ನನ್ನ ಅಧಿಕಾರವಧಿಯಲ್ಲಿ ಎಲ್ಲ ಸಂಪರ್ಕ ರಸ್ತೆಗಳ ಅಭಿವೃದ್ಧಿ
ಶಾಸಕ ಶ್ರೀಮಂತ ಪಾಟೀಲ ಹೇಳಿಕೆ: ನೀವಲಗಿ ತೋಟದ ಸಂಪರ್ಕ ರಸ್ತೆ ಕಾಮಗಾರಿಗೆ ಭೂಮಿ ಪೂಜೆ
ಅಥಣಿ 08: ಕಾಗವಾಡ ಮತಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಎಲ್ಲ ಸಂಪರ್ಕ ರಸ್ತೆಗಳನ್ನು ನನ್ನ ಅಧಿಕಾರವಧಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಕಾಗವಾಡ ಮತಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ ಹೇಳಿದರು.
ಅವರು ಕಾಗವಾಡ ಮತಕ್ಷೇತ್ರದ 1.6 ಕೋಟಿ ಜಿಲ್ಲಾ ಪಂಚಾಯತನ ಅನುದಾನದ ಮದಭಾವಿ-ತೆವರಟ್ಟಿ ಮುಖ್ಯ ರಸ್ತೆಯ ನೀವಲಗಿ ತೋಟದ ಸಂಪರ್ಕ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.
ತೋಟದ ವಸತಿಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ರೈತಾಪಿ ಕುಟುಂಬಗಳು ವಾಸಿಸುತ್ತಿವೆ ಆದರೆ ರೈತರಿಗೆ ಮಳೆಗಾಲದ ಅವಧಿಯಲ್ಲಿ ನಗರ ಅಥವಾ ಪಟ್ಟಣ ಪ್ರದೇಶಗಳಿಗೆ ಸಂಪರ್ಕ ಸಾಧ್ಯವಾಗುವುದಿಲ್ಲ ಇದರಿಂದ ರೈತರು ತಮ್ಮ ತಮ್ಮ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳನ್ನು ಮಾರಾಟ ಅಥವಾ ಸಾಗಾಟ ಮಾಡಲು ಸಾಧ್ಯವಾಗುತ್ತಿಲ್ಲ ಎಂದ ಅವರು ರೈತಾಪಿ ವರ್ಗಕ್ಕೆ ಅನಕೂಲ ಮಾಡಿಕೊಡುವ ಉದ್ದೇಶದಿಂದಲೇ ತೋಟದ ವಸತಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.
ನೀವಲಗಿ ತೋಟದಲ್ಲಿ ಸದ್ಯ ಅಸ್ತಿತ್ವದಲ್ಲಿರುವ ಸರಕಾರಿ ಶಾಲೆಯ ಎರಡು ಕೊಣೆಗಳು ಮಳೆಯಿಂದ ಸೋರುತ್ತಿದ್ದು, ಅತೀ ಶೀಘ್ರದಲ್ಲಿಯೇ ಈ ಎರಡೂ ಕೊಣೆಗಳನ್ನು ದುರಸ್ತಿಗೊಳಿಸಲಾಗುವುದು ಮತ್ತು ಇದೇ ಶಾಲೆಗೆ ಹೆಚ್ಚೂವರಿ ಎರಡು ಕೊಣೆಗಳನ್ನು ಸಹ ನಿರ್ಮಿಸಲು ಶಿಕ್ಷಣ ಇಲಾಖೆ ಮೂಲಕ ಕ್ರಮ ಜರುಗಿಸಲಾಗುವುದು ಎಂದ ಅವರು ಸುಸಜ್ಜಿತವಾಗಿ ರಸ್ತೆ ನಿರ್ಮಾಣಗೊಳ್ಳಬೇಕು ಎನ್ನುವ ಕಾರಣದಿಂದಲೇ ಸಾಕಷ್ಟು ಅನುದಾನ ಈ ರಸ್ತೆಗೆ ಕೊಟ್ಟಿದೆ ಹೀಗಾಗಿ ಗುಣಮಟ್ಟದ ಕಾಮಗಾರಿ ನಿರ್ಮಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತನ ಸಹಾಯಕ ಕಾರ್ಯನಿರ್ವಾಕ ಅಭಿಯಂತರ ವೀರಣ್ಣಾ ವಾಲಿ ಮಾತನಾಡಿ, ಹಣಮಾಪುರ ಜಂಬಗಿ ರಸ್ತೆಯಿಂದ ನೀವಲಗಿ ತೋಟದ ಮೂಲಕ ತೆವರಟ್ಟಿ ರಸ್ತೆವರೆಗೆ 4 ಕಿಲೋ ಮೀಟರ್ ವರೆಗಿನ ರಸ್ತೆಗೆ 1.6 ಕೋಟಿ ಅನುದಾನ ಮಂಜೂರಾಗಿದ್ದು, ಈ ರಸ್ತೆ ಕಾಮಗಾರಿಯೂ ಮಳೆಗಾಲದ ಅವಧಿ ಹೊರತು ಪಡಿಸಿ 3 ತಿಂಗಳಲ್ಲಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.
ಬಿಜೆಪಿ ಧುರೀಣ ಮಹಾದೇವ ಮೇತ್ರಿ ಮಾತನಾಡಿ, ಕಾಗವಾಡ ಶಾಸಕ ಶ್ರೀಮಂತ ಪಾಟೀಲರು ತಮ್ಮ ಒಂದೇ ಒಂದು ಅವಧಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಅನುದಾನ ತರುವ ಮೂಲಕ ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ಧಿ ಹಾಗೂ ಜನಪರ ಕಾರ್ಯಗಳು ಅನುಷ್ಠಾನಗೊಳಿಸಿದ್ದಾರೆ ಎಂದ ಅವರು ಇಂತಹ ಶಾಸಕರು ನಮಗೆ ದೊರಕಿದ್ದು ನಮ್ಮ ಪುಣ್ಯ ಎಂದರು.
ಧುರೀಣರಾದ ಆರ್.ಎಮ್.ಪಾಟೀಲ, ಮುರಿಗೆಪ್ಪ ಮಗದುಮ್, ವಿನಾಯಕ ಬಾಗಡಿ ಮಾತನಾಡಿದರು. ಈ ಸಂದರ್ಭದಲ್ಲಿ ಧುರೀಣರಾದ ಡಿ.ಕೆ.ಪವಾರ, ಅಪ್ಪಾಸಾಹೇಬ ಚೌಗಲಾ, ಮಲ್ಲಿಕಾರ್ಜುನ ಅವಟಿ, ಈಶ್ವರ ಕುಂಬಾರೆ, ಅಪ್ಪಣ್ಣ ಮಗದುಮ್, ರಾಮು ಮಗದುಮ್, ಕಲ್ಲಪ್ಪ ನೀವಲಗಿ, ನಿಂಗಪ್ಪ ನೀವಲಗಿ, ಸೋಮನಿಂಗ ನೀವಲಗಿ, ಜಿಲ್ಲಾ ಪಂಚಾಯತನ ಅಮರ ಮೇತ್ರಿ ಉಪಸ್ಥಿತರಿದ್ದರು.