ಶಿಕ್ಷಕ ವೃತ್ತಿಗೆ ಮಾದರಿ ಡಾ. ಢಾಣಕಶಿರೂರ
ಗುಳೇದಗುಡ್ಡ02: ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಭೋದನೆ, ಶಿಷ್ಯವರ್ಗವನ್ನು ಸದಾ ಪ್ರೋತ್ಸಾಹಿಸಿ ಅವರ ಭವಿಷ್ಯವನ್ನು ಉನ್ನತ ಮಟ್ಟಕ್ಕೆ ಬೆಳೆಸುವ, ಶಿಕ್ಷಕ ವೃತ್ತಿಯನ್ನು ಗೌರವಿಸಿ ಸೇವಾ ನಿವೃತ್ತಿ ಹೊಂದುತ್ತಿರುವ ಢಾಣಕಶಿರೂರ ಗುರುಗಳು ಉಳಿದವರಿಗೆ ಮಾದರಿಯಾಗಿದ್ದಾರೆ ಎಂದು ಇಲ್ಲಿನ ಪ್ರತಿಷ್ಠಿತ ಪ್ರಗತಿಪರ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ ಹೇಳಿದರು.
ಸೋಮವಾರ ಪಟ್ಟಣದ ಭಂಡಾರಿ ಮತ್ತು ರಾಠಿ ಪದವಿ ಮಹಾವಿದ್ಯಾಲಯದಲ್ಲಿ ಜರುಗಿದ ಶುಭಕೋರುವ ಸರಳ ಸಭೆಯಲ್ಲಿ ಮಾತನಾಡಿದರು.
ಡಾ.ಡಾಣಕಶಿರೂರ ಸೇವಾ ಜೀವನದಲ್ಲಿ ಶಿಕ್ಷಕ ವೃತ್ತಿಯನ್ನು ಪ್ರೀತಿಯಿಂದ, ಗೌರವದಿಂದ ಕಂಡವರು. ಸಾಕಷ್ಟು ವಿದ್ಯಾರ್ಥಿಗಳನ್ನು ಮಾನಸಿಕವಾಗಿ ತಯಾರು ಮಾಡಿ, ಎಲೆಮರೆ ಕಾಯಿಯಂತೆ ಇದ್ದವರು. ಶಿಸ್ತು, ಸಮಯವನ್ನು ಗೌರವಿಸಿ, ಅದರಂತೆ ನಡೆದರು. ಓದು, ಬರವಣಿಗೆ, ಉಪನ್ಯಾಸ, ಮೃದು ಮಾತು ಇವುಗಳಿಂದಲೇ ಅವರು ಗುರ್ತಿಸಿಕೊಂಡರು. ಅವರ ವೃತ್ತಿ ಬದುಕಿನ ಆ ಮಹತ್ವದ ದಿನಗಳು ಮುಂದಿನ ಜೀವನಕ್ಕೆ ದಾರೀದೀಪವಾಗಲಿ. ಅವರ ಆರೋಗ್ಯ ವೃದ್ಧಿಸಲಿ ಎಂದು ಹಾರೈಸಿದರು.
ಪ್ರಾಂಶುಪಾಲ ಡಾ.ಎನ್.ವೈ.ಬಡನ್ನವರ್ ಮಾತನಾಡುತ್ತಾ ವೃತ್ತಿ ಜೀವನಕ್ಕೆ ಅವರು ತೊಡಗಿಸಿಕೊಂಡ ಬಗೆ ವಿಭಿನ್ನವಾಗಿತ್ತು. ಅಧ್ಯಯನ, ಸಮಯಪಾಲನೆ, ವಿದ್ಯಾರ್ಥಿಗಳು, ಉಪನ್ಯಾಸಗಳೇ ಅವರ ಪ್ರತಿ ಕ್ಷಣದ ಸಂಗಾತಿಗಳಾಗಿದ್ದವು. ರಾಷ್ಟ್ರ, ರಾಜ್ಯಮಟ್ಟದಲ್ಲಿ ಸಮಾಜಶಾಸ್ತ್ರದ ವಿಷಯದಲ್ಲಿ ಸೇಮಿನಾರ್ ನೀಡಿದ, ನಿರರ್ಗಳವಾಗಿ ವಿಷಯ ಕುರಿತು ಮಾತನಾಡುವ ಸಂಪನ್ಮೂಲ ಕಲೆ ಅವರಲ್ಲಿತ್ತು. ಶಿಕ್ಷಕ ವೃತ್ತಿಗೆ ಇವರ ಕೊಡುಗೆ ಅಪಾರವಾಗಿದೆ. ಇವರಿಂದ ಸಮಾಜಶಾಸ್ತ್ರದ ವಿಷಯದ ಅಧ್ಯಯನಶೀಲತೆ ಬೆಳೆಯಲಿ ಎಂದು ಹಾರೈಸಿದರು.
ಕಾಲೇಜು ಆಡಳಿತ ಸಂಸ್ಥೆ ಪರವಾಗಿ ಡಾ.ವಿ.ಎನ್.ಡಾಣಕಶಿರೂರ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು. ಪ್ರಾಧ್ಯಾಪಕ ಎಸ್.ಎಸ್.ಜುಮನಾಳ, ಎಂ.ಎಂ.ಪಾಟೀಲ, ಬಿ.ಯು ಹಣಗಿ, ಡಾ.ಸಿ.ಕೆ.ನಂದಾರ್, ಡಾ. ಎಸ್.ಎಸ್. ಯಂಡಿಗೇರಿ, ಎಂ.ಆರ್.ಚನ್ನದಾಸರ, ಸಿ.ವಿ.ತಿಪ್ಪಾ, ಎಸ್.ಜಿ.ಕಲ್ಯಾಣಿ, ಗ್ರಂಥಾಲಯ ವಿಭಾಗದ ಬಿ.ಎಸ್.ಬಣದ, ಸಂಗಮೇಶ ಚಿಕ್ಕಾಡಿ, ಸಿಬ್ಬಂದಿಗಳಾದ ಸುರೇಶ ಸಾರಂಗಿ, ಸಂಗಮೇಶ ಭದ್ರಣ್ಣವರ್, ನಿಂಗಪ್ಪ ಅಲದಿ, ಎಸ್.ಎಂ.ಪರಗಿ, ಸೇರಿದಂತೆ ಇತರರು ಇದ್ದರು.