ಗೋಕಾಕ್

ಕಜಾಪದಿಂದ ಆಹಾರ ಕಿಟ್ ವಿತರಣೆ

ಕಜಾಪದಿಂದ ಆಹಾರ ಕಿಟ್ ವಿತರಣೆ

ಗೋಕಾಕ 28: ನಾಡೋಜ ಡಾ.ಎಚ್‌.ಎಲ್‌.ನಾಗೇಗೌಡ ಸಂಸ್ಥಾಪಿತ, ‘ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಐ.ಎ.ಎಸ್‌. ಅಧಿಕಾರಿ (ವಿಶ್ರಾಂತ) ಟಿ.ತಿಮ್ಮೇಗೌಡ ಅವರ ಧನಸಹಾಯ ಮತ್ತು ಸಲಹೆಯ ಮೇರೆಗೆ, ಪ್ರಸ್ತುತ ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ, ಬೆಳಗಾವಿ ಜಿಲ್ಲೆಯ ಅಸಂಘಟಿತ ಬಡ ಜನಪದ ಕಲಾವಿದರಿಗೆ, ಕಜಾಪ ಜಿಲ್ಲಾ ಘಟಕವು ದಿ. ನಿಂಗಣ್ಣ ಸಣ್ಣಕ್ಕಿ ಪ್ರತಿಷ್ಠಾನದ ಸಹಯೋಗದಲ್ಲಿ, ಜಿಲ್ಲಾಧ್ಯಕ್ಷ ಡಾ. ಸಿ.ಕೆ.ನಾವಲಗಿ ನೇತೃತ್ವದಲ್ಲಿ, ಜೂನ್ 27 ರಂದು ‘ಹುನಕುಪ್ಪಿ’ಯಲ್ಲಿ ನಿಂಗಣ್ಣ ಸಣ್ಣಕ್ಕಿ ಅವರ ತೋಟದ ಮನೆಯಲ್ಲಿ, ಜಾನಪದ ವಿದ್ವಾಂಸ ಡಾ. ನಿಂಗಣ್ಣ ಸಣ್ಣಕ್ಕಿ ಅವರ ಸ್ಮರಣಾರ್ಥ ಆಹಾರದ ಕಿಟ್‌ಗಳನ್ನು ಪದ್ಮಾವತಿ ಸಣ್ಣಕ್ಕಿಯವರು ವಿತರಿಸಿದರು. 

ಜಾನಪದ ತಜ್ಞ ಡಾ. ಸಿ.ಕೆ.ನಾವಲಗಿ ಅವರು ಮಾತನಾಡಿ ಜಿಲ್ಲೆಯಲ್ಲಿ ಕರ್ನಾಟಕದಲ್ಲಿ ಸಾಕಷ್ಟು ಜನಪದ ಕಲೆಗಳಿವೆ; ಕಲಾವಿದರೂ ಇದ್ದಾರೆ. ಆದರೆ ಅವನ್ನು ನೋಡುವ ಕಣ್ಣುಗಳು, ಕೇಳುವ ಕಿವಿಗಳು ಇಲ್ಲದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಕಲಾವಿದರ ಹೊಟ್ಟೆ ತುಂಬಿದರೆ, ಕಲೆಗಳು ತಾವಾಗಿಯೇ ಉಳಿದು ಬೆಳೆಯುತ್ತವೆಂದು ಕಿವಿಮಾತು ಹೇಳಿದರು. 

ಬಸಪ್ಪ ಸಣ್ಣಕ್ಕಿ, ಯಲ್ಲವ್ವ ಸಣ್ಣಕ್ಕಿ, ವಿನೂತ ನಾವಲಗಿ, ಮಂಗಲಾ ಬೆಟಗೇರಿ, ಶಂಕರ ಗೌಡ್ರು ವೇದಿಕೆಯಲ್ಲಿದ್ದರು. ಕೊರೊನಾ ನಿಯಮ ಪಾಲನೆಯೊಂದಿಗೆ ಭಜನಾಪದ, ಸೋಬಾನೆಪದ ಕಲಾವಿದರು ಹಾಡಿದರು. 

ನ್ಯಾಯವಾದಿ ಬಲದೇವ ಸಣ್ಣಕ್ಕಿ ಸ್ವಾಗತಿಸಿ ಮಾತನಾಡಿದರು. ಕಲಾವಿದ ನ್ಯಾಯವಾದಿ ಉದ್ದಣ್ಣ ಗೊಡೇರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಶಾಲ ಸಣ್ಣಕ್ಕಿ ಸಂಘಟಿಸಿದರು, ಪ್ರಧಾನ ಕಾರ್ಯದರ್ಶಿ-ಕಲಾವಿದ ಈಶ್ವರಚಂದ್ರ ಬೆಟಗೇರಿ ವಂದಿಸಿದರು. 


ಸುದ್ದಿ ಓದಿ