ಅಥಣಿ

ಉಪಮುಖ್ಯಮಂತ್ರಿ ಕೊಟ್ಟ ತಾಲೂಕು ಅಥಣಿ ಅಭಿವೃದ್ಧಿಯಿಂದ ವಂಚಿತ

ಉಪಮುಖ್ಯಮಂತ್ರಿ ಕೊಟ್ಟ ತಾಲೂಕು ಅಥಣಿ ಅಭಿವೃದ್ಧಿಯಿಂದ ವಂಚಿತ
ತ್ಯಾಜ್ಯಯುಕ್ತವಾದ ಅಥಣಿ ಇತಿಹಾಸ ಪ್ರಸಿದ್ದ ಮಸೂಬಾ ಹಳ್ಳದ ಚಿತ್ರ(

ಕಳೆದ ಸುಮಾರು 02 ವರ್ಷಗಳಿಂದ ಪುರಸಭೆಗೆ ಜನಪ್ರತಿನಿಧಿಗಳೇ ಇಲ್ಲ* ಸಮಸ್ಯೆಗಳ ನಿವಾರಣೆಗೆ ಡಿಸಿಎಂ, ಸಚಿವರು ಪ್ರಯತ್ನಿಸಲಿ 


                                       ಸಂತೋಷ ರಾ ಬಡಕಂಬಿ.


ಅಥಣಿ 25:ಬೆಳಗಾವಿ ಜಿಲ್ಲೆಯಲ್ಲಿಯೇ ಅತ್ಯಂತ ದೊಡ್ಡ ಹಾಗೂ ಅತೀ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ತಾಲುಕು ಅಥಣಿ, ಅಷ್ಟೇ ಪ್ರಮಾಣದ ಮಹಾನ ಸಂತ ಶರಣ ಹಾಗೂ ಪುಣ್ಯ ಪುರುಷರು ಹುಟ್ಟಿ ನಡೆದಾಡಿದ ಪವಿತ್ರವಾದ ನಾಡು ಈ ಅಥಣಿ ತಾಲೂಕು. ಸ್ವಾಭಾವಿಕವಾಗಿ ಕೃಷ್ಣಾ ನದಿ ತೀರಕ್ಕೆ ಹೊಂದಿಕೊಂಡು ಫಲವತ್ತತೆಯಿಂದ ಕೂಡಿದ ಕೆಲವು ಹಳ್ಳಿಗಳಿದ್ದರೆ ಇದ್ದಕ್ಕೆ ವ್ಯತಿರಿಕ್ತವಾಗಿ ನೀರು ಸಿಗದೇ ಕುಡಿಯುವ ಪ್ರತಿ ಹನಿ ನೀರಿಗೂ ತಾತ್ವಾರ ಪಡುವ ಅನೇಕ ಊರುಗಳಿವೆ ಅದಲ್ಲದೆ ಸವುಳು-ಜವುಳು ಕೂಡ ಇದ್ದು ಬೆಳಗಾವಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಮೋಟಾರು ವಾಹನಗಳನ್ನು ಹೊಂದಿರುವ ತಾಲೂಕು ಎಂದು ಪ್ರಸಿದ್ಧವಾಗುವುದರ ಜೊತೆಗೆ ಅತೀ ಹೆಚ್ಚಿನ ಕಂದಾಯ (ಟ್ಯಾಕ್ï್ಸ) ಪಾವತಿಸುವ ತಾಲೂಕು ಕೂಡ ಹೌದು.

ಕಳೆದ ಸುಮಾರು 02 ವರ್ಷಗಳಿಂದ ಪುರಸಭೆಗೆ ಜನಪ್ರತಿನಿಧಿಗಳೇ ಇಲ್ಲ-

ಸುಮಾರು 47842 ಜನ ದಟ್ಟನೆ ಹೊಂದಿರುವ ನಗರಕ್ಕೆ ಕಳೆದ ಪುರಸಭೆ ಚುನಾವಣೆಯಲ್ಲಿ 23 ವಾರ್ಡಗಳಿದ್ದವು, ಕೆಲ ವಾರ್ಡಗಳಲ್ಲಿ ಜನ ಸಂಖ್ಯೆ ಹೆಚ್ಚಾಗಿರುವುದರಿಂದ ಈಗ ಅಂತಹ ವಾರ್ಡಗಳನ್ನ ಪುನರ್‍ವಿಂಗಡಿಸಿ 27ಕ್ಕೆ ಹೆಚ್ಚಿಸಿದ್ದಾರೆ ಇದೀಗ ಮತ್ತೆ ಹೊಸದಾಗಿ ಮೂರು ವಾರ್ಡಗಳು ಹೆಚ್ಚಾಗಿದ್ದು ಅವುಗಳಲ್ಲಿನ ಅಭಿವೃದ್ಧಿ ಕಾರ್ಯ ಮಾತ್ರ ನಶ್ವರ. ಜೊತೆಗೆ ಕೆಲವÀರು ವಾರ್ಡ ಮೀಸಲಾತಿ ವಿಂಗಡನೆ ಕುರಿತು ಕೋರ್ಟ ಮೆಟ್ಟಿಲೇರಿರುವುದರಿಂದ ಕಳೆದ 02 ವರ್ಷಗಳಿಂದ ಪುರಸಭೆಗೆ ಚುನಾಯಿತ ಸದಸ್ಯರೇ ಇಲ್ಲವಾಗಿದೆ, ಈ ಕುರಿತು ಗಮನಹರಿಸಬೇಕಾದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಶಾಸಕ ಮಹೇಶ ಕುಮಠಳ್ಳಿ ಸುಮ್ಮನಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೀಡಾಗಿದೆ.

ತ್ಯಾಜ್ಯಯುಕ್ತವಾದ ಮಸೂಬಾ ಹಳ್ಳ-

ಅಥಣಿ ನಗರದಲ್ಲಿರುವ ಇತಿಹಾಸ ಪ್ರಸಿದ್ದ ಮಸೂಬಾ ಹಳ್ಳವು ಅನೇಕ ವರ್ಷಗಳ ಕಾಲ ಮೈದುಂಬಿ ಹರಿದು ಅಥಣಿಗೆ ಹೆಮ್ಮೆಯನ್ನು ತಂದು ಕೊಟ್ಟಿರುವಂತಹ ಐತಿಹಾಸಿಕ ಸುಪ್ರಸಿದ್ದ ಹಳ್ಳವಾಗಿದ್ದು ಇತ್ತೀಚಿನ ದಿನಗಳಲ್ಲಿ ಅದರಲ್ಲಿ ತ್ಯಾಜ್ಯ ಎಸೆದು ಅದನ್ನು ಹಾಳಾಗಿದ್ದು ಮತ್ತು ಹಲವಾರು ಜನ ತಮ್ಮ ಜಾನುವಾರುಗಳಿಗೆ ಕುಡಿಯಲು ನೀರು ಹಾಗೂ ಅವುಗಳ ಮೈ ತೊಳೆಯಲು ಕೂಡ ಇದೇ ಮಸೂಬಾ ಹಳ್ಳದ ನೀರನ್ನೆ ಬಳಸುತ್ತಿದ್ದರು, ಆವಾಗ ಅಷ್ಟು ಚನ್ನಾಗಿ ಇದ್ದ ನೀರು ಹಾಗೂ ಹಳ್ಳವು ಇತ್ತೀಚಿನ ದಿನಗಳಲ್ಲಿ ಅದರ ಮೇಲುಸ್ತುವಾರಿಯ ಕೊರತೆಯಿಂದಾಗಿ ಇಂದು ಆ ಹಳ್ಳದಲ್ಲಿ ಕತ್ತರಿಸಿದ ಕೋಳಿಯ ಮಾಂಸ ಮತ್ತು ರೆಕ್ಕೆ ಪುಕ್ಕಗಳು, ಹಳೆಯ ಬಟ್ಟೆ, ಕಸ ಕಡ್ಡಿ, ಗ್ಯಾರೇಜನ ತ್ಯಾಜ್ಯ, ಹಳ್ಳದ ಸುತ್ತಮುತ್ತಲಿನ ಮನೆಗಳ ಮಲ-ಮೂತ್ರ ತ್ಯಾಜ್ಯವನ್ನು ಹಳ್ಳಕ್ಕೆ ಬಿಟ್ಟು ಅದರ ಅಂದವನ್ನು ಹಾಳು ಮಾಡುತ್ತಿದ್ದಾರೆ.

ಅವೈಜ್ಞಾನಿಕವಾಗಿ ನಿರ್ಮಿಸಿದ ಚರಂಡಿಗಳು-

ಎಲ್ಲಿ ನೋಡಿದರೂ ಅಲ್ಲಿ ಕಸದ ರಾಶಿ, ಕೊಳಚೆ ನೀರು ತಂಬಿಕೊಂಡ ಗಟಾರುಗಳು, ಸ್ವಚ್ಚತೆಯನ್ನೇ ಕಾಣದ ಗಟಾರುಗಳು, ಪುರಸಭೆಯು ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸಿ ಸರಕಾರದ ಹಾಗೂ ಸಾರ್ವಜನಿಕ ದುಡ್ಡನ್ನು ಪೋಲು ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಶಾಂತಿ ನಗರ ಮತ್ತು ಜೇರೆ ಪ್ಲಾಟ್ ಮತ್ತು ಗಚ್ಚಿನಮಠ ಗಲ್ಲಿಯ ನಿವಾಸಿಗಳ ಕೂಗು, ಈ ರೀತಿಯಾಗಿ ಮಲೀನ ನೀರು ವಾರ್ಡನ ಎಲ್ಲಾ ಕಡೆಗು ಹರಿದುದರ ಪರಿಣಾಮವಾಗಿ ಪ್ರತಿ ಮನೆಗಳಿಗೆ ಒಬ್ಬರು ಅಥವಾ ಇಬ್ಬರು ಡೆಂಗ್ಯು ರೋಗಿಗಳು ಇಂದು ಸಿಗುತ್ತಿದ್ದಾರೆ, ಮನೆಗಳಿಂದ ಹೊರ ಬರುವ ಕೊಳಚೆ ನೀರು ಇವಾಗ ರಸ್ತೆ ಮದ್ಯ ಬಂದು ನಿಲ್ಲತ್ತಿದೆ ಆದ ಕಾರಣ ಹಾವು ಚೇಳು ಉತ್ಪತ್ತಿಯ ತಾಣ ಕೂಡ ಇದಾಗಿದೆ ಜನ ಜೀವ ಭಯದಿಂದ ಓಡಾಡುವ ಹಾಗೆ ಆಗಿದೆ

ಸೋತು ಹೋಗಿರುವ ವಿದ್ಯುತ್ ತಂತಿಗಳು- 

ಇದೆ ಶಾಂತಿ ನಗರ ಮತ್ತು ಜೇರೆ ಪ್ಲಾಟ್ ನಿವಾಸಿಗಳ ಪ್ರಕಾರವಾಗಿ ವಿದ್ಯುತ್ ವಿಚಾರಕ್ಕೆ ಬಂದರೆ ಕಂಬಗಳು ನಿಲ್ಲಲಾಗದೆ ಸೋತು ಹೋಗಿವೆ ವಿದ್ಯುತ್ ತಂತಿಗಳು ಜನರು ಕೈ ಮಾಡಿದರೆ ಕೈಗೆ ಹತ್ತುವ ಪರಿಸ್ಥಿತಿ ಬಂದಿದೆ ಇಲ್ಲಿನ ಸಾರ್ವಜನಿಕರು ಕೆಇಬಿಗೆ ಹಲವಾರು ಸಾರಿ ಮನವಿ ಮಾಡಿದರೂ ಇತ್ತ ಕಡೆ ಕ್ಯಾರೆ ಎನ್ನದ ಅಧಿಕಾರಿಗಳು, ಒಂದು ವೇಳೆ ಅಲ್ಲಿಯೇ ಹೋಗಿ ವಿಚಾರಿಸಿದರೆ ಸರಕಾರದಿಂದ ದುರಸ್ತಿಗಾಗಿ ಹಣ ಬಂದಿಲ್ಲ ಬಂದ ಮೇಲೆ ಮಾಡುತ್ತೇವೆ ಎಂದು ಉಡಾಫೆಯ ಉತ್ತರ ಕೊಡುತ್ತಾರೆ ಎನ್ನುತ್ತಾರೆ.

ಕೊಳಗೇರಿ ಪ್ರದೇಶಗಳಾಗುತ್ತಿರುವ ವಾರ್ಡ ನಂ 19 ಮತ್ತು 20-

ವಾರ್ಡ ನಂ 19 ಮತ್ತು 20 ರಲ್ಲಿ ಮುಖ್ಯವಾಗಿ ಮಸೂಬಾ ಹಳ್ಳವು ಹಾಯ್ದು ಹೋಗಿರುವುದರಿಂದ ಮತ್ತು ಹಳ್ಳವನ್ನು ಇತರ ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿಕೊಂಡಿದರುವದಿಂದ ಹಾಗೂ ಸ್ಥಳೀಯ ಸದಸ್ಯರ ಅಜಾಗರೂಕತೆಯಿಂದ ಇಲ್ಲಿನ ಹಲವು ಪ್ರದೇಶವು ಕೊಳಗೇರಿ ಪ್ರದೇಶವಾಗುತ್ತಿದೆ.

ನಿರಾಶ್ರಿತರಿಗೆ ಸಿಗದ ಸೌಲಭ್ಯ-

ಕೆಲತಿಂಗಳಿನ ಹಿಂದೆ ರಸ್ತೆ ಅಗಲಿಕರಣ ಸಂದರ್ಭದಲ್ಲಿ ಸುಮಾರು 500ಕ್ಕೂ ಹೆಚ್ಚು ಕುಟುಂಬಗಳು ನಿರಾಶ್ರೀತರಾಗಿದ್ದು ತಮ್ಮ ಮನೆಗಳನ್ನು ಕಳೆದುಕೊಂಡಿದ್ದು ಅದರಲ್ಲಿ ಅರ್ಧದಷ್ಟೂ ಜನರಿಗೆ ಇದು ವರೆಗೂ ಸಿಗದ ವಸತಿ ಸೌಲಭ್ಯ ಇದರಿಂದಾಗಿ ಬೇಸತ್ತ ನಿರಾಶ್ರಿತರು ಅದರಲ್ಲೂ ಮೀರಜ ರಸ್ತೆಗೆ ಹೊಂದಿಕೊಂಡಿದ್ದ ಗೊರ‍್ಯಾಳ ನಿವಾಸಿಗಳು ಶಾಪ ಹಾಕದ ದಿನಗಳಿಲ್ಲ.

ತಲೆನೋವಾದ ಟ್ರಾಫಿಕ್ ಸಮಸ್ಯೆ-

ಅಥಣಿಯಲ್ಲಿ ಸಿಕ್ಕಾಪಟ್ಟೆ ಟ್ರಾಫಿಕ್ ಸಮಸ್ಯೆಯಿಂದ ಸಾರ್ವಜನಿಕರು ಪರದಾಡುತ್ತಿದ್ದಾರೆ. ಕಳೆದ 15 ವರ್ಷದಿಂದ ಹಳೆಯ ಮಾಜಿ ಶಾಸಕರಿಂದ ಹಿಡಿದು ಈಗಿನ ಹಾಲಿ ಹೊಸ ಶಾಸಕರವರೆಗೂ , ಶಾಸಕರು ಹೆಚ್ಚಾಗಿ ಬಾಯಪಾಸ ರಸ್ತೆಯನ್ನು ಮಾಡುವುದರ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಯಾವಾಗ ಅಥಣಿ ನಗರಕ್ಕೆ ಆ ಬಾಯಪಾಸ ಭಾಗ್ಯದಿಂದಾಗಿ ನಮ್ಮ ಅಥಣಿ ಜನತೆ ಟ್ರಾಫಿಕ್‍ನಿಂದ ಮುಕ್ತಿ ಸಿಗುತ್ತದೆ ಎಂದು ಬಕಪಕ್ಷಿತರಹ ಕಾಯಬೇಕೋ ಅಥವಾ  ಬಾಯಪಾಸ್ ರಸ್ತೆ ಆಗುವವರೆಗೆ ಬಾಯಪಾಸ್ ಬಾಯಪಾಸ್ ಎಂದು ಜಪ ಮಾಡುತ್ತಾ ಕೂರಬೇಕೋ ತಿಳಿಯುತ್ತಿಲ್ಲ ?. ಬಾಯಪಾಸ್ ಯಾವಾಗ ಆಗುತ್ತೊ ಯಾರಿಗೆ ಗೊತ್ತು ಆದರೆ ಅದು ಆಗುವವರೆಗೂ ಸಾರ್ವಜನಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಿದರೆ ಒಳ್ಳೆಯದು ಎಂದು ಸಾರ್ವಜನಿಕರ ಆಶಯ.

ಐತಿಹಾಸಿಕ ಕೆರೆಯ ವಿಸ್ತೀರ್ಣ ಕಡಿಮೆಗೊಳಿಸಿರುವುದು-

ಅಥಣಿ ಐತಿಹಾಸಿಕ ಕೆರೆಯು ರಸ್ತೆ ಅಗಲಿಕರಣದ ಹೆಸರಲ್ಲಿ ಕಡಿಮೆ ಆಗುತ್ತಾ ಬಂದಿದೆ ಹಾಗೂ ಕೆರೆಯನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಹುಬ್ಬಳಿ ದಾರವಾಡದ ಉನಕಲ ಕೆರೆಯ ತರಹದ ರೀತಿಯಲ್ಲಿ ಅಬಿವೃದ್ದಿ ಮಾಡಿದರೆ ಸಾರ್ವಜನಿಕರಿಗೂ ಉಪಯೋಗವಾಗುತ್ತದೆ, ಅಥಣಿಯಲ್ಲಿ ಜನರು ತುಂಬುವ ತೆರಿಗೆಯ ಹಣದಲ್ಲಿ ಉದ್ಯಾನವನದ ತೆರಿಗೆಯು ಸಹ ಸೇರಿದ್ದು ಆದರೆ ಉದ್ಯಾನವನ ಮಾತ್ರ ಇಲ್ಲದ ಹಾಗೆ ಮಾಡಿದ್ದಾರೆ. ಹಾಗೂ ಕೆರೆಯನ್ನು ಅಬಿವೃದ್ದಿ ಮಾಡಿದರೆ ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ತುಂಬಾ ಅನುಕೂಲವಾಗತ್ತದೆ ಕೆರೆ ಅಬಿವೃದ್ದಿ ಹೆಸರಲ್ಲಿ ಕೆರೆ ಸುತ್ತ ಮುತ್ತ ವಾಣಿಜ್ಯ ಮಳಿಗೆಗಳನ್ನ ಕಟ್ಟುವ ಕ್ರೀಯಾ ಯೊಜನೆಯು ಸಿದ್ದವಾಗುತ್ತಿದೆ ಆದರೆ ಅದಕ್ಕೆ ಮಾನ್ಯ ಶಾಸಕರಾಗಲಿ ಹಾಗೂ ಯಾವುದೇ ಅಧಿಕಾರಿಗಳು ಬೆಂಬಲ ಕೂಡಬಾರದು, ವಾಣಿಜ್ಯ ಮಳಿಗೆ ಮಾಡಿದರೆ ಕೆರೆಯ ಆಕಾರ ಹಾಗೂ ಅದರ ಪ್ರಾಮುಖ್ಯತೆ ಹೋಗುತ್ತದೆ ಹಾಗೂ ಐತಿಹಾಸಿಕ ಕೆರೆಯ ಪ್ರಾಮುಖ್ಯತೆ ಹೋಗಬಾರದಂತಹ ಸಲಹೆ ಹಲವರದು.

ಎಮ್.ಜಿ. ಮಾರ್ಕೆಟ್ ಸಮಸ್ಯೆ-

ಪಟ್ಟಣದ ಹೃದಯ ಬಾಗದ ಎಮ್,ಜಿ, ಮಾರ್ಕೇಟ ಸದಾಕಾಲ ಕಿಕ್ಕಿರಿದು ಟ್ರಾಫಿಕ್ ನಿಂದಾಗಿ ತುಂಬಿ ತುಳಿಕುತ್ತಿರುತ್ತದೆ, ಅವೈಜ್ಞಾನಿಕ ಪಾರ್ಕಿಂಗ್, ಭಾರಿ ವಾಹನಗಳ ಸಂಚಾರ, ಹೆಚ್ಚಾದ ವಾಹಣ ದಟ್ಟಣೆ ಮತ್ತು ಸರಿಯಾದ ನಿಯಂತ್ರಣ ಇಲ್ಲದಿರುವುದರಿಂದ ಮಾರುಕಟ್ಟೆಗೆ ಹೋಗಲು ಸಾರ್ವಜನಿಕರಿಗೆ ಇಷ್ಟವೇ ಇಲ್ಲದಂತಾಗಿದೆ.

ಮಾರುಕಟ್ಟೆಯಲ್ಲಿ ಇಲ್ಲದ ಮಹಿಳಾ ಶೌಚಾಲಯ-

ಪಟ್ಟಣದ ಪ್ರಮುಖ ಮಾರುಕಟ್ಟೆ ಸ್ಥಳದಲ್ಲಿ ಸುಮಾರು ವರ್ಷಗಳಿಂದ ಒಂದೂ ಸುಸಜ್ಜಿತವಾದ ಮೂತ್ರಾಲಯವಿಲ್ಲ ಅದರಲ್ಲೂ ಮಹಿಳೆಯರ ಶೌಷಾಲಯವೇ ಇಲ್ಲ, ವ್ಯಾಪಾರಕ್ಕೆ ಬಂದ ಮಹಿಳೆಯರು ಬಯಲನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇಂದಿಗೂ ಇರುವುದು ವಿಪರ್ಯಾಸ.

ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಕಾಟ-

ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆಂದು ಬರುವ ಹಳ್ಳಿಯ ರೈತರಿಂದ ಹೆಚ್ಚಿನ ಹಣ ವಸೂಲಿ ಮತ್ತು ಅವರಿಗೆ ಹೆದರಿಸುವ ಬೆದರಿಸುವ ಪ್ರಸಂಗಗಳೂ ದಿನನಿತ್ಯದ ಚಟುವಟಿಕೆಗಳಾಗಿವೆ. ಇದಲ್ಲದೆ ಇನ್ನೂ ಹಲವಾರು ಸಮಸ್ಯೆಗಳು ಅಥಣಿಯ ನಗರವನ್ನು ಕಾಡುತ್ತಿದ್ದು ಇವುಗಳನ್ನು ಬಹುಬೇಗನೆ ಸುಧಾರಿಸಿದಲ್ಲಿ ಮುಂಬರುವ ಪುರಸಭೆಯ ಚುನಾವಣೆಯಲ್ಲಿ ಇದೇ ಪಕ್ಷಕ್ಕೆ ವರವಾಗಬಹುದು ಇಲ್ಲವಾದರೆ ಮತ್ತೆ ಮಾಜಿಗಳ ಆಟ ಶುರುವಾಗಬಹುದೆಂದು ಸ್ಥಳೀಯರ ಅನಿಸಿಕೆಯಾಗಿದೆ.

ಹೇಳಿಕೆಗಳು

ಉಪಮುಖ್ಯಮಂತ್ರಿಯವರು ಹಾಗೂ ಶಾಸಕರು ಮನಸ್ಸು ಮಾಡಿದರೆ ಶೀಘ್ರವೇ ಪುರಸಭೆಗೆ ಚುನಾವಣೆ ನಡೆಯುತ್ತದೆ ಅವರಿಗೆ ಚುನಾವಣೆ ಬೇಡವಾಗಿದ್ದು ಅಧಿಕಾರ ಕೇಂದ್ರಿತ ಆಗಿಸಿಕೊಂಡು ಅಧಿಕಾರಿಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಅಂಧಾದರ್ಬಾರ ಮಾಡುತ್ತಿದ್ದಾರೆ. ಹೀಗೆಯೇ ಮುಂದುವರೆದರೆ ಅಥಣಿ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ - ಸಿದ್ದಾರ್ಥ ಸಿಂಗೆ (ಅಧ್ಯಕ್ಷರು, ಅಥಣಿ ಬ್ಲಾಕ್ ಕಾಂಗ್ರೆಸ್).

ಸುದ್ದಿ ಓದಿ