ಸಮುದಾಯಗಳ ಅಭಿವೃದ್ಧಿ ಹೊಂದಬೇಕಾದರೆ ಬಿಜೆಪಿ ಪಕ್ಷದಿಂದ ಮಾತ್ರ ಸಾಧ್ಯ: ದಶವಂತ
ಇಂಡಿ: ಸಣ್ಣ ಸಮುದಾಯಗಳು ಅಭಿವೃದ್ಧಿ ಹೊಂದಬೇಕಾದರೆ ಅದು ಬಿಜೆಪಿ ಪಕ್ಷದಿಂದ ಮಾತ್ರ ಸಾಧ್ಯ. ಕಾಂಗ್ರೆಸ್ ಪಕ್ಷದಲ್ಲಿ ಸಣ್ಣ-ಪುಟ್ಟ ಸಮುದಾಯಗಳು ಮತ್ತು ದೀನ-ದಲಿತರು, ಅಲ್ಪಸಂಖ್ಯಾತರನ್ನು ಕೇವಲ ಮತ ಬ್ಯಾಂಕ್ಗಾಗಿ ಬಳಸಿಕೊಳ್ಳುತ್ತಾರೆ ಎಂದು ಚನ್ನದಾಸರ ಸಮಾಜದ ಜಿಲ್ಲಾಧ್ಯಕ್ಷ ಸಂಜೀವಕುಮಾರ ದಶವಂತ ಆರೋಪಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪರಿಶಿಷ್ಠ ಜಾತಿ ಪರಿಶಿಷ್ಟ ಪಂಗಡ ಅಲೆಮಾರಿ, ಸೂಕ್ಷ್ಮ ಅತೀಸೂಕ್ಷ್ಮ ಸಮುದಾಯಗಳ ಪ್ರತ್ಯೇಕ ನಿಗಮ ಘೋಷಿಸಿ ಐತಿಹಾಸಿಕ ನಿರ್ಣಯ ಕೈಗೊಂಡಿದೆ.
70 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಪಕ್ಷ ಸುಳ್ಳು ಅಶ್ವಾಸನೆ ನೀಡುತ್ತಾ ಸಮುದಾಯಗಳಿಗೆ ದಾರಿ ತಪ್ಪಿಸಿದೆ. ಸಾಮಾಜಿಕ ನ್ಯಾಯ ಪರಿಪಾಲನೆ ಎಂಬುದು ನಮ್ಮ ಪಾಲಿಗೆ ಕೇವಲ ಬಾಯಿ ಮಾತು ಆಗಿತ್ತು. ಆದರೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಎಲ್ಲ ಸಮುದಾಯಗಳೊಂದಿಗೆ ಬಿಜೆಪಿ ಸರಕಾರ ಇದೆ ಎಂಬುದು ಸಾಬೀತು ಮಾಡಿದ್ದಾರೆ. ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ನೀರಾವರಿ ಸಚಿವರಾದ ಗೋವಿಂದ ಕಾರಜೋಳ ಅವರು ನಮ್ಮ ಸಮುದಾಯಕ್ಕೆ ಪ್ರತ್ಯೇಕ ನಿಗಮ ಸ್ಥಾಪನೆ ಮಾಡಲು ಶ್ರಮಿಸಿದ್ದು ನಮ್ಮ ಇಡೀ ಸಮುದಾಯದ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು.ಪ್ರೀತು ದಶವಂತ, ನಾಗು ದಶವಂತ ಇನ್ನಿತರರು ಇದ್ದರು.