ರಾಣೆಬೆನ್ನೂರ

ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಬೇಕು ಇಲ್ಲದಿದ್ದರೆ, ಜಿಲ್ಲಾ ಬಂದ್‌ಗೆ ಕರೆ ನೀಡಲಾಗುವುದು: ರವೀಂದ್ರಗೌಡ

ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಬೇಕು ಇಲ್ಲದಿದ್ದರೆ, ಜಿಲ್ಲಾ ಬಂದ್‌ಗೆ ಕರೆ ನೀಡಲಾಗುವುದು: ರವೀಂದ್ರಗೌಡ

ಪೂರ್ಣ ಪರಿಹಾರ ದೊರೆಯಬೇಕಾದದ್ದು ವಿಮಾ ಯೋಜನೆಯ ನಿಯಮ

ರಾಣೇಬೆನ್ನೂರು 31: ಬರಗಾಲ ಬಂದಾಗ ಆಯಾ ಸರಕಾರಗಳು ಬರಗಾಲ ಪೀಡಿತ ಜಿಲ್ಲೆಯೆಂದು ಅಧಿಕೃತವಾಗಿ ಘೋಷಣೆ ಮಾಡಿದಾಗ ಆ ಸಂದರ್ಭದಲ್ಲಿ ಬೆಳೆವಿಮೆ ಮಾಡಿಸಿಕೊಂಡ ವಿಮಾ ಕಂಪನಿಗಳು ವಿಮಾ ಮಾಡಿಸಿದ ಎಲ್ಲಾ ಬೆಳೆಗಳಿಗೂ ಸರಕಾರದ ಆದೇಶದ ಮೇರೆಗೆ ಮಧ್ಯಂತರ ಪರಿಹಾರವಾಗಿ 25ಅ ವಿಮಾ ಹಣವನ್ನು ರೈತರ ಖಾತೆಗೆ ಜಮಾ ಮಾಡಿ ಉಳಿದ 75ಅ ಹಣವನ್ನು ಬರುವ ಮುಂಗಾರು ಹಂಗಾಮಿನ ಜೂನ್, ಜುಲೈ ತಿಂಗಳಲ್ಲಿ ಜಮಾ ಮಾಡಬೇಕಾದುದ್ದು ವಿಮಾ ಯೋಜನೆಯ ನಿಯಮ. ಈ ನಿಯಮಗಳನ್ನು ಮೀರಿ ಮಧ್ಯಂತರ ವಿಮಾ ಪರಿಹಾರ ನೀಡಿದ ರೈತರಿಗೆ ಉಳಿದ 75ಅ ಹಣವನ್ನು ಬಿಡುಗಡೆ ಮಾಡುವುದನ್ನು ಬಿಟ್ಟು ಕೆಲವು ಭಾಗಗಳಲ್ಲಿ ಬೆಳೆ ಇಳುವರಿ ಬಂದಿದೆ ಹಾಗೂ ಇನ್ನಿತರೆ ತಾಂತ್ರಿಕ ಕಾರಣಗಳನ್ನು ನೀಡುತ್ತಾ ರೈತರಿಗೆ ವಂಚಿಸುವ ಪ್ರವೃತ್ತಿಯನ್ನು ಬಿಟ್ಟು ಕೂಡಲೇ ಹಣ ಬಿಡುಗಡೆ ಮಾಡಬೇಕು ಇಲ್ಲದಿದ್ದರೆ ನೋಂದ ರೈತರಿಂದ ಹಾವೇರಿ ಜಿಲ್ಲಾ ಬಂದ್ ಕರೆ ನೀಡಲಾಗುವುದು, ಕಾರಣ ಜಿಲ್ಲಾಧಿಕಾರಿಗಳು ತಕ್ಷಣವೇ ಮಧ್ಯ ಪ್ರವೇಶಿಸಬೇಕೆಂದು ರೈತ ಮುಖಂಡ ರವೀಂದ್ರಗೌಡ ಎಫ್‌. ಪಾಟೀಲ ಎಚ್ಚರಿಸಿದರು.  

ಅವರು ಇಂದು ವಿವಿಧ ರೈತ ಸಂಘಟನೆಗಳ ಮುಖಂಡರೊಂದಿಗೆ ಚರ್ಚೆ ನಡೆಸಿ ನಂತರ ನಗರದ ಬಸ್‌ಸ್ಟ್ಯಾಂಡ್ ಹತ್ತಿರ ರಸ್ತೆ ತಡೆ ಮಾಡಿ ತಹಶೀಲ್ದಾರ್ ಮೂಲಕ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಬೆಳೆವಿಮಾ ಕಂಪನಿಗಳು ಕೆಲವು ಉನ್ನತಮಟ್ಟದ ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡು ರೈತರನ್ನು ವಂಚಿಸುತ್ತಿದ್ದಾರೆ. ಕಳೆದ ಬಾರಿ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಇದೇ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದ ಹಲವು ಜಿಲ್ಲೆಗಳನ್ನು ಬರಗಾಲ ಪೀಡಿತ ಜಿಲ್ಲೆಯೆಂದು ಘೋಷಣೆ ಮಾಡಿದ್ದು ಅದರಲ್ಲಿ ಹಾವೇರಿ ಜಿಲ್ಲೆಯೂ ಕೂಡ ಒಂದಾಗಿದೆ.  

ಸರಕಾರ ಬರಗಾಲ ಪೀಡಿತ ಜಿಲ್ಲೆಯೆಂದು ಘೋಷಿಸಿದ ತಕ್ಷಣ ಬೆಳೆವಿಮೆ ಮಾಡಿಸಿಕೊಂಡ ವಿಮಾಕಂಪನಿಗಳು ಮಧ್ಯಂತರ ಪರಿಹಾರವಾಗಿ ತಕ್ಷಣವೇ 25ಅ ಪರಿಹಾರವನ್ನು ರೈತರ ಖಾತೆಗೆ ಜಮಾ ಮಾಡಿದ್ದು ಇರುತ್ತದೆ. ಉಳಿದ 75ಅ ಪೂರ್ಣ ಪ್ರಮಾಣದ ಪರಿಹಾರದ ಹಣವನ್ನು ಈ ಸಂದರ್ಭದಲ್ಲಿ ರೈತರ ಖಾತೆಗೆ ಜಮಾ ಮಾಡಬೇಕಾಗಿತ್ತು, ಇದು ನಿಯಮ. ಈಗ ವಿಮಾ ಕಂಪನಿಗಳು ರೈತರಿಗೆ ಏನೇನೊ ಸಬೂಬು ಹೇಳುತ್ತಾ ಮಕ್ಮಲ್ ಟೋಪಿ ಹಾಕುತ್ತಲಿವೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಈರಣ್ಣ ಹಲಗೇರಿ ಮಾತನಾಡಿ ಈ ಹಗರಣದ ಹಿಂದೆ ಕೃಷಿ ಮಂತ್ರಿಗಳು ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಭಾಗಿಯಾಗಿ ಬೆಳೆವಿಮೆ ಕಂಪನಿಯೊಂದಿಗೆ ಕೈಜೋಡಿಸಿರುವುದು ಈಗಾಗಲೇ ಸಾಬೀತಾದಂತಾಗುತ್ತದೆ, ಕೂಡಲೇ ರೈತರು ಮಂತ್ರಿಗಳನ್ನು, ಅಧಿಕಾರಿಗಳನ್ನು ಬೆತ್ತಲು ಮಾಡುವ ಮುನ್ನ ನ್ಯಾಯಯುತವಾಗಿ ರೈತರ ಖಾತೆಗೆ ಉಳಿದ ಹಣ ಜಮಾ ಮಾಡಬೇಕೆಂದು ಎಚ್ಚರಿಸಿದರು. ಸ್ಥಳಕ್ಕೆ ಆಗಮಿಸಿದ ಕಂದಾಯ ಇಲಾಖೆಯ ಶಿರಸ್ತೇದಾರ ವಿ.ಎಸ್‌. ದೊಡ್ಡಮನಿಯವರು ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ತುರ್ತಾಗಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದೆಂದರು.   

ರೈತ ಮುಖಂಡ ಯಲ್ಲಪ್ಪ ಓಲೇಕಾರ, ಸುರೇಶ ಮಲ್ಲಾಪುರ, ವಿರುಪಾಕ್ಷಗೌಡ ಪಾಟೀಲ, ಸುಶಿಲಮ್ಮ ಅಮರಾವತಿ, ತಿಪ್ಪಣ್ಣ ಜೋಗಿ,  ವಿಶ್ವನಾಥ ಕೆಂಪಣ್ಣನವರ, ಚಂದ್ರ​‍್ಪ ಕೆಂಪಣ್ಣನವರ, ಕೆ.ವಿ. ರುದ್ರಮುನಿ, ಎಂ.ಬಿ. ಸಂದಿಮನಿ, ಹರಿಹರಗೌಡ ಪಾಟೀಲ, ಬಸವರಾಜ ಯಲ್ಲಕ್ಕನವರ ಮುಂತಾದವರು ಹಾಜರಿದ್ದರು. 


ಸುದ್ದಿ ಓದಿ