ಕಾರ್ಪೊರೇಟ್ ಸಂಸ್ಕೃತಿಯಿಂದ ಮೌಲ್ಯಗಳ ನಾಶ: ತಜ್ಞರ ಕಳವಳ
ಧಾರವಾಡ 20: ನಮ್ಮ ಯುವಜನರಿಗೆ ಬದುಕಿನ ಪಾಠಗಳನ್ನು ನೀಡದೆ ಇಡೀ ವ್ಯವಸ್ಥೆಯೇ ಮುಂದೆ ನಿಂತು ದಾರಿ ತಪ್ಪಿಸುತ್ತಿದೆ ಎಂದು ಶಿವಮೊಗ್ಗದ ಮನೋಚಿಕಿತ್ಸಕರಾದ ವಸಂತ ನಡಹಳ್ಳಿಯವರು ಅಭಿಪ್ರಾಯಪಟ್ಟರು.
ಅವರು ನಿನ್ನೆ ಧಾರವಾಡದ ಕರ್ನಾಟಕ ಸರ್ಕಾರಿ ನೌಕರರ ಭವನದಲ್ಲಿ ಮಹಿಳೆಯರ ಘನತೆ ಮತ್ತು ಮಾನವ ಮೌಲ್ಯ ಉಳಿಸೋಣ ವಲಯ ಮಟ್ಟದ ಯುವಜನರ ಸಂಕಲ್ಪ ಸಮಾವೇಶದಲ್ಲಿ “ಯುವ ಮನಸ್ಸಿನ ತಲ್ಲಣಗಳು” ಎಂಬ ವಿಷಯದ ಕುರಿತು ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
12 ವರ್ಷದ ಮಕ್ಕಳ ಕೈಗೆ ಮೊಬೈಲ್ ಕೊಡಲೇಬಾರದು. ತಂದೆ-ತಾಯಿಗಳೇ ಹೆಚ್ಚು ಮೊಬೈಲ್ ಬಳಸುತ್ತಿರುವಾಗ ಮಕ್ಕಳನ್ನು ದೂರುವುದು ತಪ್ಪಾಗುತ್ತದೆ. ಸೋಶಿಯಲ್ ಮೀಡಿಯಾಗೆ ಹೇಗೆ ವ್ಯಸನಿಗಳಾಗಬಹುದು ಎಂಬುದರ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಕಾರ್ೋರೇಟ್ ಟೆಕ್ ಕಂಪನಿಗಳ ಕುಮ್ಮಕ್ಕಿನಿಂದಾಗಿ, ಮೊಬೈಲ್ ಹೇಗೆ ಹೆಚ್ಚು ಬಳಸಬೇಕೆಂದು ತಮಗೆ ಬೇಕಾದ ವೈದ್ಯರು, ತಂತ್ರಜ್ಞರು, ಇಂಜಿನಿಯರ್ಗಳು, ಸಂಶೋಧಕರನ್ನು ಬಳಸಿಕೊಂಡು ಕೆಲಸ ನಿರ್ವಹಿಸಿ ಅಂತಹ ಮೊಬೈಲ್ಗಳನ್ನು ಉತ್ಪಾದಿಸಲಾಗುತ್ತದೆ. ಲಂಗುಲಗಾಮಿಲ್ಲದೇ ಮೊಬೈಲ್ ಉಪಯೋಗಿಸುತ್ತಿರುವುದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿರುವುದನ್ನು ಆತಂಕದಿಂದ ಗಮನಿಸುತ್ತಿದ್ದೇವೆ. ಸಾಮಾಜಿಕ ಮಾಧ್ಯಮದ ವ್ಯಸನವು ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತಿದೆ ಎಂದು ಸಂಶೋಧನೆಗಳು ಹೇಳುತ್ತಿವೆ. ಇವೆಲ್ಲವೂ ಗೊತ್ತಿದ್ದು ಎಲ್ಲ ಪಕ್ಷಗಳು, ಸರ್ಕಾರಗಳು ಇದರ ಬಗ್ಗೆ ಕಿಂಚಿತ್ತು ಕಾಳಜಿ ವಹಿಸುತ್ತಿಲ್ಲ. 100 ಕಾರ್ೊರೇಟ್ ಮನೆತನಗಳಿಂದ ಹಣ ಪಡೆದು ಅವರ ಹಿತಾಸಕ್ತಿ ಕಾಪಾಡಲು ರಾಜಕಾರಣಿಗಳು ಮೌನಕ್ಕೆ ಶರಣಾಗಿದ್ದಾರೆ ಎಂದರು. ಪ್ರತಿಯೊಬ್ಬರು ಪ್ರಶ್ನೆ ಮಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಮನೆಯಲ್ಲಾಗಲಿ ಹೊರಗಡೆಯಾಗಲಿ ತಪ್ಪುಗಳು ಜರುಗಿದಾಗ ಅದಕ್ಕೆ ಸಣ್ಣದಾಗಿ ಪ್ರತಿರೋಧ ಒಡ್ಡಬೇಕು. ಆ ಮೂಲಕ ದೊಡ್ಡ ಅಪರಾಧ ಜರುಗಲು ಅವಕಾಶಗಳು ಸಿಗುವುದಿಲ್ಲ ಎಂದು ಕಿವಿಮಾತು ಹೇಳಿದರು. ಇಂದು ನಮ್ಮ ಯುವಕರಿಗೆ ಲೈಂಗಿಕ ಶಿಕ್ಷಣದ ಬದಲಾಗಿ ಲೈಂಗಿಕತೆಯ ಶಿಕ್ಷಣವನ್ನು ಹೇಳಿಕೊಡಬೇಕಾಗಿದೆ. ಈ ಕುರಿತು ಕೆಲವು ತಪ್ಪು ಕಲ್ಪನೆಗಳನ್ನು ಪ್ರಚಾರ ಮಾಡಲಾಗುತ್ತಿದೆ. ಇಂತಹ ವಿಷಯಗಳ ಬಗ್ಗೆ ಮಾತನಾಡುವುದು ಅಥವಾ ಯಾರಲ್ಲಿಯಾದರೂ ಹೇಳಿಕೊಳ್ಳುವುದೇ ತಪ್ಪು ಎಂಬ ಭಾವನೆ ನಮ್ಮ ಸಮಾಜದಲ್ಲಿದೆ. ವಯಸ್ಸಿಗೆ ತಕ್ಕಂತೆ ವೈಜ್ಞಾನಿಕವಾದ ತಿಳುವಳಿಕೆಯನ್ನು ನೀಡುವುದು ಅವಶ್ಯಕವಾಗಿದೆ ಎಂದರು.
ನಂತರ ನಡೆದ ಸಂವಾದದಲ್ಲಿ ಹಲವು ಸಂಶಯಗಳು, ಪ್ರಶ್ನೆಗಳು, ಅಭಿಪ್ರಾಯಗಳು ವ್ಯಕ್ತವಾದವು. ಹೊರಹೊಮ್ಮಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ, ನಮ್ಮ ಯುವಜನರು ಜಾಗೃತರಾಗಿ ಸಾಮಾಜಿಕ ಮಾಧ್ಯಮಗಳನ್ನು ಬಳಸುವುದನ್ನು ಕಡಿಮೆ ಮಾಡಬೇಕು ಇಲ್ಲವೇ ಹೊರಬರುವ ಸಂಕಲ್ಪ ತೊಡಬೇಕು ಎಂದು ಅವರು ಕರೆ ನೀಡಿದರು. ಎಐಡಿವೈಓ ಜಿಲ್ಲಾಧ್ಯಕ್ಷರಾದ ಭವಾನಿಶಂಕರ್ ಎಸ್. ಗೌಡ ಅವರು ಗೋಷ್ಠಿಯನ್ನು ನಿರ್ವಹಿಸಿದರು.
ಎರಡನೇ ಗೋಷ್ಟಿಯನ್ನು ನಡೆಸಿಕೊಟ್ಟ ಮಕ್ಕಳ ಹಾಗೂ ಹದಿಹರೆಯದವರ ಮನೋವೈದ್ಯರಾದ ಡಾ. ಸುಜ್ಞಾನಿ ದೇವಿ ಪಾಟೀಲ್ ರವರು ‘ಲೈಂಗಿಕ ಅಪರಾಧಗಳು; ಕಾರಣಗಳು ಹಾಗೂ ಪರಿಹಾರಗಳು' ಕುರಿತು ವಿಷಯ ಮಂಡನೆ ಮಾಡುತ್ತಾ, ಇಂದು ವಿಶ್ವದಾದ್ಯಂತ ಸುಮಾರು ಮೂರರಲ್ಲಿ ಒಬ್ಬ ಮಹಿಳೆ (35ಅ) ದೈಹಿಕ ಮತ್ತು ಲೈಂಗಿಕ ಹಿಂಸಾಚಾರವನ್ನು ಅನುಭವಿಸುತ್ತಿದ್ದಾರೆ. ಜಾಗತಿಕವಾಗಿ, 30ಅ ಮಹಿಳೆಯರು ತಮ್ಮ ಜೀವಿತಾವಧಿಯಲ್ಲಿ ಪರಿಚಯಿಸ್ಥರಿಂದಲೇ ಲೈಂಗಿಕ ಕಿರುಕುಳವನ್ನು ಅನುಭವಿಸಿದ್ದಾರೆ. 38ಅ-50ಅ ಮಹಿಳೆಯರ ಕೊಲೆಗಳು ಪರಿಚಯಿಸ್ಥರಿಂದಲೇ ಮಾಡಲ್ಪಟ್ಟಿವೆ. ಹಿಂಸಾಚಾರದಿಂದ ಬದುಕುಳಿದ ಬಹುಪಾಲು ಮಹಿಳೆಯರು (55-95ಅ) ಕುಟುಂಬದ ಗೌರವಕ್ಕೆ ಕಳಂಕ ಬರಬಹುದು, ಬಹಿರಂಗಪಡಿಸಿದರೆ ಎಲ್ಲಿ ನನ್ನ ಮೇಲೆ ತಪ್ಪು ತಿಳಿದುಕೊಳ್ಳುತ್ತಾರೋ, ಮನೆಯಲ್ಲಿ ನನ್ನನ್ನು ಒಪ್ಪಿಕೊಳ್ಳುತ್ತಾರೋ, ಇಲ್ಲವೋ ಎಂಬ ಕಾರಣಕ್ಕಾಗಿಯೇ ಯಾವುದೇ ರೀತಿಯಲ್ಲಿಯೂ ಸಹ ಬಹಿರಂಗಪಡಿಸಲು ಹಿಂಜರಿಯುತ್ತಿದ್ದಾರೆ. ಹದಿಹರೆಯದ ಹುಡುಗಿಯರು ಮತ್ತು ಯುವತಿಯರು ಪರಿಚಯದವರಿಂದ ಹೆಚ್ಚಿನ ಅಪಾಯವನ್ನು ಎದುರಿಸುತ್ತಾರೆ. ಜನಾಂಗೀಯ ಮತ್ತು ಅಲ್ಪಸಂಖ್ಯಾತರಿಗೆ ಸೇರಿದ ಮಹಿಳೆಯರು, ತೃತೀಯಲಿಂಗಿಗಳು ಮತ್ತು ವಿಕಲಾಂಗ ಮಹಿಳೆಯರೇ ಹೆಚ್ಚು ಬಲಿಪಶುಗಳಾಗುತ್ತಿದ್ದಾರೆ. ಲಿಂಗ ಅಸಮಾನತೆ, ಅನಕ್ಷರತೆ, ಬಾಲ್ಯದಲ್ಲಿ ಹಿಂಸಾಚಾರಕ್ಕೆ ಒಡ್ಡಿಕೊಳ್ಳುವುದು ಲೈಂಗಿಕ ಅಪರಾಧಗಳಿಗೆ ಕಾರಣವಾಗುತ್ತಿದೆ ಎಂದರು. ಹದಿಹರೆಯದ ವಯಸ್ಸಿನಲ್ಲಿ, ಅಂದರೆ 15-16 ವಯಸ್ಸಿನ ಸಂದರ್ಭದಲ್ಲಿ ದೈಹಿಕ ಬದಲಾವಣೆಯ ಜೊತೆಗೆ, ಮನಸ್ಸಿನ ಭಾವನೆಗಳೂ ಬದಲಾಗುತ್ತವೆ. ಇವು ಹದಿಹರೆಯದವರನ್ನು ಲೈಂಗಿಕ ಕೃತ್ಯಗಳೆಡೆಗೆ ಪ್ರಚೋದಿಸುತ್ತವೆ. ಆದರೆ ಇವುಗಳನ್ನು ನಿಯಂತ್ರಿಸುವ, ಒಂದು ಚೌಕಟ್ಟಿನೊಳಗೆ ತರುವ ಮೆದುಳಿನ ನಿರ್ದಿಷ್ಟ ಭಾಗ ಬೆಳೆದಿರುವುದಿಲ್ಲ. ಅದು 28-30 ವಯಸ್ಸಿನ ಸಂಧರ್ಭದಲ್ಲಿ ಪ್ರಭುದ್ಧಗೊಳ್ಳುತ್ತದೆ. ಆದ್ದರಿಂದ ಯದಿಹರೆಯದವರಿಗೆ ಇದರ ಬಗ್ಗೆ ಸರಿಯಾದ, ವೈಜ್ಷಾನಿಕ ಶಿಕ್ಷಣ ಅಗತ್ಯ. ಇಂತಹ ಸಂಧರ್ಭದಲ್ಲಿ ಸಾಮಾಜಿಕ ರಕ್ಷಣಾತ್ಮಕ ಅಂಶಗಳು ಅವಶ್ಯಕವಾಗಿದ್ದು, ಶಾಲೆಗಳಲ್ಲಿ ಹದಿಹರೆಯದವರಲ್ಲಿ ಜೀವನ ಮೌಲ್ಯಗಳ ಶಿಕ್ಷಣ ಒದಗಿಸುವುದು ಹಾಗೂ ಲಿಂಗ ಸಮಾನತೆಯನ್ನು ಉತ್ತೇಜಿಸುವುದು, ದಂಪತಿಗಳು ಪರಸ್ಪರ ಸಂವಹನ, ಸಂಘರ್ಷ ನಿರ್ವಹಣೆ, ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಗೊಳಿಸುವ ಮೂಲಕ ಲೈಂಗಿಕ ಅಪರಾಧಗಳನ್ನು ತಡೆಗಟ್ಟಬಹುದು ಎಂದು ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ನಂತರ ಸಂವಾದ ನಡೆಯಿತು. ಗೋಷ್ಠಿ ನಿರ್ವಹಣೆಯನ್ನು ಎಐಡಿವೈಓ ರಾಜ್ಯ ಉಪಾಧ್ಯಕ್ಷರಾದ ಚನ್ನಬಸವ ಜಾನೇಕಲ್ ನಡೆಸಿಕೊಟ್ಟರು.
ಧಾರವಾಡದ ಜನಜಾಗೃತಿ ಅಭಿಯಾನದ ಸಲಹೆಗಾರರಾದ ರಾಮಾಂಜನಪ್ಪ ಆಲ್ದಳ್ಳಿ ಅವರು ಸಮಾರೋಪ ಭಾಷಣ ಮಾಡುತ್ತಾ, ಹಿಂದೆ ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ಹಿರಿಯರು ತಮ್ಮ ಜೀವನದಲ್ಲಿ ಮೌಲ್ಯಗಳನ್ನು ಪ್ರತಿಬಿಂಬಿಸುತ್ತಿದ್ದರು. ನಮ್ಮ ದೇಶದ ಸ್ವತಂತ್ರ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ಭಗತ್ಸಿಂಗ್ರ ಜೀವನದಲ್ಲಿಯೂ ಪ್ರೀತಿ, ಮದುವೆಯ ವಿಷಯಬಂದಾಗ, ವಯ್ಯಕ್ತಿಕ ಆಸೆ, ಆಕಾಂಕ್ಷೆಗಳಿಗೆ ತಮ್ಮನ್ನು ಸೀಮಿತಗೊಳಿಸದೆ ದೇಶದ ವಿಮೋಚನೆ, ಕ್ರಾಂತಿಯನ್ನೇ ಜೀವನದ ಗುರಿಯಾಗಿ ಸ್ವೀಕರಿಸಿದರು. ಅದೇರೀತಿ ನೇತಾಜಿ ಸುಭಾಷ್ಚಂದ್ರ ಬೋಸ್ರ ಜೀವನದಲ್ಲಿಯೂ ತಮ್ಮನ್ನು ವಿವಾಹವಾಗಲು ಬಯಸಿದ ಮಹಿಳೆಗೆ, ‘ಭಾರತ ನನ್ನ ಮೊದಲ ಹಾಗೂ ಏಕೈಕ ಪ್ರೀತಿ’ ಎಂದು ಹೇಳಿದ್ದರು. ಅವರ ಜೀವನದ ಮಹಾನ್ ಗುರಿಗೆ ವಯ್ಯಕ್ತಿಕ ಬಯಕೆ, ಆಕಾಂಕ್ಷೆಗಳು ಅಡ್ಡಿಯಾಗಲಿಲ್ಲ. ಮುಂದುವರಿಕೆಯಾಗಿ ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ, ತತ್ವಜ್ಞಾನಿ ಶಿವದಾಸ್ ಘೋಷ್ ರವರು ಹೇಳಿದಂತೆ ಲೈಂಗಿಕ ಜೀವನ ತನ್ನಷ್ಟಕ್ಕೆ ತಾನೇ ಅಸಹ್ಯವಲ್ಲ, ಹುಡುಗ-ಹುಡುಗಿಯರು ಪರಸ್ಪರ ಪ್ರೀತಿಸುವ ವಿಷಯದಲ್ಲಿ ಅಸಹ್ಯವೇನಿದೆ? ಆದರೆ ಇದು ಮನಸ್ಸಾಕ್ಷಿಯನ್ನು ಮಣಿಸಿದಾಗ, ಬುದ್ಧಿಮತ್ತೆಯನ್ನು ಮೀರಿದಾಗ ಅದು ಅಸಹ್ಯವಾಗುತ್ತದೆ.. ಯಾವುದೇ ಪರಿಸ್ಥಿತಿಯಲ್ಲಿಯೂ ಲೈಂಗಿಕತೆ ಜೀವನವನ್ನು ಮೀರಿ ಹೋಗಲಾಗದು. ಅದು ಜೀವನದ ಒಂದು ಭಾಗವಷ್ಟೇ. ಇಡೀ ಜೀವನ ಲೈಂಗಿಕತೆಯನ್ನು ಸುತ್ತುವರೆದು ಹರಿಯುವುದಿಲ್ಲ. ಬದಲಿಗೆ ಜೀವನದ ಹರಿವೇ ಲೈಂಗಿಕತೆಯನ್ನು ರೂಪಿಸುವುದು. ಇನ್ನೊಂದೆಡೆ ಶರತ್ಚಂದ್ರ ಚಟರ್ಜಿ, ಖಾಜಿ ನಸರುಲ್ ಇಸ್ಲಾಂ ರಂತಹ ನಮ್ಮ ದೇಶದ ಮಹಾನ್ ಮಾನವತಾವಾದಿಗಳ, ನಮ್ಮ ರಾಜ್ಯದ ನವೋದಯದ ಸಾಹಿತಿಗಳಾದ ಬೇಂದ್ರೆ, ಕುವೆಂಪುರಂತಹ ಸಾಹಿತಿಗಳ ಜೀವನ ಘಟನೆಗಳು ನಮಗೆ ಮೌಲ್ಯಗಳನ್ನು ಕಲಿಸುತ್ತವೆ. ಆದರೆ ನಾವು ಇಂದು ಬೇರಿಲ್ಲದವರಾಗಿದ್ದೇವೆ. ಇಂದು ಎಲ್ಲಾ ರೀತಿಯಿಂದಲೂ ನಮ್ಮ ಯುವಜನರ ಮೇಲೆ ದಾಳಿ ನಡೆಯುತ್ತಿದೆ. ಕೊಲೆಗಾರ- ಅತ್ಯಾಚಾರಿ ನಟರು, ರಾಜಕಾರಣಿಗಳೇ ಆದರ್ಶವೆಂದು ಬಿಂಬಿಸಲಾಗುತ್ತಿದೆ. ಅವರನ್ನು ಮೆರವಣಿಗೆ ಮಾಡಲಾಗುತ್ತಿದೆ. ಇದರಿಂದಾಗಿ ನಮ್ಮ ಯುವಜನರ ಮುಂದೆ ಆದರ್ಶ ವ್ಯಕ್ತಿಗಳೇ ಇಲ್ಲದಂತಾಗಿದ್ದಾರೆ ಎಂದರು. ಇಂತಹ ನಿರ್ವಾತ ಪರಿಸರದಲ್ಲಿ ನಮ್ಮ ದೇಶದ ಮಹಾನ್ ಕ್ರಾಂತಿಕಾರಿಗಳ, ನವೋದಯದ ಹರಿಕಾರರ, ಸಾಹಿತಿಗಳ ಉದಾತ್ತ ಜೀವನ ಮೌಲ್ಯಗಳನ್ನು ಅರ್ಥೈಸಿಕೊಂಡು, ಅಳವಡಿಸಿಕೊಳ್ಳುತ್ತ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಲೇ ಸಮಾಜದಲ್ಲಿ ಉನ್ನತ ನೀತಿ, ಸಂಸ್ಕೃತಿಯನ್ನು ಬೆಳೆಸಲು ನಮ್ಮ ಯುವಜನರು ಮುಂದೆಬರಬೇಕಾಗಿದೆ. ಆ ಮೂಲಕ ಅಪರಾಧಗಳೇ ಇಲ್ಲದ ಹೊಸ ಸಮಾಜದ ನಿರ್ಮಾಣ ಮಾಡುವ ಪ್ರಕ್ರಿಯೆಯಲ್ಲಿ ಹೊಸ ನೀತಿ, ಹೊಸ ಮೌಲ್ಯ, ಹೊಸ ಆದರ್ಶವನ್ನು ಸೃಷ್ಟಿಸಬೇಕಾಗಿದೆ ಎಂದು ಕರೆ ನೀಡಿದರು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ರಣಜಿತ್ ದೂಪದ್ ಇದ್ದರು. ಮಹಿಳೆಯ ಘನತೆ ಹಾಗೂ ಮಾನವ ಮೌಲ್ಯ ಉಳಿಸುವ ಅಭಿಯಾನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಪ್ರತಿಜ್ಞೆಯನ್ನು ಭಾಗವಹಿಸಿದ ಯುವಜನರು ತೆಗೆದುಕೊಂಡರು. ಕಾರ್ಯಕ್ರಮ ಉದ್ಘಾಟಿಸಿದ ಜಸ್ಟೀಸ್ ಎನ್. ಸಂತೋಷ ಹೆಗಡೆ ಅವರು ಭಾಗವಹಿಸಿದವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.