ಗುಳೇಗುಡ್ಡ

ಪ್ರೇಕ್ಷಕರಿಲ್ಲದೇ ನಾಟಕಗಳು ಕಳಾಹೀನ

ಪ್ರೇಕ್ಷಕರಿಲ್ಲದೇ ನಾಟಕಗಳು ಕಳಾಹೀನ

ಹಂಪಿ ವಿವಿ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ ಕಳವಳ | ಮಹಿಳಾ ನಾಟಕೋತ್ಸವ ಉದ್ಘಾಟನೆ

ಗುಳೇದಗುಡ್ಡ 06:  ಆಧುನಿಕ ಭರಾಟೆಯಲ್ಲಿ ರಂಗಭೂಮಿ ಪ್ರೇಕ್ಷಕರನ್ನು ಕಳೆದುಕೊಂಡಿದ್ದು ಈ ನಾಡಿನ ಸಾಂಸ್ಕೃತಿಕ ಹಿನ್ನೆಡೆಯ ಅಪಾಯಕಾರಕ ಬೆಳವಣಿಗೆ ಇದಾಗಿದೆ. ಅನಕ್ಷರಸ್ಥರ ಶಾಲೆ ಎಂದೆ ಕರೆಯಿಸಿಕೊಂಡಿದ್ದ ರಂಗಭೂಮಿ ಪ್ರೇಕ್ಷಕರಿಲ್ಲದೇ ಕಳಾಹೀನವಾಗಿದೆ. ಪ್ರೇಕ್ಷಕರನ್ನು ಮತ್ತೇ ಕರೆತರುವ  ಜವಾಬ್ದಾರಿ ವಿದ್ಯಾವಂತರ ಮೇಲಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ ಹೇಳಿದರು.

ಶುಕ್ರವಾರ ರಾಜ್ಯ ನಾಟಕ ಅಕಾಡೆಮಿ ಬೆಂಗಳೂರು ಇದರ ಆಶ್ರಯದಲ್ಲಿ ಪಟ್ಟಣದ ಶಿವಕೃಪಾ ರಂಗಮಂದಿರದಲ್ಲಿ ಪ್ರಥಮ ರಂಗಭೂಮಿ ಕಲಾವಿದೆ ಗಾನರತ್ನ ಗಂಗೂಬಾಯಿ ಗುಳೇದಗುಡ್ಡ ಅವರಿಗೆ ಸಮರ್ಪಿಸಿದ ಮಹಿಳಾ ನಾಟಕೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಕಾರ್ಯಕ್ರಮಕ್ಕೆ ಬರಬೇಕಾದರೆ ನನ್ನ ಕಲ್ಪನೆಯೇ ಬೇರೆಯೇ ಆಗಿತ್ತು. ಹಳ್ಳಿಗಳಿಂದ ಜನ ಬಂಡಿ ಕಟ್ಟಿಕೊಂಡು ನಾಟಕ ನೋಡಲು ಬರುತ್ತಾರೆ ಎಂದುಕೊಂಡಿದ್ದೆ.  ಆದರೆ ಇಲ್ಲಿನ ಪರಿಸ್ಥಿತಿ ನೋಡಿದರೆ, ಅನಕ್ಷರಸ್ಥರ ಶಾಲೆ ಎಂದೆ ಕರೆಯಿಸಿಕೊಂಡಿದ್ದ ರಂಗಭೂಮಿ ಪ್ರೇಕ್ಷಕರಿಲ್ಲದೇ ಕಳಾಹೀನವಾಗಿದೆ. 50 ವರ್ಷಗಳ ಹಿಂದೆ ನಾಟಕಗಳ ವೈಭವ ನೋಡಿದರೆ, ಅಂದಿನ ಕಲಾವಿದರಿಗೂ ಗೌರವವಿತ್ತು. ಇತ್ತೀಚಿನ ದಿನಗಳಲ್ಲಿ ಅಭಿರುಚಿ ಬದಲಾಗಿದೆಯೋ ಅಥವಾ ಇಲೆಕ್ಟ್ರಾನಿಕ್ ಮಾಧ್ಯಮಗಳ ಮಧ್ಯದಲ್ಲಿ ಜೀವಂತ ರಂಗಭೂಮಿ ಅನಾಥ ಪ್ರಜ್ಞೆಯಲ್ಲಿ ಬಳಲುತ್ತಿದೆ. ಇಂತಹ ಸಂದರ್ಭದಲ್ಲಿ ರಂಗಭೂಮಿಯನ್ನು ಜೀವಂತವಾಗಿಡಲು ಸದಭಿರುಚಿಯ ಪ್ರೇಕ್ಷಕರು ರಂಗಭೂಮಿ  ಬೆಳೆಸಬೇಕಾಗಿದೆ. ದಕ್ಷಿಣ ಕರ್ನಾಟಕದಲ್ಲಿ ಯಕ್ಷಗಾನ, ಭೂತಾರಾಧನೆಯನ್ನು ಪ್ರಜ್ಞಾಪೂರ್ವಕವಾಗಿ ಬೆಳೆಸುತ್ತಿದ್ದಾರೆ. ಆದರೆ ಉತ್ತರ ಕರ್ನಾಟಕದಲ್ಲಿ ನಮ್ಮ ರಂಗಭೂಮಿಬಗ್ಗೆ ಸಾಮಾನ್ಯ ಜನರಿಗೆ ಇರುವ ಪ್ರೀತಿ, ಗೌರವ ಅಕ್ಷರಸ್ಥರಲ್ಲಿ ಕಾಣುತ್ತಿಲ್ಲ. ರಂಗಭೂಮಿಯ ಆರ್ಥಿಕ ಚೈತನ್ಯಕ್ಕಾಗಿ ಸರ್ಕಾರವನ್ನು ಅವಲಂಬಿಸಬೇಕಾಗಿದೆ ಎಂದರು. 

ರಂಗಭೂಮಿಗೆ ಸಂಬಂಧಪಟ್ಟಂತೆ ವಿದ್ಯಾವಂತರು ಆಧುನಿಕರಣಕ್ಕೆ ಒಳಪಡಿಸುವ  ಸಂದರ್ಭದಲ್ಲಿ ಅವರು ಇದರ ಕಡೆಗೆ ಗಮನಕೊಡಲಿಲ್ಲವೋ, ರಂಗಭೂಮಿಯೊಳಗೆ ಬದುಕನ್ನು ಕಟ್ಟಿಕೊಂಡಿರುವವರು ಹೊರಗಡೆ ನಾವು ಹೇಗೆ ಪರಿವರ್ತನೆಯಾಗಬೇಕೆಂದು ಆಲೋಚನೆ ಮಾಡಲಿಲ್ಲವೋ ಎಂಬುದು ನನಗೆ ಬಿಡಿಸಲಾಗದ ಪ್ರಶ್ನೆಯಾಗಿದೆ ಎಂದು ಡಾ. ಮಲ್ಲಿಕಾ ಘಂಟಿ ಹೇಳಿದರು.   

ಜಿಲ್ಲಾಧಿಕಾರಿ ಮಹಾದೇವ ಮುರಗಿ ಅಧ್ಯಕ್ಷತೆವಹಿಸಿ ಮಾತನಾಡಿ, ನಾಟಕಗಳ ಯಶಸ್ವಿಗೆ ಸರ್ಕಾರದ ಜೊತೆಗೆ ಪ್ರೇಕ್ಷಕರ ಸಹಕಾರವೂ ಅಗತ್ಯವಾಗಿರುತ್ತದೆ. ಈ ಭಾಗದ ನಾಟಕಕಾರ ಕಂದಗಲ್ ಹಣಮಂತರಾಯರ ಪ್ರತಿಷ್ಠಾನ ಕಾರ್ಯಕ್ಕೆ ಸರ್ಕಾರದ ಸಹಮತವಿದೆ. ಇಲ್ಲಿನ ಕಲಾಸಕ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೆ ಅದನ್ನು ಜಿಲ್ಲಾಧಿಕಾರಿಗಳ ಮುಖಾಂತರ ಶಿಫಾರಸ್ಸು ಮಾಡಿ ಸರ್ಕಾರಕ್ಕೆ ಕಳುಹಿಸುತ್ತೇವೆ ಎಂದರು. ಗುರುಸಿದ್ದೇಶ್ವರ ಮಠದ ಬಸವರಾಜ ಶ್ರೀಗಳು ಸಾನಿಧ್ಯವಹಿಸಿ ಮಾತನಾಡಿದರು.  

ರಾಜ್ಯ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ.ಶೇಕ್ ಮಾಸ್ತರ, ಪುರಸಭೆ ಅಧ್ಯಕ್ಷೆ ಶಿಲ್ಪಾ ಹಳ್ಳಿ, ರಂಗಕರ್ಮಿ ಮಹಾಂತೇಶ ಗಜೇಂದ್ರಗಡ್ ಮಾತನಾಡಿದರು. ತಹಸೀಲ್ದಾರ ಜಿ.ಎಂ.ಕುಲಕರ್ಣಿ,  ಡಾ.ಭೀಮನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಗಾನರತ್ನ ಗಂಗೂಬಾಯಿ ಗುಳೇದಗುಡ್ಡ ಕುರಿತು ಮಾತನಾಡಿದರು.

ಇದೇ ಸಂದರ್ಭದಲ್ಲಿ ಜಾಲಿಹಾಳದ ರಂಗಭೂಮಿ ಕಲಾವಿದೆ ಕೆ.ಬಿ.ರೇಣುಕಾಶಂಕರ ಹಾಗೂ ನಾಟಕ ಅಕಾಡೆಮಿ ಮಾಜಿ ಸದಸ್ಯೆ ಪ್ರೇಮಾ ಗುಳೇದಗುಡ್ಡ ಅವರಿಗೆ ರಂಗಗೌರವ ನೀಡಲಾಯಿತು. ನಂತರ ರಾಮನಗರದ ಶ್ರೀದೇವಿ ಕೋಮಾರಿ (ಧುತ್ತರಗಿ) ಸಂಗೀತ ತಂಡದವರಿಂದ ರಂಗ ಗೀತೆಗಳು ಜರುಗಿದವು.  

ಧಾರವಾಡದ ಆಟ-ಮಾಟ ಸಾಂಸ್ಕೃತಿಕ ಪಥ ತಂಡದವರಿಂದ ಮಹಾದೇವ ರಚಿಸಿರುವ ಗಾಯತ್ರಿ ಹೆಗ್ಗೋಡು ನಿರ್ದೇಶನದಲ್ಲಿ ಆಮ್ರಪಾಲಿ ನಾಟಕ ಪ್ರಯೋಗವಾಯಿತು. ನಾಟಕ ಅಕಾಡೆಮಿ  ಸದಸ್ಯ ರಾಚಪ್ಪ ಬಡಿಗೇರ, ಮಾಜಿ ಶಾಸಕ ಮಲ್ಲಿಕಾರ್ಜುನ ಬನ್ನಿ, ಡಾ. ಸುರೇಶ ಪರ್ವತೀಕರ ಹಾಗೂ ಇತರರು ಇದ್ದರು.

ಸುದ್ದಿ ಓದಿ