ಗಾಂಧಿಜೀ ಕಂಡ ಕನಸನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಕಾರಗೊಳಿಸುತ್ತಿದೆ: ಸಂಜಯ ನಾಡಗೌಡ
ಕಾಗವಾಡ 07: ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಮಹಾತ್ಮಾ ಗಾಂಧಿಜೀ ಕಂಡ ಕನಸನ್ನು ಡಾ. ವೀರೇಂದ್ರ ಹೆಗ್ಗಡೆ ಅವರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಾಡುತ್ತಿದ್ದು, ವಸ್ಯನಮುಕ್ತ ಸಮಾಜ ನಿರ್ಮಾಣಕ್ಕಾಗಿ ಸಂಸ್ಥೆ ಕೈಕೊಂಡಿರುವ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಚಿಕ್ಕೋಡಿ ಜಿಲ್ಲಾಧ್ಯಕ್ಷ ಸಂಜಯ ನಾಡಗೌಡ ಹೇಳಿದರು.
ಸೋಮವಾರ ದಿ. 07 ರಂದು ತಾಲೂಕಿನ ಐನಾಪೂರ ಪಟ್ಟಣದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಜೀಯವರ 156 ನೇ ಜಯಂತಿ ಅಂಗವಾಗಿ ವ್ಯಸನ ಮುಕ್ತ ಸಮಾಜ ನಿರ್ಮಾಣ ಹಾಗೂ ನವಜೀವನ ಸಮಿತಿ ಸದಸ್ಯರ ಸಮಾವೇಶವನ್ನು ಉದ್ಘಾಟಿಸಿ, ಮಾತನಾಡುತ್ತಿದ್ದರು. ಸರ್ಕಾರ ನೀಡುವ ಯೋಜನೆಯಂತೆ ಬಡಮಕ್ಕಳಿಗೆ ವಿದ್ಯಾರ್ಥಿ ವೇತನ, ವೃದ್ಯಾಪವೇತನ, ದೇವಸ್ಥಾನಗಳ ಜೀರ್ಣೋದ್ದಾರಕ್ಕೆ ಸಹಾಯ, ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ, ಅತಿಥಿ ಶಿಕ್ಷಕರ ನೇಮಕ ಇಂತಹ ಹತ್ತು ಹಲವು ಕಾರ್ಯಕ್ರಮವನ್ನು ಡಾ.ವೀರೇಂದ್ರ ಹೆಗಡೆ ಅವರ ನೇತೃತ್ವದ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಮಾಡುತ್ತಿದೆ. ಇದು ಗ್ರಾಮೀಣ ಭಾಗದ ಬಡ ಮಹಿಳೆಯರಿಗೆ ಆರ್ಥಿಕವಾಗಿ ಶಕ್ತಿ ತುಂಬಿ, ಸ್ವಾವಲಂಬಿ ಬದುಕು ಸಾಗಿಸಲು ನೇರವಾಗಿದೆ. ಇದರ ಜೊತೆಗೆ 1866 ಮಧ್ಯ ವ್ಯೆರ್ಜನ ಶಿಬಿರಗಳನ್ನು ಹಮ್ಮಿಕೊಂಡು, ಸುಮಾರು 1,32,650 ಮಧ್ಯ ವ್ಯಸನಿಗಳಿಂದ ಸಾರಾಯಿ ಸೇವನೆ ನಿಲ್ಲಿಸಿ, ನವಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.
ಪಟ್ಟಣ ಪಂಚಾಯತ ಸದಸ್ಯ ಅರುಣ ಗಾಣಿಗೇರ ಮಾತನಾಡಿ, ಈಗಿನ ಯುವ ಸಮುದಾಯ ದುಶ್ಚಟಕ್ಕೆ ದಾಸರಾಗುತ್ತಿದ್ದು, ಸರ್ಕಾರ ಇವುಗಳನ್ನು ತಡೆಯುವ ಕೆಲಸ ಮಾಡಬೇಕು. ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ಅವರು ಸಮಾಜಕ್ಕಾಗಿ ಮಾಡದಿರುವ ಯಾವುದೇ ಕೆಲಸ ಉಳಿದಿಲ್ಲಾ. ಸರ್ಕಾರಕ್ಕೆ ಪರ್ಯಾಯವಾಗಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ. ದುಶ್ಚಟಗಳ ವಿರುದ್ಧ ಅವರು ಮಾಡುತ್ತಿರುವ ಕಾರ್ಯಕ್ರಮ ಅದ್ಬುತವಾದುದ್ದಾಗಿದೆ. ಅವರ ಮಾಡುವ ಕಾರ್ಯದಿಂದ ಎಷ್ಟೋ ಕುಟುಂಬಗಳ ನೆಮ್ಮದಿಯ ಜೀವನ ಸಾಗಿಸುತ್ತೀವೆ. ಧರ್ಮಸ್ಥಳ ಸಂಸ್ಥೆಯ ಕಾರ್ಯ ಹೀಗೆ ಮುಂದುವರೆಯಲಿ ಎಂದು ಹೇಳಿದರು.
ಈ ವೇಳೆ ಪಟ್ಟಣ ಪಂಚಾಯತ ಅಧ್ಯಕ್ಷೆ ಸರೋಜಿನಿ ಗಾಣಿಗೇರ, ವಿಠ್ಠಲ ಹಳ್ಳೋಳಿ, ಸುಭಾಷ ಲೋಂಡೆ, ನಾಗರತ್ನಾ ಹೆಗಡೆ, ಸದಾಶಿವ ಚೌಗಲಾ, ಈಶ್ವರ ಕಾಂಬಳೆ, ಸುರೇಶ ಗಾಣಿಗೇರ, ಸುನೀಲ ಅವಟಿ, ಸಂಜೀವ ಮರಾಠೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.