ಮನೆಮನೆಗೆ ಗಂಗೆ ಯೋಜನೆ ಕಾಮಗಾರಿಗೆ ಚಾಲನೆ
ಬ್ಯಾಡಗಿ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬರಗಾಲದೊಂದಿಗೆ ನೀರಿನ ತೀವ್ರ ಸಮಸ್ಯೆಯನ್ನು ಎದುರಿಸುವ ಸಮಸ್ಯೆಯು ನಿಶ್ಚಿತ ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು. ತಾಲೂಕಿನ ಅತ್ತಿಕಟ್ಟಿ ಗ್ರಾಮದಲ್ಲಿ ಜಲ ಜೀವನ್ ಮಿಶನ್ ಅಡಿಯ "ಮನೆಮನೆಗೆ ಗಂಗೆ" ಯೋಜನೆಯಲ್ಲಿ 51ಲಕ್ಷ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಾದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶವನ್ನು ಸಂಪೂರ್ಣವಾಗಿ ಅಭಿವೃದ್ದಿ ಮಾಡುವ ಕನಸು ನನಸಾಗಿದೆ. ಭವಿಷ್ಯದಲ್ಲಿ ದೇಶವನ್ನು ಸಮಗ್ರವಾಗಿ ಅಭಿವೃದ್ದಿಗೊಳಿಸುವ ಚಿಂತನೆಯನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ. ಕಳೆದ 2018ರಲ್ಲಿ ಕ್ಷೇತ್ರದಾದ್ಯಂತ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿತ್ತು. ಆದರೆ ಈಗ ಆ ಪರಿಸ್ಥಿತಿಯಿಲ್ಲ, ತಾಲೂಕು ಸೇರಿದಂತೆ ಕ್ಷೇತ್ರದಲ್ಲಿರುವ ಎಲ್ಲ ಕೆರೆಗಳನ್ನು ತುಂಬಿಸುವ ಮಹತ್ವಾಕಾಂಕ್ಷೆ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಬರಗಾಲ ಹಾಗೂ ನೀರಿನ ಸಮಸ್ಯೆ ಎದುರಾಗಲಿದ್ದು, ಅವರಿಗೆ ಯಾವುದೇ ಕಾರಣಕ್ಕೂ ಅಧಿಕಾರ ಕೊಡಬೇಡಿ, ಸಮೃದ್ದ ಕರ್ನಾಟಕ ನಿರ್ಮಿಸಲು ಬಿಜೆಪಿಗೆ ಮತ ಹಾಕಲು ಪಣತೊಡಬೇಕೆಂದು ತಿಳಿಸಿದರು.ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ಸುರೇಶ ಬೇಡರ ಯೋಜನೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಉಪಾಧ್ಯಕ್ಷೆ ಹಮೀದಾಬಾನು ಮುಲ್ಲಾನವರ ವಹಿಸಿದ್ದರು. ಎಪಿಎಂಸಿ ಮಾಜಿ ಸದಸ್ಯ ಶಿವಣ್ಣ ಕುಮ್ಮೂರ, ಗ್ರಾಪಂ ಸದಸ್ಯರಾದ ಪರಮೇಶ ಚಿಕ್ಕಳ್ಳಿ, ಪ್ರಕಾಶ ಬಣಕಾರ, ಚಂದ್ರ್ಪ ಕುಲ್ಮಿ, ಪಿಡಿಓ ಕೋಟೆಪ್ಪನವರ, ಇಂಜೀನೀಯರ್ ವೈ.ಕೆ.ಮಟಗಾರ, ರಾಮಣ್ಣ ಗಾಜೇರ, ಗುತ್ತಿಗೆದಾರ ಗೋವಿಂದ ಪೂಜಾರ, ಪಿ.ಎಸ್.ರಾಮನಗೌಡ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.