ್ದು. ಪ್ರಸಕ್ತ ಫೆ.21 ರಿಂದ ಮಾ.01 ರ ವರೆಗೆ ದೇವಿಯ ಜಾತ್ರೆಯನ್ನು ವೈಶಿಷ್ಟ್ಯ ಪೂರ್ಣವಾಗಿ ಆಚರಿಸಲು ನಾಡಿನಎಲ್ಲಾ ಸಮಾಜದ ಬಾಂಧವರು ಕೈಜೋಡಿಸಬೇಕೆಂದು ಗ್ರಾಮದೇವಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಮಂಜುನಾಥ ಕುನ್ನೂರ ಹೇಳಿದರು.
ಪಟ್ಟಣದ ದ್ಯಾಮವ್ವದೇವಿ ದೇವಸ್ಥಾನದ ಸಭಾಂಗಣದಲ್ಲಿ ಜಾತ್ರಾ ಮಹೋತ್ಸವ ಪ್ರಚಾರದ ಭಾವಚಿತ್ರ ಬಿಡುಗಡೆ ಮಾಡುವ ಮೂಲಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ಶತಮಾನದಿಂದಿಚಿಗಿನ ಬಹುದೊಡ್ಡ ಧಾರ್ಮಿಕ ಹಬ್ಬವಾಗಿದೆ ಜಾತಿ ಮತ ಪಂಥಗಳ ಭೇದವಿಲ್ಲದೆ ನಮ್ಮೆಲ್ಲರನ್ನು ಒಂದುಗೂಡಿಸುವ ಭಾವೈಕ್ಯತೆಯ ಸಂಕೇತವಾಗಿದೆ. ಸಾಂಪ್ರದಾಯಕವಾಗಿ ಹಾಗೂ ರೂಢಿಗತವಾಗಿ ಬೆಳೆದು ಬಂದಿರುವ ಕೆಲವು ವಿಧಿ ವಿಧಾನಗಳನ್ನು ಪಾಲಿಸುವ ಮೂಲಕ ಸಾಮಾಜಿಕ ವಿಧಿ ವಿಧಾನಗಳನ್ನು ಹಾಗೂ ಆಚರಣೆಗಳನ್ನು ಶ್ರದ್ಧಾ ಭಕ್ತಿಯಿಂದ ಕಟ್ಟುನಿಟ್ಟಾಗಿ ಆಚರಿಸಿಕೊಂಡು ದೇವಿಯ ಕೃಪಾ ಆಶೀರ್ವಾದ ಪಡೆದುಕೊಳ್ಳಬೇಕೆಂದು ವಿನಂತಿಸಿದರು.
ಫೆಬ್ರುವರಿ 12 ರಿಂದ ಅಂಕಿ ಹಾಕುವ ಮೂಲಕ ಗ್ರಾಮಕ್ಕೆ ದಿಗ್ಬಂಧನ ಹಾಕಲಾಗುವುದು. ಅಂದಿನಿಂದಯಾರಾದರು ಊರು ಬಿಟ್ಟು ಹೊರಗೆ ಹೋದರೆ ಸಾಯಂಕಾಲದವರೆಗೆ ಮರಳಿ ಊರನ್ನು ಸೇರಿಕೊಳ್ಳಬೇಕು. ದಿಗ್ಬಂಧನ ಪ್ರಾರಂಭವಾದಾಗಿನಿಂದ ಕಾಳು ಕಡಿ ಸೇರಿದಂತೆ ಯಾವುದೇ ವ್ಯಾಪಾರ ವಹಿವಾಟು ಮಾರಾಟ ಮಾಡಬಾರದು. ಜಾತ್ರೆಯ ಸಂದರ್ಭದಲ್ಲಿ ನಾಡಿನ ಪ್ರಮುಖ ಮಠಾಧೀಶರ ಸಾನಿಧ್ಯದಲ್ಲಿ ಮತ್ತುಕ್ಷೇತ್ರದ ಶಾಸಕರು ನಾಡಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ವಿವಿಧಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ವಿದ್ವಾಂಸರಿಂದ ಉಪನ್ಯಾಸ, ಕಲಾವಿದರಿಂದ ಸಂಗೀತ, ಕೀರ್ತನ,ನಾಟಕ, ದೊಡ್ಡಾಟ, ಜಾನಪದ ಕಲೆಗಳು ಸೇರಿದಂತೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು. ಪ್ರಸಕ್ತಜಾತ್ರೆಯಿಂದ ಮುಂದಿನ ವರ್ಷ 2024 ರಚಂದ್ರಮಾನ ಯುಗಾದಿಯವರೆಗೆ ಶಿಗ್ಗಾವಿ ಮತ್ತು ಗಂಜಿಗಟ್ಟಿಯ ಗ್ರಾಮಸ್ಥರು ಹೋಳಿ ಹುಣ್ಣಿಮೆ ಹಬ್ಬ ಮತ್ತು ಯಾವುದೇ ಶುಭ ಕಾರ್ಯಕ್ರಮಗಳನ್ನು ಮಾಡಬಾರದೆಂದು ಜಾತ್ರೆಯ ಪ್ರಕಟಣೆಯ ಮೂಲಕ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಜಾತ್ರಾ ಮಹೋತ್ಸವ ಸಮಿತಿ ಭರಮಜ್ಜ ನವಲಗುಂದ, ಶಿವಪ್ಪ ಚಿನ್ನಪ್ಪನವರ, ಟಿ ವಿ ಸುರಗಿಮಠ, ಜಯಣ್ಣ ಹೆಸರೂರ, ಈರಣ್ಣ ಬಡ್ಡಿ, ಕೊಟ್ರ್ಪ ನಡೂರ, ಚಂದ್ರು ಜವಳಿ, ಸುಭಾಸ ಚೌವ್ಹಾಣ, ರಮೇಶ ವನಹಳ್ಳಿ, ಎಸ್ ಪಿ ಜೋಶಿ, ಶಂಕರಗೌಡ್ರ ಪಾಟೀಲ, ಉಳವಪ್ಪ ಅರಲೇಶ್ವರ, ಅಶೋಕ ಖುರ್ಸಾಪುರ, ಮಂಜುನಾಥ ಎಲಿಗಾರ, ಮಹಾಂತೇಶ ಯಲಿಗಾರ, ಶರಣ ಬಡ್ಡಿ, ಸೇರಿದಂತೆ ಸಮಿತಿಯ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.