ಇಂಡಿ

ಪ್ರತಿಫಲಾಪೇಕ್ಷೆ ಇಲ್ಲದೇ ಕೊಡುವುದೇ ರಕ್ತದಾನ: ಮುರುಘೇಂದ್ರ ಶ್ರೀ

ಪ್ರತಿಫಲಾಪೇಕ್ಷೆ ಇಲ್ಲದೇ ಕೊಡುವುದೇ ರಕ್ತದಾನ: ಮುರುಘೇಂದ್ರ ಶ್ರೀ

ಇಂಡಿ: ಜಗತ್ತಿನ ಅತಿದೊಡ್ಡ ಸಂಶೊಧನೆ ಎಂದರೆ ಒಬ್ಬ ಮನುಷ್ಯನ ರಕ್ತ ಇನ್ನೊಬ್ಬನ ಜೀವ ಉಳಿಸಲು ಉಪಯೋಗಿಸುವುದು. ಇದರಿಂದ ಹಲವಾರು ಜನರು ಸಾವಿನಿಂದ ಪಾರಾಗಿದ್ದಾರೆ. ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ತನ್ನ ರಕ್ತವನ್ನು ಸ್ವಯಂ ಪ್ರೇರಿತನಾಗಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಕೊಡುವುದಕ್ಕೆ “ರಕ್ತದಾನ” ಎಂದರು ಎಂದು ಶಿರಶ್ಯಾಡ ಸಂಸ್ಥಾನ ಹಿರೇಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಹೇಳಿದರು. 

ಶನಿವಾರ ತಾಲ್ಲೂಕಿನ ಶಿರಶ್ಯಾಡ ಗ್ರಾಮದಲ್ಲಿ ಲಿಂ. ಮುರುಘೇಂದ್ರ ಶಿವಾಚಾರ್ಯರ 42 ನೇ ಪುಣ್ಯಸ್ಮರಣೋತ್ಸವ, ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ  ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು. 

ರಕ್ತಕ್ಕೆ ವರ್ಷವೀಡೀ ನಿರಂತರವಾಗಿ ಬೇಡಿಕೆ ಇರುತ್ತದೆ. ಏಕೆಂದರೆ, ಅಪಘಾತಗಳು ಹಾಗೂ ತುರ್ತು ಶಸ್ತ್ರಚಿಕಿತ್ಸೆ ಸಂದರ್ಭಗಳು ಒದಗುತ್ತಲೇ ಇರುತ್ತವೆ. ಜೊತೆಯಲ್ಲಿ, ಕ್ಯಾನ್ಸರ್ ರೋಗಿಗಳು, ಗರ್ಭಿಣಿಯರು, ಥಲಸ್ಸೇಮಿಯಾ, ಹೀಮೋಫೀಲಿಯಾ ಮುಂತಾದ ರೋಗಿಗಳು ರಕ್ತದಾನಿಗಳನ್ನೇ ಅವಲಂಬಿಸಿರುತ್ತಾರೆ. ದಾನಿಗಳು ರಕ್ತದಾನ ಮಾಡಿದರೆ ಮಾತ್ರ ಅವರ ಜೀವ ಉಳಿಸಯಲು ಸಾಧ್ಯವಾಗುತ್ತದೆ ಎಂದರು. 

ಬೀದರ ತಹಶೀಲ್ದಾರ ಪ್ರದೀಪ ಹಿರೇಮಠ ಮಾತನಾಡಿ, ನಮ್ಮ ರಾಜ್ಯದಲ್ಲಿ ಒಂದು ದಿನಕ್ಕೆ ಅಂದಾಜು 800 ರಿಂದ 1000 ಯುನಿಟ್ ಗಳಷ್ಟು ರಕ್ತದ ಬೇಡಿಕೆ ಇದೆ. ಆದರೆ ಕೇವಲ 80ಅ ರಷ್ಟು ರಕ್ತ ಮಾತ್ರ ಪೂರೈಕೆಯಾಗುತ್ತಿದೆ. ಆದ್ದರಿಂದ ತುರ್ತು ಸಂದರ್ಭಗಳಲ್ಲಿ ಜನರ ಜೀವ ಉಳಿಸಲು ರಕ್ತದಾನಕ್ಕೆ ಯುವಕರು ಮುಂದಾಗಿ ಎಂದು ಕರೆ ನೀಡಿದರು. 

ತಾಲೂಕ ವೈದ್ಯಾಧಿಕಾರಿ ಡಾ. ಅರ್ಚನಾ ಕುಲಕರ್ಣಿ ಮಾತನಾಡಿ, ದೇಶದಲ್ಲಿ ರಕ್ತದ ಬೇಡಿಕೆ ಹೆಚ್ಚಿರುವುದರಿಂದ ಸ್ವಯಂ ಪ್ರೇರಿತರಾಗಿ ಮುಂದೆ ಬಂದು ರಕ್ತದಾನ ಮಾಡಲು ಯುವ ಜನತೆ ಹೆಚ್ಚಾಗಿ ಮುಂದೆ ಬರಬೇಕು. ರಕ್ತದಾನ ಮಾಡುವುದರಿಂದ ಶರೀರದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ಶರೀರ ಆರೋಗ್ಯಕರವಾಗಿರಲು ಸಹಕಾರಿಯಾಗುತ್ತದೆ ಎಂದರು. 

ಡಾ. ಎಸ್‌.ಎಚ್‌. ಅತನೂರ ಮಾತನಾಡಿ, ಒಮ್ಮೆ ದಾನಿಗಳಿಂದ ಶೇಖರಿಸಿದ ರಕ್ತ 35 ದಿನಗಳವರೆಗೆ ಮಾತ್ರ ತನ್ನ ಸತ್ವವನ್ನು ಉಳಿಸಿಕೊಂಡಿರುತ್ತದೆ. ಆದ್ದರಿಂದ ಜನರು ಆಗಾಗ ರಕ್ತದಾನ ಮಾಡಿದರೆ ಮಾತ್ರ ನಿರಂತರವಾಗಿ ಅವಶ್ಯಕತೆ ಇರುವವರಿಗೆ ರಕ್ತ ನೀಡಿ ಜೀವ ಉಳಿಸಲು ಸಾಧ್ಯವಾಗುತ್ತದೆ ಎಂದರು. 

ವಾಯ್‌.ಎಂ. ಪೂಜಾರಿ ಮಾತನಾಡಿ, ರಕ್ತದಾನ ಮಾಡುವುದು ಒಂದು ರೀತಿಯ ಸಾಮಾಜಿಕ ಸೇವೆ. ಇದಕ್ಕೆ ರಾಜ್ಯದ ಯುವ ಸಮೂಹ ಸೇರಿದಂತೆ ಪ್ರತಿಯೊಬ್ಬರ ಸಹಕಾರ ಅಗತ್ಯ. ರಕ್ತವಿಲ್ಲದವರಿಗೆ ರಕ್ತದಾನ ಮಾಡುವುದರಿಂದ ಮಾನವೀಯತೆ ಮೌಲ್ಯಗಳಿಗೆ ನ್ಯಾಯ ಒದಗಿಸಿದಂತಾಗುತ್ತದೆ ಎಂದರು. 

ರಕ್ತದಾನ ಶಿಬಿರದಲ್ಲಿ ಡಾ. ಶಾಂತವೀರ ಶಿವಚಾರ್ಯರು, ಡಾ. ಎ.ಎಂ. ಬಾಗವಾನ, ಪ್ರಶಾಂತ ಧೂಮಗೊಂಡ, ಎ.ಎಸ್‌. ಪಾಟೀಲ, ಎಸ್‌.ಎಂ. ಬಿರಾದಾರ, ಎಂ.ಸಿ. ಬಿರಾದಾರ, ಸುನಂದಾ ವಾಡೆ, ಸಚಿನ ತೇಲಿ, ಗುರುದತ್ತ ದೇಸಾಯಿ ಸೇರಿದಂತೆ ಅನೇಕರು ಇದ್ದರು. 

ಶನಿವಾರ ತಾಲ್ಲೂಕಿನ ಶಿರಶ್ಯಾಡ ಗ್ರಾಮದಲ್ಲಿ ಲಿಂ. ಮುರುಘೇಂದ್ರ ಶಿವಾಚಾರ್ಯರ 42 ನೇ ಪುಣ್ಯಸ್ಮರಣೋತ್ಸವ, ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ರಕ್ತದಾನ ಶಿಬಿರಕ್ಕೆ ಅಭಿನವ ಮುರುಘೇಂದ್ರ ಶಿವಾಚಾರ್ಯರು ಚಾಲನೆ ನೀಡಿದರು. 


ಸುದ್ದಿ ಓದಿ