ಅಥಣಿ

ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರ ಇರಿ

ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರ ಇರಿ

ಪಿಎಸ್‌ಐ ಕುಮಾರ ಹಾಡಕರ ಕರೆ: ಮಾದಕ ವಸ್ತುಗಳ ನಿಷೇಧ ಜಾಗೃತಿ ಕಾರ್ಯಕ್ರಮ 

ಅಥಣಿ 15: ಮಾದಕ ವಸ್ತುಗಳಿಂದ ನೀವು ದೂರ ಇರಿ ಮತ್ತು ನಿಮ್ಮ ಸ್ನೇಹಿತರನ್ನು ದೂರ ಇರುವಂತೆ ಮಾಡಿ ಎಂದು ಅಥಣಿ ಪೊಲೀಸ್ ಠಾಣೆಯ ಪಿಎಸ್‌ಐ ಕುಮಾರ ಹಾಡಕರ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.  

ಅವರು ಅಥಣಿ ಪೊಲೀಸ್ ಠಾಣೆ ಹಾಗೂ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಮಾದಕ ವಸ್ತುಗಳ ನಿಷೇಧ ಕುರಿತು ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.  

ಸರಕಾರ ನಮ್ಮ ದೇಶದಲ್ಲಿ  ಗಾಂಜಾ, ಚರಸ್ ಸೇರಿದಂತೆ ಎಲ್ಲ ಮಾದಕ ವಸ್ತುಗಳನ್ನು ನಿಷೇಧ ಹೇರಿದ್ದರೂ ಕೂಡ ಕಳ್ಳ ದಾರಿಯಿಂದ ನಮ್ಮ ದೇಶ ಪ್ರವೇಶಿಸುವ ಮಾದಕ ವಸ್ತುಗಳು ಲಕ್ಷಾಂತರ ಯುವಕರ ಬದುಕು ಹಾಳು ಮಾಡಿವೆ ಎಂದರು. ಸರಕಾರ, ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಮಾದಕ ವಸ್ತುಗಳ ಸೇವನೆಯಿಂದ ಆಗುವ ತೊಂದರೆಗಳ ಬಗೆಗೆ ಹಾಗೂ ಶಿಕ್ಷೆಯ ಸಂಬಂಧ ಜಾಗೃತಿ ಮೂಡಿಸುತ್ತಿದ್ದರೂ ಕೂಡ ಇವುಗಳ ಬಳಕೆ ಮಾಡುತ್ತಿರುವುದು ವಿಷಾದದ ಸಂಗತಿ ಎಂದ ಅವರು ಮಾದಕ ವಸ್ತುಗಳ ಬಳಕೆ ಪ್ರಾರಂಭದಲ್ಲಿ ಮಹಾನಗರ, ನಗರ ಪ್ರದೇಶಗಳಿಗೆ ಸೀಮಿತವಾಗಿತ್ತು ಆದರೆ ಇತ್ತೀಚಿಗೆ ಗ್ರಾಮೀಣ ಭಾಗಕ್ಕೂ ಕಾಲಿಟ್ಟಿರುವುದು ಗಂಭೀರ ಸ್ವರೂಪದ್ದಾಗಿದೆ ಎಂದರು.  

ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ಮಾಡುವವರು ಕಾಲೇಜ್ ಕ್ಯಾಂಪಸ್‌ಗಳನ್ನೇ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಚಟ ಹಚ್ಚುವ ಪ್ರಯತ್ನ ಮಾಡುತ್ತಾರೆ ಹೀಗಾಗಿ ಕಾಲೇಜ್ ಕ್ಯಾಂಪಸ್‌ಗಳಲ್ಲಿ ಈ ರೀತಿ ಯಾರಿಗಾದರೂ ಕಂಡು ಬಂದಲ್ಲಿ ತಕ್ಷಣ ಪೋಲೀಸ್ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ. ಮಾಹಿತಿ ನೀಡಿದವರ ಹೆಸರನ್ನು ಗುಪ್ತವಾಗಿಡಲಾಗುವುದು ಎಂದ ಅವರು ಮೊಬೈಲ್ ಬಳಕೆಯನ್ನು ಶೈಕ್ಷಣಿಕ ಅನಕೂಲಕ್ಕಾಗಿ ಬಳಸಿಕೊಳ್ಳಿ ಹೊರತು ಮನರಂಜನೆ ಅಥವಾ ಬೇರೆ ಇನ್ಯಾವುದೋ ಕಾರಣಕ್ಕೆ ಬಳಸಬೇಡಿ ಎಂದು ಸಲಹೆ ನೀಡಿದರು.  

ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಂಶುಪಾಲ ಡಿ.ವೈ.ಕಾಂಬಳೆ ಮಾತನಾಡಿ, ಮಾದಕ ವಸ್ತುಗಳ ಬಳಕೆಯಿಂದ ಜೀವನ ನರಕವಾಗುತ್ತದೆ. ಕೇವಲ ನಿಮ್ಮ ಜೀವನ ಅಲ್ಲ ನಿಮ್ಮ ಕುಟುಂಬವೇ ನರಕಯಾತನೆಯನ್ನು ಅನುಭವಿಸಬೇಕಾಗಬಹುದು. ಹೀಗಾಗಿ ಮಾದಕ ವಸ್ತುಗಳಿಂದ ದೂರ ಇರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.  

ಪ್ರಾಸ್ತಾವಿಕವಾಗಿ ಮಾತನಾಡಿದ ಮಹಾವಿದ್ಯಾಲಯದ ಪ್ರಾಧ್ಯಾಪಕ ವಿಲಾಸ ಕಾಂಬಳೆ, ವಿದ್ಯಾರ್ಥಿಗಳಲ್ಲಿ ಪೊಲೀಸ್ ಇಲಾಖೆಯಿಂದ ಇಂತಹ ಜಾಗೃತಿ ಕಾರ್ಯಕ್ರಮ ಮಾಡುತ್ತಿರುವುದು ಅಭಿನಂದನಾರ್ಹ ಎಂದ ಅವರು ನೀವು ಜಾಗೃತರಾಗಿ ಮತ್ತು ನಿಮ್ಮ  ಸ್ನೇಹಿತರಲ್ಲೂ ಜಾಗೃತಿ ಮೂಡಿಸಿ ಎಂದು ಕರೆ ನೀಡಿದರು.  

ಕಾರ್ಯಕ್ರಮದಲ್ಲಿ ಹಿರಿಯ ಪೊಲೀಸ್ ಹವಾಲ್ದಾರ ಅಜ್ಜಣಗಿ ಮಾತನಾಡಿದರು. ಎ.ಎಮ್‌.ಕುರುಂದವಾಡ, ಪಿ.ಆರ್‌.ಖ್ಯಾಡಿ, ಶ್ರೀಶೈಲ ದೇವರಡ್ಡಿ, ಪ್ರವೀಣ ತುಬಚಿ, ನಾಗಪ್ಪಾ ಚಿಕ್ಕಟ್ಟಿ, ಅಶೋಕ ಕುರಣಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಡಾ.ಮಹಾಂತೇಶ ಉಕ್ಕಲಿ ಸ್ವಾಗತಿಸಿದರು, ಡಾ.ಎಮ್‌.ಎ.ಸಲಗರ ನಿರೂಪಿಸಿದರು. 


ಸುದ್ದಿ ಓದಿ