ಧಾರವಾಡ - ಹುಬ್ಬಳ್ಳಿ

ಡಾ. ರಾ.ಯ. ಧಾರವಾಡಕರವರ ವ್ಯಕ್ತಿತ್ವ ವಿಶಾಲವಾದ ಆಲದ ಮರವಿದ್ದಂತೆ

ಡಾ. ರಾ.ಯ. ಧಾರವಾಡಕರವರ ವ್ಯಕ್ತಿತ್ವ ವಿಶಾಲವಾದ ಆಲದ ಮರವಿದ್ದಂತೆ

ಧಾರವಾಡ: ಡಾ. ರಾ.ಯ. ಧಾರವಾಡಕರವರ ವ್ಯಕ್ತಿತ್ವ ವಿಶಾಲವಾದ ಆಲದ ಮರವಿದ್ದಂತೆ. ಅದರಡಿಯಲ್ಲಿ ಬೆಳೆದ ಅವರ ಶಿಷ್ಯ ಸಂಪತ್ತು ಅಗಾಧವಾದುದು ರಸಪ್ರಧಾನವಾದ ವಿಶಿಷ್ಟ ಬೋಧನಾ ಶೈಲಿ ಧೀರೋದಾತ್ತ ಆಡಳಿತ ವೈಖರಿ, ಬಹು ಭಾಷಾ ಪಾಂಡಿತ್ಯ, ಪ್ರಾಮಾಣಿಕತೆ ಮತು ಮಾನವೀಯ ಹೃದಯ  ಶ್ರೀಮಂತಿಕೆ ಅವರ ಬಹುಮುಖ ವ್ಯಕ್ತಿತ್ವದ ಆಯಾಮಗಳಾಗಿದ್ದವು ಎಂದು ಪ್ರೊ. ಹರ್ಷ ಡಂಬಳ ಅವರು ಹೇಳಿದರು.   

ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು. ಡಾ. ರಾ.ಯ. ಧಾರವಾಡಕರ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಡಾ. ರಾ.ಯ. ಧಾರವಾಡಕರ ಅವರ ವ್ಯಕ್ತಿತ್ವ ಮತ್ತು ಬರಹ’ ವಿಷಯ ಕುರಿತು ಅತಿಥಿ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.  

ಮುಂದುವರೆದು ಮಾತನಾಡಿದ ಅವರು, ಧಾರವಾಡಕರ ಅವರು ಧಾರವಾಡದ ಪ್ರತಿಷ್ಠಿತ ಜೆ.ಎಸ್‌.ಎಸ್‌. ಕಾಲೇಜಿನ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ಅದರ ಶ್ರೇಯೋಭಿವೃದ್ಧಿಗೆ ಹಗಲಿರುಳು ಶ್ರಮಿಸಿದರು. ಕರ್ನಾಟಕ ವಿಶ್ವವಿದ್ಯಾಲಯ, ಕರ್ನಾಟಕ ವಿದ್ಯಾವರ್ಧಕ ಸಂಘಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಇಪ್ಪತ್ತೈದಕ್ಕೂ ಹೆಚ್ಚು ಕನ್ನಡ ಮೌಲಿಕ ಕೃತಿಗಳನ್ನು ರೂಪಿಸಿದ್ದಾರೆ. ಅವರ ‘ಕನ್ನಡ ಭಾಷಾಶಾಸ್ತ್ರ’ ಆಧುನಿಕ ಕನ್ನಡ ಭಾಷಾ ವಿಜ್ಞಾನದ ಬೆಳವಣಿಗೆಗೆ ಭದ್ರಬುನಾದಿ ಹಾಕಿದರೆ ಹೊಸಗನ್ನಡ ಸಾಹಿತ್ಯದ ಉದಯಕಾಲ, ಹೊಸಗನ್ನಡ ಸಾಹಿತ್ಯ ಚರಿತ್ರೆ ಕಟ್ಟಲು ತಳಪಾಯವಾಯಿತೆಂದು ಅವರ ಸಾಹಿತ್ಯಿಕ ಕೊಡುಗೆಯನ್ನು ಸ್ಮರಿಸಿದರು.  

ಡಾ. ರಾ.ಯ. ಧಾರವಾಡಕರ ಅವರ ಪುತ್ರ ಅನೀಲ ಧಾರವಾಡಕರ ತಂದೆಯವರ ವ್ಯಕ್ತಿತ್ವ ಬಣ್ಣಿಸಿದರು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿ, ಜೆ.ಎಸ್‌.ಎಸ್‌. ಕಾಲೇಜಿನ ವಿದ್ಯಾರ್ಥಿಯಾಗಿದ್ದ ದಿನಗಳನ್ನು ನೆನಪಿಸಿಕೊಂಡರು. ವೇದಿಕೆ ಮೇಲೆ ಸಹ ಕಾರ್ಯದರ್ಶಿ ಶಂಕರ ಕುಂಬಿ ಇದ್ದರು. ಸತೀಶ ತುರಮರಿ ಸ್ವಾಗತಿಸಿದರು. ವಿಶ್ವೇಶ್ವರಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ವಂದಿಸಿದರು. ಪ್ರೊ. ಧನವಂತ ಹಾಜವಗೋಳ ನಿರೂಪಿಸಿದರು.  

ಕಾರ್ಯಕ್ರಮದಲ್ಲಿ ಶಂಕರ ಹಲಗತ್ತಿ, ಡಾ. ಮಹೇಶ ಧ. ಹೊರಕೇರಿ, ಡಾ. ಜಿನದತ್ತ ಹಡಗಲಿ, ಸುಜಾತಾ ಧಾರವಾಡಕರ ಮನೋಜ ಪಾಟೀಲ, ಹ.ವೆಂ. ಕಾಖಂಡಕಿ, ಡಾ. ಮಾರ್ಕಂಡೇಯ ದೊಡಮನಿ, ಮಹಾಂತೇಶ ನರೇಗಲ್, ಎಸ್‌.ಬಿ. ಗುತ್ತಲ, ಬಿರಾದಾರ, ಸೀತಾರಾಮ ಶೆಟ್ಟಿ, ಎಸ್‌.ಕೆ. ಕುಂದರಗಿ, ವೆಂಕಟೇಶ ದೇಸಾಯಿ, ಕೃಷ್ಣ ಕಟ್ಟಿ, ಸಿ.ಜಿ. ಹಿರೇಮಠ, ರಮೇಶ ನಾಡಗೀರ, ಸುರೇಶ ಹೊರಕೇರಿ, ಚಂದ್ರಶೇಖರ ಅಮೀನಗಡ ಸೇರಿದಂತೆ ಉಪಸ್ಥಿತರಿದ್ದರು. 


ಸುದ್ದಿ ಓದಿ