ಡಾ. ಧರಣಿದೇವಿ ಮಾಲಗತ್ತಿ ದೃಢ ಮನಸ್ಸಿನ ಶ್ರೇಷ್ಠ ಬರಹಗಾರ್ತಿ: ವಿನಯಾ ಒಕ್ಕುಂದ
ಧಾರವಾಡ 27: ದೇಹಕ್ಕಿಂತ ಮನಸ್ಸು ಶಕ್ತಿಶಾಲಿಯಾದದ್ದು. ಡಾ. ಧರಣಿದೇವಿ ಮಾಲಗತ್ತಿ ಅವರು ಓರ್ವ ದೃಢ ಮನಸ್ಸಿನ ಶ್ರೇಷ್ಠ ಬರಹಗಾರ್ತಿ. ಆಧುನಿಕ ಮಹಿಳಾ ಸಂವೇದನೆಗಳನ್ನು ತಮ್ಮ ಸೃಜಶೀಲ ಸಾಹಿತ್ಯಕ್ಕೆ ಬಳಸಿಕೊಂಡರು. ಅವರು ಬರವಣಿಗೆಗಳು ಸ್ತ್ರೀವಾದಿ ನೆಲೆಗಟ್ಟಿನ ಮೇಲೆ ರಚನೆಯಾಗಿವೆ ಎಂದು ಡಾ. ವಿನಯಾ ಒಕ್ಕುಂದ ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಶಾಂತಲಾ ಪಾಟೀಲ ದತ್ತಿ ಅಂಗವಾಗಿ ಆಯೋಜಿಸಿದ್ದ ‘ಶಾಂತಲಾ ಪಾಟೀಲ ಸಾಹಿತ್ಯ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಅಭಿನಂದನಾ ನುಡಿಗಳನ್ನಾಡುತ್ತಾ ಮಾತನಾಡುತ್ತಿದ್ದರು.
ಮುಂದುವರೆದು ಡಾ. ಧರಣಿದೇವಿ ಅವರು 13 ವರ್ಷಗಳವರೆಗೆ ಒಬ್ಬ ಶ್ರೇಷ್ಠ ಪ್ರಾಧ್ಯಾಪಕರಾಗಿ ಕರ್ತವ್ಯ ಪ್ರಜ್ಞೆಯಿಂದ ಕಾರ್ಯನಿರ್ವಹಿಸಿದ್ದರಿಂದ ಅವರ ಸಮಗ್ರ ಸಾಹಿತ್ಯದ ಮೇಲೆ ಶಿಕ್ಷಣ ಪ್ರಭಾವವಿದೆ. ಓರ್ವ ದಕ್ಷ ಪೊಲೀಸ ಅಧಿಕಾರಿಯಾಗಿ ಒತ್ತಡಗಳ ಮಧ್ಯೆಯೂ ಸಾಹಿತಿಗಳಾಗಿ ರೂಪಗೊಳ್ಳಲು ಸಾಧ್ಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯವರಾಗಿ ಉತ್ತರ ಕರ್ನಾಟಕದ ಸಾಹಿತ್ಯದ ಸೊಗಡನ್ನು ತಮ್ಮ ಸಾಹಿತ್ಯದಲ್ಲಿ ಮೇಳೈಸಿಕೊಂಡಿದ್ದಾರೆ ಎಂದರು.
ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಡಾ. ಧರಣಿದೇವಿ ಮಾಲಗತ್ತಿ ಅವರಂತೆ ಅವರ ಪತಿ ಡಾ. ಅರವಿಂದ ಮಾಲಗತ್ತಿ ಅವರು ಶ್ರೇಷ್ಠ ಸಾಹಿತಿಗಳು. ಧರಣಿದೇವಿ ಅವರ ಸಾಹಿತ್ಯದಲ್ಲಿ ಸೂಕ್ಷ್ಮತೆ ಮತ್ತು ವೈಚಾರಿಕ ಚಿಂತನೆಗಳ ನಾನಾ ಮುಖಗಳನ್ನು ಕಾಣಬಹುದು. ಚರಿತ್ರೆಯುದ್ದಕ್ಕೂ ಸ್ತ್ರೀಯರನ್ನು ಕಡೆಗಣಿಸಿದ ಸಂದರ್ಭದಲ್ಲಿ ಎಲ್ಲಾ ಕಟ್ಟಳೆಗಳನ್ನು ಮೀರಿ ಸುಮಾರ 26ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ರಚಿಸಿ ಸಾಹಿತ್ಯ ವಲಯವನ್ನು ಶ್ರೀಮಂತಗೊಳಿಸಿದವರು ಎಂದರು.
2024ರ ಶಾಂತಲಾ ಪಾಟೀಲ ಸಾಹಿತ್ಯ ಪುರಸ್ಕಾರ ಸ್ವೀಕರಿಸಿ, ಸಾಹಿತಿ ಡಾ. ಧರಣಿದೇವಿ ಮಾಲಗತ್ತಿ ಮಾತನಾಡಿ, ಈ ಪ್ರಶಸ್ತಿಗೆ ತನ್ನದೇ ಆದಂತಹ ಘನತೆ ಇದ್ದು, ಇದನ್ನು ಪಡೆದ ನಾನೇ ಧನ್ಯಳು. ಡಾ. ಪಾಟೀಲ ಪುಟ್ಟಪ್ಪ ಓರ್ವ ಪತ್ರಕರ್ತರು ಮಾತ್ರವಲ್ಲ, ದಿಟ್ಟ ಹೋರಾಟಗಾರರು. ಗೋಕಾಕ ಚಳುವಳಿಯ ರೂವಾರಿಯಾಗಿ ಕನ್ನಡ ಅಸ್ಮಿತೆಗಾಗಿ ಅಹರ್ನಿಶಿ ಹೋರಾಡಿ, ಕನ್ನಡಕ್ಕೆ, ಕನ್ನಡದ ನೆಲಕ್ಕೆ ನ್ಯಾಯ ಒದಗಿಸಿಕೊಟ್ಟವರು. ಗಾಂಧೀಜಿಯವರಿಂದ ಪ್ರಭಾವಿತರಾದ ಪಾಪುರವರು ಭಾರತದ ಸ್ವಾತಂತ್ರ್ಯ ಹೋರಾಟ ಹಾಗೂ ಕರ್ನಾಟಕ ಏಕೀಕರಣಕ್ಕಾಗಿ ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಹೋರಾಡಿದ ಅವರ ನಿಷ್ಠೆ, ಬದ್ಧತೆಯನ್ನು ಇಂದಿನ ಯುವಜನಾಂಗ ಜೀವನದಲ್ಲಿ ರೂಢಿಸಿಕೊಳ್ಳಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಕ.ವಿ.ವ. ಸಂಘದಿಂದ ಪ್ರಶಸ್ತಿ ಪುರಸ್ಕೃತರ ಕುರಿತಂತೆ ವಿಚಾರ ಸಂಕಿರಣ ಇಟ್ಟು ಪ್ರಶಸ್ತಿ ಪ್ರದಾನ ಮಾಡುವಂತಾಗಬೇಕು. ಹಾಗೇಯೇ ಐವತ್ತ ಮೂರು ವರ್ಷ ಸಂಘ ಕಟ್ಟಿ ಬೆಳೆಸಿದ ಪಾಟೀಲ ಪುಟ್ಟಪ್ಪ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳುವಂತಾಗಬೇಕು ಎಂದರು.
ದತ್ತಿ ದಾನಿಗಳ ಪರವಾಗಿ ಮಂಜುಳಾ ಹಾರೊಗೊಪ್ಪ, ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಇದ್ದರು. ಶಂಕರ ಕುಂಬಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಜಿನದತ್ತ ಹಡಗಲಿ ಪ್ರಶಸ್ತಿ ಫಲಕ ವಾಚಿಸಿದರು. ಡಾ. ಶೈಲಜಾ ಅಮರಶೆಟ್ಟಿ ವಂದಿಸಿದರು. ವಿಶ್ವೇಶ್ವರಿ ಬ. ಹಿರೇಮಠ ನಿರೂಪಿಸಿದರು.
ಸತೀಶ ತುರಮರಿ, ವೀರಣ್ಣ ಒಡ್ಡೀನ, ಡಾ. ಶ್ರೀಶೈಲ ಹುದ್ದಾರ, ಡಾ. ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ಡಾ. ಅರವಿಂದ ಮಾಲಗತ್ತಿ, ಡಾ. ಶಶಿಧರ ನರೇಂದ್ರ, ಡಾ. ಡಿ.ಎಂ. ಹಿರೇಮಠ, ಕೆ.ಎಚ್. ಚನ್ನೂರ, ಕುಮಾರ ಬೆಕ್ಕೇರಿ, ಡಾ. ಪ್ರಕಾಶ ಮಲ್ಲಿಗವಾಡ, ಸಿ.ಯು. ಬೆಳ್ಳಕ್ಕಿ, ಎಂ.ಎಂ. ಚಿಕ್ಕಮಠ ಸೇರಿದಂತೆ ಮುಂತಾದವರಿದ್ದರು.