ಬ್ಯಾಡ್ಗಿ

ಕಂದಾಯ ದಾಖಲೆ ಜನರ ಮನೆ ಬಾಗಿಲಿಗೆ ಯೋಜನೆಗೆ ಚಾಲನೆ

ಕಂದಾಯ ದಾಖಲೆ ಜನರ ಮನೆ ಬಾಗಿಲಿಗೆ ಯೋಜನೆಗೆ ಚಾಲನೆ

ಬ್ಯಾಡಗಿ: ಸರ್ಕಾರದ ಯೋಜನೆಗಳು ಯಾವುದೇ ತೊಂದರೆಯಾಗದಂತೆ ಜನರಿಗೆ ತಲುಪಿಸುವ ಉದ್ದೇಶದಿಂದ "ಕಂದಾಯ ದಾಖಲೆ, ಜನರ ಮನೆ ಬಾಗಿಲಿಗೆ" ಯೋಜನೆಯನ್ನು ಜಾರಿಗೆ ತರಲಾಗಿದ್ದು, ಪ್ರತಿಯೊಬ್ಬರೂ ಈ ಯೋಜನೆಯ ಲಾಭ ಪಡೆಯಬೇಕು ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.ಶನಿವಾರ ಬನ್ನಿಹಟ್ಟಿ ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ತಾಲೂಕಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ “ಕಂದಾಯ ದಾಖಲೆ ಜನರ ಮನೆ ಬಾಗಿಲಿಗೆ” ಎಂಬ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಭಾಗದ ರೈತರು ದಿನನಿತ್ಯ ದಾಖಲೆ ಪಡೆಯುವ ಸಲುವಾಗಿ ಕಛೇರಿಗಳಿಗೆ ಅಲೆದಾಡುವುದು ತುಂಬಾ ಕಷ್ಟವಾಗುತ್ತದೆ. ರೈತರಿಗೆ ಅವಶ್ಯಕವಿರುವ ಕಂದಾಯ ದಾಖಲೆಗಳನ್ನು ಮನೆಬಾಗಿಲಿಗೆ ತಲುಪಿಸುವುದರಿಂದ ಈ ರೀತಿಯ ಅಲೆದಾಟ ತಪ್ಪಿಸಿದಂತಾಗುತ್ತದೆ ಎಂಬ ಆಲೋಚನೆಯಿಂದ ರಾಜ್ಯ ಸರಕಾರ ಈ ವಿನೂತನ ಯೋಜನೆ ರೂಪಿಸಿದೆ. ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ಸಕಾಲಕ್ಕೆ ರೈತರು ಪಹಣಿ, ಜಮೀನಿನ ಅಟ್ಲಾಸ್ ನಕ್ಷೆ ಹಾಗೂ ಇನ್ನಿತರ ಪ್ರಮಾಣ ಪತ್ರಗಳನ್ನು ಪಡೆಯಬಹುದಾಗಿದೆ. ಎಲ್ಲಾ ಗ್ರಾಮದ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ತಹಶೀಲ್ದಾರ ರವಿಕುಮಾರ ಕೊರವರ ಮಾತನಾಡಿ, “ಕಂದಾಯ ದಾಖಲೆ ಮನೆ ಬಾಗಿಲಿಗೆ” ಎಂಬುದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಇದರಿಂದ ರೈತರಿಗೆ ಒಂದು ಬಾರಿ ಉಚಿತವಾಗಿ ಕಂದಾಯ ದಾಖಲೆಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ, ಮತ್ತು ಕಛೇರಿಗೆ ಅಲೆದಾಡುವುದು ತಪ್ಪಿಸಿದಂತಾಗುತ್ತದೆ. ಅಲ್ಲದೆ ಕಾರ್ಯಕ್ರಮದಿಂದ ಉಚಿತ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯುವುದರಿಂದ ಫಲಾನುಭವಿಗಳು ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮದ ಚಾಲನೆಯ ಅಂಗವಾಗಿ ವಿವಿಧ ಫಲಾನುಭವಿಗಳ ಮನೆ ಬಾಗಿಲಿಗೆ ಸಾಂಕೇತಿಕವಾಗಿ ಪಹಣಿ, ಜಾತಿ ಪ್ರಮಾಣ ಪತ್ರ, ಜಮೀನಿನ ಅಟ್ಲಾಸ್ ನಕ್ಷೆಯ ದಾಖಲಾತಿಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎನ್‌. ತಿಮ್ಮಾರೆಡ್ಡಿ, ಗ್ರಾ.ಪಂ.ಅಧ್ಯಕ್ಷ ಜಗದೀಶ ಕೆರಕರ್, ಸದಸ್ಯರಾದ ವೀರೇಶ ಅಂಗಡಿ, ಅರುಣ ಕೊಪ್ಪದ, ಶರಣು ಚನ್ನಳ್ಳಿ, ಶಿವಬಸಪ್ಪ ಕುಳೆನೂರ, ಚನಬಸಪ್ಪ ಬೂದಿಹಾಳ, ಪಿಡಿಓ ಪರಶುರಾಮ ಅಗಸನಹಳ್ಳಿ, ಕಂದಾಯ ನೀರೀಕ್ಷಕ ರಾಘವೇಂದ್ರ ಕುಲಕರ್ಣಿ, ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಗ್ರಾಮಸ್ಥರು ಭಾಗವಹಿಸಿದ್ದರು. 


ಸುದ್ದಿ ಓದಿ