ಪ್ರತಿ ಟನ್ ಕಬ್ಬಿಗೆ 2850 ರೂ. ದರ ನೀಡಲು ನಿರ್ಧಾರ
ಪತ್ರಿಕಾಗೋಷ್ಠಿಯಲ್ಲಿ ಶಿರಗುಪ್ಪಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಕಲ್ಲಪ್ಪಣ್ಣ ಮಗೆಣ್ಣವರ ಹೇಳಿಕೆ
ಶೇಡಬಾಳ 09: ಪ್ರಸಕ್ತ ಹಂಗಾಮಿನಲ್ಲಿ ಕಾಗವಾಡ ಪಟ್ಟಣದ ಶಿರಗುಪ್ಪಿ ಸಕ್ಕರೆ ಕಾರ್ಖಾನೆಯು ಪ್ರತಿ ಟನ್ ಕಬ್ಬಿಗೆ 2850 ರೂ. ದರ ನೀಡಲು ನಿರ್ಧರಿಸಲಾಗಿದೆ ಎಂದು ಶಿರಗುಪ್ಪಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಕಲ್ಲಪ್ಪಣ್ಣ ಮಗೆಣ್ಣವರ ಹೇಳಿದರು.
ಅವರು ರವಿವಾರ ದಿ. 9ರಂದು ಕಾಗವಾಡ ಪಟ್ಟಣದ ಶಿರಗುಪ್ಪಿ ಶುಗರ ವರ್ಕ್ಸ ಸಕ್ಕರೆ ಕಾರ್ಖಾನೆಯ ಕಾರ್ಯಾಲಯದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಶಿರಗುಪ್ಪಿ ಸಕ್ಕರೆ ಕಾರ್ಖಾನೆಯ 11 ನೇ ಕಬ್ಬು ನುರಿಸುವ ಹಂಗಾಮು ಇದಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿಗದಿ ಪಡಿಸಿರುವ ಎಫ್.ಆರ್.ಪಿ. ದರಕ್ಕಿಂತ ಹೆಚ್ಚಾಗಿ ಪ್ರತಿ ಟನ್ ಕಬ್ಬಿಗೆ 2850 ರೂ. ದರ ನೀಡಲು ನಿರ್ಧರಿಸಲಾಗಿದ್ದು, ಕಬ್ಬು ಬೆಳೆಗಾರರು ಕಾರ್ಖಾನೆಗೆ ಕಬ್ಬು ಪೂರೈಸಿದ 15 ದಿನಗಳಲ್ಲಿ ರೈತರ ಖಾತೆಗೆ ಹಣ ಸಂದಾಯ ಮಾಡಲಾಗುವುದೆಂದು ಹೇಳಿದರು. ಕಾರಣ ಹೆಚ್ಚಿನ ಪ್ರಮಾಣದಲ್ಲಿ ರೈತರು ಕಾರ್ಖಾನೆಗೆ ಕಬ್ಬು ಪೂರೈಸಿ ಸಹಕರಿಸುವಂತೆ ಮನವಿ ಮಾಡಿಕೊಂಡರು.
ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕ ಅರುಣ ಫರಾಂಡೆ ಮಾತನಾಡಿ ಶಿರಗುಪ್ಪಿ ಸಕ್ಕರೆ ಕಾರ್ಖಾನೆಯು ಕಳೆದ ವರ್ಷದ ಹಂಗಾಮಿನಲ್ಲಿ 8 ಲಕ್ಷ 64 ಸಾವಿರ ಟನ್ ಕಬ್ಬು ನುರಿಸಿ 10 ಲಕ್ಷ 86 ಸಾವಿರ ಕ್ವಿಂಟಲ್ ಸಕ್ಕರೆಯನ್ನು ಉತ್ಪಾದಿಸಲಾಗಿತ್ತು. ಪ್ರಸಕ್ತ ವರ್ಷದಲ್ಲಿ 12 ಲಕ್ಷ ಕಬ್ಬು ನುರಿಸುವ ಗುರಿ ಹೊಂದಲಾಗಿದ್ದು, ಇಥನಾಲ್ ಪ್ಲಾಟ್ ಕ್ಯಾಪ್ಯಾಸಿಟಿಯನ್ನು 2ಲಕ್ಷ ಲೀ.ಗೆ ಹೆಚ್ಚಿಸಲಾಗುವುದು. ಅಲ್ಲದೇ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲಾಗುವುದೆಂದು ಹೇಳಿದರು. ಮಾರುಕಟ್ಟೆಯಲ್ಲಿ 38-40 ರೂ. ವರೆಗೆ ಸಕ್ಕರೆ ಮಾರಾಟವಾದಾಗ ಹಾಗೂ ಸಕ್ಕರೆ ಕಾರ್ಖಾನೆಗಳ ಉಪ ಉತ್ಪಾದನೆಗಳು ಹೆಚ್ಚಾದಾಗ ಮಾತ್ರ ರೈತರು ಬೆಳೆದ ಕಬ್ಬಿಗೆ ಯೋಗ್ಯ ದರ ನೀಡಲು ಸಾಧ್ಯವಾಗುತ್ತದೆ ಎಂದು ಅರುಣ ಫರಾಂಡೆ ಹೇಳಿದರು.
ಅಧ್ಯಕ್ಷ ಕಲ್ಲಪ್ಪಣ್ಣ ಮಗೆಣ್ಣವರ, ಕಾರ್ಯಕಾರಿ ಸಂಚಾಲಕರಾದ ಪ್ರವೀಣ ದೊಡ್ಡಣ್ಣವರ, ಡಾ. ರಮೇಶ ದೊಡ್ಡಣ್ಣವರ, ಪೃಥ್ವಿ ದೊಡ್ಡಣ್ಣವರ, ಮಹಾವೀರ ಸುಗಣ್ಣವರ, ಕಾರ್ಖಾನೆ ವ್ಯವಸ್ಥಾಪಕರು ಅರುಣ ಫರಾಂಡೆ, ಮಹಾವೀರ ಬಿರನಾಳೆ, ಬಿ.ಡಿ.ಯಳಗೂಡ, ಕೌತುಕ ಮಗೆಣ್ಣವರ, ವೀರೇಂದ್ರ ಜಾಡರ ಸೇರಿದಂತೆ ಸಕ್ಕರೆ ಕಾರ್ಖಾನೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಜರಿದ್ದರು.