ಕಾಗವಾಡ

ಕಾಗವಾಡ ಚೆಕ್‌ಪೋಸ್ಟ್‌ಗೆ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಭೇಟಿ: ಪರೀಶೀಲನೆ

ಕಾಗವಾಡ ಚೆಕ್‌ಪೋಸ್ಟ್‌ಗೆ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಭೇಟಿ: ಪರೀಶೀಲನೆ

ಲೋಕದರ್ಶನ ವರದಿ 


ಕಾಗವಾಡ 09: ರಾಜ್ಯದಲ್ಲಿ ಕೊರೋನಾ ಮತ್ತು ಓಮಿಕ್ರಾನ್ ರೂಪಾಂತರಿ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಎರಡು ರಾಜ್ಯಗಳ ಮಧೆ್ಯೆ ಚೆಕ್‌ಪೋಸ್ಟ್‌ ನಿರ್ಮಿಸಲಾಗಿದೆ. ಪ್ರತಿಯೊಬ್ಬರು ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ತೆರಳಬೇಕಾದರೆ ಪ್ರತಿಯೊಬ್ಬರ ಆರ್‌.ಟಿ.ಪಿಸಿ.ಆರ್ ಪ್ರಮಾಣ ಪತ್ರ ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಹೇಳಿದರು. 

 ಅವರು ರವಿವಾರ ದಿ.9 ರಂದು ಬೆಳಿಗ್ಗೆ ಕರ್ನಾಟಕದಿಂದ ಮಹಾರಾಷ್ಟ್ರವನ್ನು ಸಂಪರ್ಕಿಸುವ ಕಾಗವಾಡ-ಗಣೇಶವಾಡಿ, ಕಾಗವಾಡ-ಮಿರಜ್ ಮಾರ್ಗದಲ್ಲಿ ಪ್ರಾರಂಭಿಸಿದ ಕೋವಿಡ್ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ಅಲ್ಲಿಯ ಸ್ಥಿತಿಗತಿಗಳನ್ನು ಪರೀಶೀಲಿಸಿ ಮಾತನಾಡುತ್ತಿದ್ದರು. 

  ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್ ಹಾಗೂ ಓಮಿಕ್ರಾನ ನಿಯಂತ್ರಣದಲ್ಲಿದೆ. ಆದರೆ ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕು ಹೆಚ್ಚಾಗಿರುವದರಿಂದ ಆ ಭಾಗದ ಪುಣೆ, ಮುಂಬೈನಂತಹ ನಗರ ಪ್ರದೇಶಗಳಿಂದ ಬರುವ ಪ್ರಯಾಣಿಕರಿಂದ  ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕಾಗಿ ಗಡಿಯಲ್ಲಿ ಯಾರೇ ಬಂದರೂ ಅವರ ಆರ್‌.ಟಿ.ಪಿ,ಸಿ.ಆರ್ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ಬಿಡಲಾಗುತ್ತಿದೆ. ವರದಿ ಇಲ್ಲದವರನ್ನು ಮುಲಾಜಿಲ್ಲದೆ ವಾಪಸ್ ಕಳಿಸುವಂತೆ ಅಲ್ಲಿಯ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು.  

ಬೆಳಗಾವಿ ಜಿಲ್ಲೆ ಭೌಗೋಲಿಕವಾಗಿ ದೊಡ್ಡದಿದ್ದು ಇಲ್ಲಿ ಸದ್ಯ ಸೋಂಕು ನಿಯಂತ್ರಣದಲ್ಲಿದೆ, ಅದಕ್ಕಾಗಿ ತಾವೆಲ್ಲರು ಮೈಮರೆಯದೆ ದಿನದ 24 ಗಂಟೆ ಜಾಗೃತರಾಗಿದ್ದು ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು. ಕಾಗವಾಡದಲ್ಲಿಯ ಚೆಕ್‌ಪೋಸ್ಟ್‌ದಲ್ಲಿ ಕಾರ್ಯನಿರ್ವಹಿಸುವ ಕಂದಾಯ, ಆರೋಗ್ಯ, ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿ ಇದೇ ತರಹ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು. 

 ಇಲ್ಲಿಯವರೆಗೆ ಕಾಗವಾಡ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಮಾಡಲಾಗಿ 16 ಜನ ಕೋವಿಡ್ ಸೋಂಕಿತರು ಪತ್ತೆಯಾಗಿದ್ದು, ಎಲ್ಲರೂ ಮಹಾರಾಷ್ಟ್ರದವರಾಗಿದ್ದಾರೆ. ಅವರನ್ನು ಮರಳಿ ಕಳುಹಿಸಲಾಗಿದೆ ಎಂದರು.  

 ಪ್ರತಿಯೊಬ್ಬರು ಕೋವಿಡ್ ಸೋಂಕನ್ನು ನಿಯಂತ್ರಿಸಲು ಮುಖಕ್ಕೆ ಮಾಸ್ಕ್‌ ಧರಿಸಿಕೊಂಡು ಅವಶ್ಯಕತೆ ಇದ್ದಾಗ ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಂಡು ಹೊರಬಂದು  ಕೆಲಸ ಕಾರ್ಯ ಮಾಡುವಂತೆ ಜಿಲ್ಲಾಧಿಕಾರಿಗಳು ಹೇಳಿದರು.  

ಈ ವೇಳೆ ತಹಸೀಲ್ದಾರ ರಾಜೇಶ ಬುರ್ಲಿ, ಡಿವೈಎಸ್‌ಪಿ ಎಸ್‌.ವಿ.ಗೀರೀಶ ಡಿಎಚ್‌.ಓ ಎಸ್,ಎಸ್,ಗಡಾದ, ಸಿಪಿಐ ಶಂಕರಗೌಡ ಬಸಗೌಡರ, ಪಿಎಸ್ ಐ ಬಿ.ಎಂ.ರಬಕವಿ, ವೈದ್ಯಾಧಿಕಾರಿ ಪುಷ್ಪಲತಾ ಸುಣ್ಣದಕಲ್, ಡಾ.ಬಸಗೌಡ ಪಾಟೀಲ, ಡಾ.ಬಿ.ಎಂ.ಪಾಟೀಲ, ಮನಿಷ ಶಹಾ, ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ