ಸಾರ್ವಜನಿಕರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ
ಇಂಡಿ: ಪಟ್ಟಣದ ಮಿನಿವಿಧಾನಸೌಧದಲ್ಲಿರುವ ತಹಸೀಲ್ದಾರ ಕಚೇರಿಗೆ ಮಂಗಳವಾರ ವಿಜಯಪುರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಬಹುತೇಕ ಹೊಲ-ಗದ್ದೆಗಳಿಗೆ ಹೋಗುವ ರಸ್ತೆ ಇಲ್ಲದ ರೈತರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು ರಸ್ತೆ ಇಲ್ಲದ ಕಾರಣ ಮಕ್ಕಳಿಗೆ ಶಾಲೆಗೆ ಕಳಿಸಲು ತೊಂದರೆಯಾಗುತ್ತಿರುವುದನ್ನು ಜಿಲ್ಲಾಧಿಕಾರಿಗಳ ಗಮನಕ್ಕ ತಂದರು.
ಕೂಡಲೆ ಅರ್ಜಿ ಬಂದ ಸ್ಥಳಗಳಿಗೆ ಭೇಟಿ ನೀಡಿ ವಾಸ್ತವಾಂಶ ತಿಳಿದುಕೊಂಡು ಪಕ್ಕದ ರೈತರ ಮನವೊಲಿಸಿ ರೈತರ ಸಮಸ್ಯೆ ಪರಿಹರಿಸಲು ಸೂಚಿಸಿದರು.
ಜಯಕರ್ನಾಟಕ ಸಮಘಟನೆ ಪದಾಧಿಕಾರಿಗಳು ಗ್ರಾಮೀಣ ಭಾಗಗಳಲ್ಲಿ ಅಕ್ರಮವಾಗಿ ಮಧ್ಯ ಮಾರಾಟವಾಗುತ್ತಿದೆ. ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೆ ಅವರ ಸಿಬ್ಬಂದಿಗಳು ಮೊದಲೇ ದಾಳಿ ಮಾಡುವ ಸೂಚನೆ ನೀಡಿ ಹೋಗುತ್ತಾರೆ. ಹಳ್ಳಿಗಳ ಕಿರಾಣಿ ಹಾಗೂ ಪಾನ್ಶಾಪ್ಗಳಲ್ಲಿಯೂ ಅಕ್ರಮ ಮಧ್ಯೆ ಸಿಗುತ್ತಿದೆ. ಇದರಿಂದ ಸಾವಿರಾರು ಜನ ಮಕ್ಕಳು ಮಹಿಳೆಯರು ಬೀದಿಪಾಲಾಗಿದ್ದಾರೆ ಎಂದು ಅಬಕಾರಿ ಅಧಿಕಾರಿಗಳ ವಿರುಧ್ಧ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಯಾವ ಹಳ್ಳಿ ಮತ್ತು ಯಾರು ಮಧ್ಯೆ ಮಾರಾಟ ಮಾಡುತ್ತಿದ್ದಾರೆ ಲಿಖಿತವಾಗಿ ನನಗೆ ಮಾಹಿತಿ ನೀಡಿ ಎಂದಾಗ ಸಮಘಟಕರು ಹಂಜಗಿ ಗ್ರಾಮದ ಬಗ್ಗೆ ಲಿಖಿತವಾಗಿ ತಿಳಿಸಿದರು. ಕೂಡಲೆ ಸಂಬಂಧಿಸಿದ ಅಬಕಾರಿ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗೆ ದೂರವಾಣಿ ಕರೆ ಮಾಡಿ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಬಿಪಿಎಲ್ ಕಾರ್ಡ ಸ್ಥಗಿತಗೊಂಡಿದ್ದು ಇದರಿಂದ ಭಾಗ್ಯಲಕ್ಷ್ಮೀ ಬಾಂಡ್ ಪಡೆಯುವ ಬಡವರಿಗೆ ತೊಂದರೆಯಾಗುತ್ತಿದೆ ಎಂಬ ಆರೋಪ ಬರುತ್ತಿದ್ದಂತೆ ಕೂಡಲೆ ಸಿಡಿಪಿಓ ಹಾಗೂ ಆಹಾರ ಇಲಾಖೆಯ ಸಿಬ್ಬಂದಿಗಳಿಗೆ ಕರೆದು ಅವರು ಬಡವರು ಬಿಪಿಎಲ್ ಕಾರ್ಡಿಗೆ ಅರ್ಹರು ಎಂಬ ಬಗ್ಗೆ ಪರೀಶೀಲಿಸಿ ಅವರಿಗೆ ಯೋಜನೆ ಮುಟ್ಟಬೇಕಾಗಿದ್ದಲ್ಲಿ ಇಲಾಖೆಯಿಂದ ಪತ್ರವ್ಯವಹಾರ ಮಾಡಿ ಭಾಗ್ಯಲಕ್ಷ್ಮೀ ಬಾಂಡ್ ಮಾಡಿಕೊಡಬೇಕು. ಬಡವರಿಗೆ ಅನ್ಯಾಯವಾಗದಂತೆ ಕಾರ್ಯ ಮಾಡಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸರ್ವೇ ಇಲಾಖೆಯಲ್ಲಿ ಬೇಗನೆ ಕೆಲಸವಾಗುತ್ತಿಲ್ಲ, ನಾಲ್ಕಾರು ತಿಂಗಳುಗಳ ಕಾಲ ಕಾಲಹರಣ ಮಾಡುತ್ತಿರುವ ಬಗ್ಗೆ ರೈತರೋರ್ವರು ಅಳಲು ತೋಡಿಕೊಂಡಾಗ ಎಡಿಎಲ್ಆರ್ ಅವರಿಗೆ ರೈತರ ಯಾವುದೇ ಕಾರ್ಯಗಳು ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಸೂಚಿಸಿದರು.
ಆಸ್ಪತ್ರೆಯಲ್ಲಿ ಗರ್ಭಿಣಿ ಬಾಣಂತಿಯರು ಬಂದರೆ ಸಿಜೇರಿಯನ್ ಮಾಡಿಕೊಳ್ಳಲು ವೈದ್ಯರಿಲ್ಲ. ನರ್ಸಗಳೇ ಸುಲಭವಾಗುವ ಹೆರಿಗೆ ಮಾಡಿಕೊಳ್ಳುತ್ತಾರೆ ಎಂದು ದೂರುಗಳು ಬಂದ ಹಿನ್ನೆಲೆ ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಗೆ ದೂರವಾಣಿ ಕರೆ ಮಾಡಿ ಹೆರಿಗೆ ವೈದ್ಯರನ್ನು ನೇಮಿಸಲು ಸೂಚಿಸಿದರು.
ಕಂದಾಯ ಉಪವಿಭಾಗಾಧಿಕಾರಿ ರಾಮಚಂದ್ರ ಗಡದೆ, ತಹಸೀಲ್ದಾರ ನಾಗಯ್ಯ ಹಿರೇಮಠ, ಇಓ ಸುನೀಲ ಮದ್ದಿನ್, ಪುರಸಭೆ ಮುಖ್ಯಾಧಿಕಾರಿ ಲಕ್ಷ್ಮೇಶ ಕೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಜೆ. ಇಂಡಿ, ಆರೋಗ್ಯ ಇಲಾಖೆಯ ಅಧಿಕಾರಿ ಡಾ. ಅರ್ಚನಾ ಕುಲಕರ್ಣಿ, ಹೆಸ್ಕಾಂ ಇಲಾಖೆಯ ಡಿ.ಎಮ್. ಮೂಲಿಮನಿ, ತಾಲೂಕಾ ಆಸ್ಪತ್ರೆಯ ವೈದ್ಯ ಬಿರಾದಾರ ಮತ್ತಿತರರು ಇದ್ದರು.