ಇಂಡಿ

ಗ್ರಾಮೀಣ ಜನರಿಗೆ ಕೆಲಸ ಒದಗಿಸಲು ದುಡಿಯೋಣ ಬಾ ಅಭಿಯಾನ: ಪಾರೆ

ಗ್ರಾಮೀಣ ಜನರಿಗೆ ಕೆಲಸ ಒದಗಿಸಲು ದುಡಿಯೋಣ ಬಾ ಅಭಿಯಾನ: ಪಾರೆ

ಇಂಡಿ: ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ನಿರಂತರವಾಗಿ ಕೆಲಸ ಒದಗಿಸುವ ಉದ್ದೇಶದಿಂದ ಜೂನ್ ಅಂತ್ಯದವರೆಗೆ ದುಡಿಯೋಣ ಬಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮ ಪಂಚಾಯ್ ಅಭಿವೃಧಿಕಾರಿ ಸಿ.ಜಿ. ಪಾರೆ ಹೇಳಿದರು. 

ಅವರು ಸೋಮವಾರ ತಾಲೂಕಿನ ಚವಡಿಹಾಳ ಗ್ರಾಮ ಪಂಚಾಯತಿಯಲ್ಲಿ ಅಮ್ಮಿಕೊಂಡ ದುಡಿಯೊಣ ಬಾ ಅಭಿಯಾನದಲ್ಲಿ ಕೂಲಿ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದರು. 

ನರೇಗಾ ಯೋಜನೆಯಡಿ ದುಡಿಯುವ ಕುಟುಂಬಗಳು ಹೊರಗೆ ಉಳಿದರೆ ಅಂತ ಕುಟುಂಬಗಳನ್ನು ಸಮೀಕ್ಷೆ ಮಾಡಿ. ಅರ್ಹರಿಗೆ ಉದ್ಯೋಗ ಚೀಟಿ ವಿತರಿಸುವುದು. ಸ್ವ-ಸಹಾಯ ಗುಂಪುಗಳ ಮಹಿಳೆಯರಲ್ಲಿ ಯೋಜನೆಯ ಕುರಿತು ಅರಿವು ಮೂಡಿಸಿ, ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದು. ಯೋಜನೆಯಿಂದ ಹೊರಗುಳಿದ ದುರ್ಬಲ ಕುಟುಂಬಗಳನ್ನು ಗುರುತಿಸಿ, ಯೋಜನೆಯ ಸೌಲಭ್ಯಗಳನ್ನು ದೊರಕಿಸಿ ಕೊಡುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು. 

ಗ್ರಾಮ ಪಂಚಾಯತ್‌ಗಳ ಮುಖಾಂತರ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ನೀಡುವ ಮಹತ್ವಾಕಾಂಕ್ಷಿ ಯೋಜನೆಯಾದ ದುಡಿಯೋಣ ಬಾ ಅಭಿಯಾನದ ಮೂಲಕ ಸ್ವ ಗ್ರಾಮಕ್ಕೆ ಆಗಮಿಸಿದ ನೂರಾರು ಜನರಿಗೆ ಚವಡಿಹಾಳ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಹಾಗೂ ಅಭಿವೃದ್ಧಿ ಅಧಿಕಾರಿಗಳು ಕೆಲಸ ನೀಡಿ ಬಡ ಜನರ ಪಾಲಿಗೆ ಆಸರೆಯಾಗಿದ್ದಾರೆ. 

-ತಾ. ಪಂ. ತಾಂತ್ರಿಕ ಸಂಯೋಜಕ ಸಂಜೀವ ಬಿರಾದಾರ, 

ನೆರೆಯ ಮಹಾರಾಷ್ಟ್ರ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಗುಳೆ ಹೋಗಿದ್ದ ನೂರಾರು ಜನರು ಸ್ವ ಗ್ರಾಮಕ್ಕೆ ಆಗಮಿಸಿದಾಗ ಸ್ಥಳಿಯ ಪಂಚಾಯತ್ ಅಧಿಕಾರಿಗಳು ದುಡಿಯೋಣ ಬಾ ಅಭಿಯಾನದ ಬಗ್ಗೆ ಅರಿವು ಮೂಡಿಸಿ ಅವರಿಗೆ ಕೆಲಸ ನೀಡಲು ಮುಂದಾಗಿದ್ದು ಸೋಮವಾರ ಹಾಗೂ ಮಂಗಳವಾರದಂದು 76 ಜನರಿಗೆ ಉದ್ಯೋಗ ನೀಡಿದ್ದಾರೆ. 

ಗ್ರಾಮ ಪಂಚಾಯತ್ ಅಧ್ಯಕ್ಷ ದಿಲ್‌ಶಾದ್‌ಬಿ ಚೌಧರಿ ಮಾತನಾಡಿ, ನಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ನೂರಾರು ಜನ ಈ ಮೊದಲು ಗುಳೆ ಹೋಗಿದ್ದರು. ಅವರು ಮರಳಿ ಗ್ರಾಮಕ್ಕೆ ಬಂದಾಗ ಅವರಿಗೆ ಕೆಲಸ ನೀಡಿ ಅವರ ಕುಟುಂಬಕ್ಕೆ ಒಳಿತು ಮಾಡಲು ಪಂಚಾಯತ್ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿಗಳು ಚರ್ಚಿಸಿ ಸರಕಾರಿ ಸ್ಥಳದಲ್ಲಿ 76 ಜನರಿಗೆ ಕೆಲಸ ನೀಡಲಾಗಿದೆ. 45 ಮಹಿಳೆಯರು ಮತ್ತು 31 ಜನ ಗಂಡು ಮಕ್ಕಳು  ಚವಡಿಹಾಳ ಗ್ರಾಮದ ಸರಕಾರಿ ಜಾಗದಲ್ಲಿ ಗಿಡಗಳ ಪಕ್ಕದಲ್ಲಿ ತಗ್ಗು ನಿರ್ಮಾಣ ಮತ್ತು ಬದು ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಗ್ರಾಮದಲ್ಲಿನ ಕಾರ್ಮಿಕರಿಗೂ ಸಹ ಕೆಲಸ ನೀಡಲಾಗುತ್ತಿದೆ ಎಂದು ವಿವರಿಸಿದರು. 

ತಾ.ಪಂ ಸಹಾಯಕ ನಿರ್ದೇಶಕ ಸಂಜಯ್ ಖಡಗೇಕರ್ ಮಾತನಾಡಿ ವಿಶೇಷ ಚೇತನರಿಗೆ, ವಿಕಲಚೇತನರಿಗೆ ಹಾಗೂ ದುರ್ಬಲ ವರ್ಗದ ಜನರಿಗೆ 319 ರೂಪಾಯಿ ಕೂಲಿ ಸಂದಾಯ ಮಾಡಲಾಗುತ್ತಿದೆ. 8-9 ದಿನಗಳಲ್ಲಿ ಕೂಲಿ ಹಣವನ್ನು ನೇರವಾಗಿ ಖಾತೆಗೆ ಜಮಾ ಮಾಡಲಾಗುತ್ತದೆ. ಕೆಲಸ ಮಾಡಲು ಇಚ್ಚೆಯುಳ್ಳವರಿಗೆ ಪಂಚಾಯತ್ ಮುಖಾಂತರ ಕೆಲಸ ನೀಡಲಾಗುತ್ತಿದೆ ಎಂದರು. 

ದುಡಿಯೋಣ ಬಾ ಅಭಿಯಾನದಲ್ಲಿ ಉಪಾಧ್ಯಕ್ಷ ಕಾಮಣ್ಣ ದಶವಂತ, ಸದಸ್ಯರಾದ ರಮೇಶಗೌಡ ಬಿರಾದಾರ, ಕುಮಾರ ಬಿರಾದಾರ, ರಾಜಕುಮಾರ ಅವರಾದಿ, ಶರಣು ಜೇವೂರ, ಅಶೋಕ ದಶವಂತ, ಶ್ರೀನಿವಾಸ ಪತಂಗೆ ಸೇರಿದಂತೆ ಮತ್ತಿತರರು ಇದ್ದರು. 

ಸುದ್ದಿ ಓದಿ