ಧಾರವಾಡ - ಹುಬ್ಬಳ್ಳಿ

ಶಿಕ್ಷಣ ಕೇತ್ರದ ಧೃವತಾರೆ ಡಾ. ನ. ವಜ್ರಕುಮಾರವರ ದ್ವಿತೀಯ ಪುಣ್ಯಸ್ಮರಣೆ

ಶಿಕ್ಷಣ ಕೇತ್ರದ ಧೃವತಾರೆ ಡಾ. ನ. ವಜ್ರಕುಮಾರವರ ದ್ವಿತೀಯ ಪುಣ್ಯಸ್ಮರಣೆ

ಧಾರವಾಡ 02 : ಶಿಕ್ಷಣ ಕಾಶಿಯಾಗಿ ಹೆಸರುವಾಸಿಯಾಗಲು, ಶಿಕ್ಷಣದ ಬೆಳಕನ್ನು ಪಸರಿಸಿದವರು ಶೈಕ್ಷಣಿಕ ಲೋಕದ ಧೃವತಾರೆ ಡಾ. ನ. ವಜ್ರಕುಮಾರವರು. ಧಾರವಾಡದಲ್ಲಿ ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಿ, ವಿಸ್ತರಿಸಿ ಯಶಸ್ವಿಯಾಗಿ, ಧಾರವಾಡ ನಗರವು ಒಂದು ಉತ್ತಮ ವಿದ್ಯಾಕೇಂದ್ರವನ್ನಾಗಿ ಮಾಡುವಲ್ಲಿ ಅವರು ಸಫಲರಾದವರು. ಡಾ. ನ. ವಜ್ರಕುಮಾರವರು ಮುಚ್ಚುವ ಸ್ಥಿತಿಯಲ್ಲಿದ್ದ ಜನತಾ ಶಿಕ್ಷಣ ಸಮಿತಿಯನ್ನು ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಯವರ ಆಶೀರ್ವಾದದಿಂದ ಜೆ.ಎಸ್‌.ಎಸ್ ಸಂಸ್ಥೆಯನ್ನು ತಮ್ಮ ಸುಪರ್ಧಿಗೆ ತೆಗೆದುಕೊಂಡು ಅದರ ಕರ್ಣಧಾರತ್ವವನ್ನು ಡಾ. ನ ವಜ್ರಕುಮಾರವರಿಗೆ ವಹಿಸಿದ್ದು, ಆ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಅಣತಿಯೇ ಆಗಿತ್ತು, ಅದೇ ಕಾರಣದಿಂದಾಗಿಯೇ ಅವನತಿಯ ಹಂತದಲ್ಲಿದ್ದ ಸಂಸ್ಥೆ ಇಂದು ಬೃಹದಾಕಾರವಾಗಿ ಬೆಳೆದು ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ನೀಡಿ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುತ್ತಿದೆ ಎಂದು ಜನತಾ ಶಿಕ್ಷಣ ಸಮಿತಿಯಲ್ಲಿ ಆಯೋಜಿಸಲಾಗಿದ್ದ ಡಾ. ನ. ವಜ್ರಕುಮಾರರವರ ದ್ವಿತೀಯ ಪುಣ್ಯ ಸ್ಮರಣೆಯಲ್ಲಿ ದಿವಂಗತ ಡಾ. ನ. ವಜ್ರಕುಮಾರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ಮಾತನಾಡಿದರು.  

ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಪಡೆದುಕೊಂಡು ವಿದ್ಯಾಗಿರಿಗೆ ಕಾಲಿಟ್ಟ ಡಾ. ಎನ್‌. ವಜ್ರಕುಮಾರರವರು ತಮ್ಮ ಸಹಸ್ರಮುಖ ಕರ್ತವ್ಯಗಳಿಂದ ಶಿಕ್ಷಣ ಸಂಸ್ಥೆಗಳ ಯೋಗಕ್ಷೇಮ ನಿರ್ವಹಿಸಿದ ಆಡಳಿತ ಪ್ರತಿಭೆ ಅವರನ್ನು ಶಿಕ್ಷಣ ಲೋಕದ ಭಗೀರಥನನ್ನಾಗಿಸಿತು. ಜೆೆ.ಎಸ್‌.ಎಸ್ ನಲ್ಲಿರುವ ಪ್ರತಿಯೊಂದು ಸಮಸ್ಯೆಗಳ ಪರಿಹಾರಕ್ಕಾಗಿ ಯೋಜನೆಗಳನ್ನು ರೂಪಿಸುತ್ತಾ, ಸಂಸ್ಥೆಯನ್ನು ಅಪಾಯದಿಂದ ಹೊರತಂದರು. ಅಂದು ಡಾ. ನ. ವಜ್ರಕುಮಾರವರು ಇಟ್ಟ ದಿಟ್ಟ ಹೆಜ್ಜೆ ಇಂದು ಜೆ.ಎಸ್‌.ಎಸ್ ಕೆ.ಜಿ.ಇಂದ ಪಿ.ಜಿಯ ವರೆಗೆ 25 ಸಂಸ್ಥೆಗಳನ್ನು ಹೊಂದಿದ್ದು, 22 ಸಾವಿರಕ್ಕೂ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಧಾರೆಯೆರೆಯುತ್ತಿವೆ ಮತ್ತು 700 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಿವೆ ಎಂದು ಹೇಳಿದರು. 

ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಪ್ರಾಧ್ಯಾಪಕರು ಡಾ. ನ. ವಜ್ರಕುಮಾರವರ ಒಡನಾಡಿ ಶ್ರೀಧರ ಹೆಗಡೆಯವರು ಮಾತನಾಡಿ, ಖಾವಂದರು ಸಂಸ್ಥ್ತೆಯನ್ನು ವಹಿಸಿಕೊಂಡಾಗ ಅದರ ಸಾರಥಿಯನ್ನಾಗಿ ವಜ್ರಕುಮಾರವರನ್ನು ನೇಮಿಸಿದರಲ್ಲದೇ ಅದರ ಸಮೀಕ್ಷೆಯನ್ನು ನಡೆಸಲು ತಿಳಿಸಿದರು. ಉಡುಪಿ ಹರಿದಾಸ ಭಟ್ಟರ ಅರ್ಥಶಾಸ್ತ್ರದ ಶಿಷ್ಯರಾಗಿದ್ದ ವಜ್ರಕುಮಾರವರು ಅಲ್ಲಿ ಎನ್‌.ಎಸ್‌.ಎಸ್ ಅಧಿಕಾರಿಯಾಗಿ ಸಾಕಷ್ಟು ಸಾಧನೆ ಮಾಡಿದ್ದರು, ಅವರ ಆ ಸೇವಾ ಸಾಮರ್ಥ್ಯ ಜನತಾ ಶಿಕ್ಷಣ ಸಮಿತಿಯ ಜೀರ್ಣೊಧ್ಧಾರಕ್ಕಾಗಿ ಸಹಕಾರಿಯಾಯಿತು. ಅವರು ಸಂಸ್ಥೆಯ ಶ್ರೇಯೋಭಿವೃದ್ಧಿಯ ವಿಚಾರದಲ್ಲಿ ಯಾವುದೇ ಹಿಂಜರಿಕೆ ಹಾಕುತ್ತಿರಲಿಲ್ಲ. ಸಾಹಿತ್ಯ, ಸಂಸ್ಕೃತಿ, ಶಿಕ್ಷಣ ಸಾಮಾಜಿಕ ಕಳಕಳಿಯಲ್ಲಿ ಆಸಕ್ತಿಯನ್ನು ಹೊಂದಿದ್ದರು. ಸಮಾಜದ ಒಳಿತು ಕೆಡಕುಗಳನ್ನು ಪತ್ರಿಕೆಗಳನ್ನು ಓದುವ ಮೂಲಕ ತಿಳಿದುಕೊಳ್ಳುತ್ತಿದ್ದರು. ಅವರು ತೆಗೆದುಕೊಳ್ಳುತ್ತಿದ್ದ ಪ್ರತಿಯೊಂದು ನಿರ್ಧಾರಗಳು ಜನಪರ ಕಾಳಜಿ ಹೊಂದಿದ್ದವು. ಜೆ.ಎಸ್‌.ಎಸ್‌ನ ಬಗ್ಗೆ ಅಪಹಾಸ್ಯ ಮಾಡಿದವರ ಮುಂದೆಯೆ ಅದನ್ನು ಬೆಳೆಸಿ ಅದರ ವಿಜಯಮಾಲೆಯನ್ನು ಪೂಜ್ಯ ಹೆಗ್ಗಡೆಯವರಿಗೆ ತೋಡಿಸಿದ ದಿಟ್ಟ ಧೀಮಂತ ನಾಯಕ ಡಾ. ನ. ವಜ್ರಕುಮಾರವರು. ಸದಾ ಶಿಸ್ತನ್ನು ಮೈಗೂಡಿಸಿಕೊಂಡವರು, ಸದಾ ಕೋಮಲತೆಯನ್ನು ಹೊಂದಿದ್ದ, ಇವರು ಕೆಲಸದ ವಿಚಾರದಲ್ಲಿ ವಜ್ರದಂತೆ ಕಠಿಣವಾಗಿರುತ್ತಿದ್ದರು. ಸಿಬ್ಬಂದಿಗಳಿಗೆ ಸದಾ ಪ್ರೀತಿ, ಕಾಳಜಿ, ಶಿಸ್ತಿನಿಂದ ತಮ್ಮೊಂದಿಗೆ ಎಲ್ಲರನ್ನು ಬೆಳೆಸಿದರು. ಮೈಲಾರಲಿಂಗ ಬೆಟ್ಟ ಇಂದು ವಿದ್ಯಾಗಿರಿಯಾಗಿದೆ ಎಂದರೆ ಅದು ನ. ವಜ್ರಕುಮಾರವರಿಂದಲೇ ಎಂಬುದು ಚಿರಸತ್ಯ ಅವರು ಸದಾ ನಾಡಿನ ಜನರ ಮನದಲ್ಲಿ ಚಿರಸ್ಮರಣಿಯರಾಗಿ ಉಳಿದಿದ್ದಾರೆ ಎಂದರು. 

ಜೆ.ಎಸ್‌.ಎಸ್ ನ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ