ಕರ್ಣಾಟಕ ಬ್ಯಾಂಕ್ದಿಂದ ಸಿಎಸ್ಆರ್ ಯೋಜನೆಯ ಅಡಿಯಲ್ಲಿ ಶಾಲಾ ವಾಹನ ಕೊಡುಗೆ
ಇಂಡಿ: ಪಟ್ಟಣದ ರಾಮಚಂದ ಮೋತಿಚಂದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ(ರಿ)ಗೆ ಗುರುವಾರ ಕರ್ಣಾಟಕ ಬ್ಯಾಂಕ್ ವತಿಯಿಂದ ಸಿ.ಎಸ್.ಆರ್. ಯೋಜನೆಯ ಅಡಿಯಲ್ಲಿ ಶಾಲಾ ವಾಹನವನ್ನು ಕೊಡುಗೆಯಾಗಿ ನೀಡಲಾಯಿತು.
ಕಲಬುರಗಿ ವಿಭಾಗದ ಕರ್ನಾಟಕ ಬ್ಯಾಂಕ್ನ ಅಸಿಸ್ಟಂಟ್ ಜನರಲ್ ಮ್ಯಾನೇಜರ್ ವಿಮಲ ವರ್ಗಿಸ್ ಅವರು ವಾಹನವನ್ನು ಶಾಲೆಗೆ ಹಸ್ತಾಂತರಿಸಿ ಮಾತನಾಡಿ, ನಮ್ಮ ಬ್ಯಾಂಕ್ ಸ್ಥಾಪನೆಗೊಂಡು 100 ವರ್ಷ ಪೂರ್ಣಗೊಳ್ಳುತ್ತಿರುವ ಸುಸಂದರ್ಭದಲ್ಲಿ ಸಾಮಾಜಿಕ ಸೇವೆಯನ್ನು ನೀಡುವ ಉದ್ದೇಶದಿಂದ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಸಾರಿಗೆಗೆ ಅನುಕೂಲವಾಗುವ ದೃಷ್ಟಿಯಿಂದ ಈ ಶಾಲಾ ವಾಹನವನ್ನು ನೀಡಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳು ಹೆಚ್ಚು ಪುಸ್ತಕಗಳನ್ನು ಓದಬೇಕು, ಬ್ಯಾಂಕ್ನಲ್ಲಿ ಉಳಿತಾಯ ಖಾತೆಯನ್ನು ತೆಗೆಯುವ ಮೂಲಕ ಮಕ್ಕಳು ಚಿಕ್ಕಂದಿನಿಂದಲೇ ಹಣ ಉಳಿತಾಯ ಮಾಡುವುದನ್ನು ರೂಢಿಸಿಕೊಳ್ಳಬೇಕು ಅಲ್ಲದೇ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸತ್ಪ್ರಜೆಗಳಾಗಬೇಕೆಂದು ಮಕ್ಕಳಿಗೆ ಕರೆ ನೀಡಿದರು.
ಈ ಶಾಲೆಯು ಗ್ರಾಮೀಣ ಮಟ್ಟದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ಬಗ್ಗೆ ಹಾಗೂ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಿ.ಆರ್.ಶಹಾ ಅವರ ಶೈಕ್ಷಣಿಕ ಕಾಳಜಿಯ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಗುಲ್ಬರ್ಗಾ ವಿಭಾಗದ ಮುಖ್ಯ ವ್ಯವಸ್ಥಾಪಕ ಮತ್ತು ಪ್ರಾದೇಶಿಕ ಮಾರಾಟ ಕಾರ್ಯನಿರ್ವಾಹಕ (ರಿಜಿನಲ್ ಸೇಲ್ಸ್ ಎಕ್ಸಿಕ್ಯೂಟಿವ್) ಎಂ.ಎಸ್.ಎಂ.ಇ ಮತ್ತು ಎಂ.ಐ.ಡಿ ಕಾರ್ೋರೇಟ್ ಬಿಜಿನೆಸ್ ಅಧಿಕಾರಿ ನಾಗಾರ್ಜುನರೆಡ್ಡಿ ಹಾಗೂ ಕರ್ಣಾಟಕ ಬ್ಯಾಂಕ್ ಇಂಡಿ ಶಾಖೆಯ ಮ್ಯಾನೇಜರ್ ಪವನ್.ಅಗ್ನಿಹೋತ್ರಿ ಅವರು ಭಾಗವಹಿದ್ದರು.
ಈ ಸಂದರ್ಭದಲ್ಲಿ ಶಾಲಾ ವಾಹನವನ್ನು ಸಂಸ್ಥೆಯ ಅಧ್ಯಕ್ಷರಿಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಿ.ಆರ್.ಶಹಾ ಮಾತನಾಡಿ, ಕರ್ಣಾಟಕ ಬ್ಯಾಂಕ್ನ ಈ ವಾಹನವನ್ನು ಕೊಡುಗೆ ನೀಡಿದ್ದಕ್ಕೆ ಎಲ್ಲ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತಾ, ಈ ಗಡಿನಾಡಿನ ಸಂಸ್ಥೆಯ ಅಭಿವೃದ್ಧಿಗೆ ತಮ್ಮ ಸಹಾಯ ಸಹಕಾರ ಮುಂದುವರೆಯಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಚಿನ್ ಶಹಾ, ಪದವಿ ಪೂರ್ವ ವಿಭಾಗದ ಪ್ರಾಂಶುಪಾಲೆ ಪರವೀಣ ಜಮಾದಾರ ಶಾಲಾ ವಿಭಾಗದ ಪ್ರಾಚಾರ್ಯ ಪ್ರಕಾಶ ಪಾಟೀಲ್, ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕರಾದ ಲೋಕೇಶ ಸೋಂತ ನಿರೂಪಿಸಿದರೆ ಅನ್ವರ್ ಮುಲಾನಿ ವಂದಿಸಿದರು.