ಹವಾಮಾನ ವೈಪರೀತ್ಯ ಬಿಕ್ಕಟ್ಟಿಗೆ ದೇಸಿ ತಳಿ ಪರಿಹಾರ: ಡಾ.ನಾಗಪ್ಪ ಹರಿಜನ ಸಲಹೆ
ರಾಣೆಬೆನ್ನೂರು 28: ಭೂಮಿಯನ್ನು ಸಂಕಷ್ಟಕ್ಕೆ ಸಿಲುಕಿಸಿರುವ ಹವಾಮಾನ ವೈಪರೀತ್ಯ ಬಿಕ್ಕಟ್ಟನ್ನು ಎದುರಿಸಿ ಬೆಳೆಯುವ ಸಾಮರ್ಥ್ಯ ದೇಸಿ ತಳಿಗಳಿಗೆ ಇದ್ದು, ರೈತರು ಈ ಬೆಳೆಗಳತ್ತ ಗಮನ ಹರಿಸಬೇಕಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಡಾ.ನಾಗಪ್ಪ ಹರಿಜನ ಸಲಹೆ ಮಾಡಿದರು.
ತಾಲ್ಲೂಕಿನ ಇಟಗಿ ಗ್ರಾಮದ ರೇವಣಪ್ಪ ಪೂಜಾರ್ ಅವರ ತೋಟದಲ್ಲಿ ಮಂಗಳವಾರ ಆಯೋಜಿಸಿದ್ದ ‘ದೇಸಿ ಬೆಂಡೆಯ ವೈವಿಧ್ಯ- ಸಹಭಾಗಿತ್ವ ತಳಿ ಆಯ್ಕೆ’ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಡಿಮೆ ಒಳಸುರಿ ಹಾಗೂ ವೆಚ್ಚದಲ್ಲಿ ಸಾಂಪ್ರದಾಯಿಕ ತಳಿಗಳು ಇಳುವರಿ ಕೊಡುತ್ತವೆ. ಕೀಟ ಹಾಗೂ ರೋಗ ನಿರೋಧಕ ಶಕ್ತಿ ಹೊಂದಿರುವ ದೇಸಿ ತಳಿಗಳು ಆರೋಗ್ಯಕ್ಕೂ ಪೂರಕ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಹಾವೇರಿ ತೋಟಗಾರಿಕೆ ಇಲಾಖೆ ಅಧಿಕಾರಿ ಡಾ.ಶಿವರಾಜ್ ಮಾತನಾಡಿ, ಆರೋಗ್ಯಕ್ಕೆ ತರಕಾರಿ ಸೇವನೆ ಅತಿ ಮುಖ್ಯ. ಆದರೆ ರಾಸಾಯನಿಕಗಳಿಂದ ತುಂಬಿಕೊಂಡ ತರಕಾರಿಗಿಂತ ಸಾವಯವದಲ್ಲಿ ಬೆಳೆದ ತರಕಾರಿಗಳನ್ನು ಬಳಸಬೇಕು ಎಂದು ಕಿವಿಮಾತು ಹೇಳಿದರು. ತರಕಾರಿ ಕೃಷಿಗೆ ಸಂಬಂಧಿಸಿದ ನೆರವು ನೀಡಲು ತಮ್ಮ ಇಲಾಖೆ ಸದಾ ಸಿದ್ಧ ಎಂದೂ ಅವರು ಭರವಸೆ ನೀಡಿದರು.
ಪ್ರಾಸ್ತಾವಿಕ ಮಾತನಾಡಿದ ‘ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ’ ಅಧ್ಯಕ್ಷ ಶಂಶುದ್ದೀನ್ ಬಳಿಗಾರ, ತಳಿ ವೈವಿಧ್ಯವನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೂ ಉಳಿಸುವ ಕೆಲಸವನ್ನು ಸಹಜ ಸಮೃದ್ಧದ ಜತೆಗೂಡಿ ಹಾವೇರಿ ಜಿಲ್ಲೆಯಲ್ಲಿ ನಿರ್ವಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಿರಿಧಾನ್ಯ ಹಾಗೂ ಇತರ ಬೆಳೆಗಳ ದೇಸಿ ತಳಿ ಸಂರಕ್ಷಣೆಗೆ ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಗುರುಪ್ರಸಾದ್, ತೋಟಗಾರಿಕೆ ವಿಷಯ ತಜ್ಞ ಡಾ.ಸಂತೋಷ್, ಜಲಸಂರಕ್ಷಕ ಚನ್ನಬಸಪ್ಪ ಕೊಂಬಳಿ ಉಪಸ್ಥಿತರಿದ್ದರು. ‘ವನಸಿರಿ’ ಸಂಯೋಜಕ ನದಾಫ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸುಮಾರು 15 ಬಗೆಯ ದೇಸಿ ಬೆಂಡೆಯನ್ನು ಸಾವಯವ ವಿಧಾನದಲ್ಲಿ ಬೆಳೆದ ಅನುಭವವನ್ನು ಕೃಷಿಕ ರೇವಣಪ್ಪ ಪೂಜಾರ್ ಹಂಚಿಕೊಂಡರು. ಬಳಿಕ, ಸಹಜ ಸಮೃದ್ಧ ಸಂಸ್ಥೆಯ ಸಂಶೋಧನಾ ಮುಖ್ಯಸ್ಥ ನಿಶಾಂತ್ ಬಂಕಾಪುರ ಹಾಗೂ ‘ವಾಸನ್’ ಸಂಸ್ಥೆಯ ಪೂಜಿತಾ ಅವರು, ಬೆಂಡೆ ತಳಿಗಳಲ್ಲಿ ರೈತರ ಸಹಭಾಗಿತ್ವದ ಕಾರ್ಯಾಗಾರವನ್ನು ನಿರ್ವಹಿಸಿದರು.
ಸುತ್ತಮುತ್ತಲಿನ ಗ್ರಾಮಗಳ ಸುಮಾರು 80 ರೈತರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.