ಗುಳೇಗುಡ್ಡ

ಗಣರಾಜ್ಯೋತ್ಸವ ಸರಳ ಆಚರಣೆಗೆ ನಿರ್ಧಾರ

ಗಣರಾಜ್ಯೋತ್ಸವ ಸರಳ ಆಚರಣೆಗೆ ನಿರ್ಧಾರ

ಗುಳೇದಗುಡ್ಡ20: ಪ್ರಸಕ್ತವರ್ಷ ತಾಲೂಕಾ ಆಡಳಿತ, ಪುರಸಭೆ, ತಾಪಂ ಮತ್ತು ತಾಲೂಕಾ ಮಟ್ಟದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜ.26ರಂದು ಗಣರಾಜ್ಯೋತ್ಸವ ದಿನಾಚರಣೆ ಸರಳವಾಗಿ ಆಚರಿಸುವುದಾಗಿ ತಹಸೀಲ್ದಾರ ಜಿ.ಎಂ.ಕುಲಕರ್ಣಿ ಅಧ್ಯಕ್ಷತೆಯಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಮಂಗಳವಾರ ತಹಸೀಲ್ದಾರ ಕಚೇರಿಯಲ್ಲಿ ಕರೆದ ತಾಲೂಕು ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳ ಸಭೆಯಲ್ಲಿ ತಹಸೀಲ್ದಾರ ಜಿ.ಎಂ.ಕುಲಕರ್ಣಿ ಮಾತನಾಡಿದರು.

ಕೋವಿಡ್ ನಿಯಮಾನುಸಾರ ಕಾರ್ಯಕ್ರಮ ಸರಳೀಕರಣಗೊಳಿಸಲಾಗಿದೆ. ಪ್ರತಿಯೊಂದು ತಾಲೂಕಾಮಟ್ಟದ ಇಲಾಖಾ ಅಧಿಕಾರಿಗಳಿಗೆ ಕಾರ್ಯಕ್ರಮದ ಜವಾಬ್ದಾರಿಗಳನ್ನು ವಹಿಸಿಕೊಟ್ಟು, ಸರಳವಾಗಿ ಆದರೂ ಅಚ್ಚುಕಟ್ಟಾಗಿ ಮಾಡಬೇಕೆಂದು ತಿಳಿಸಿದರು.

ಸನ್ಮಾನ: ಕಾರ್ಯಕ್ರಮ ಏನೆಲ್ಲ ವಿಶೇಷತೆಗಳನ್ನು ಒಳಗೊಂಡಿರಬೇಕೆಂದು ಸಭೆಗೆ ಆಗಮಿಸಿದ್ದ ಅಧಿಕಾರಿಗಳಿಂದ ತಹಸೀಲ್ದಾರರು ಅಭಿಪ್ರಾಯಗಳನ್ನು ಪಡೆದರು. ಕಾರ್ಯಕ್ರಮದ ದಿನ ಸ್ವಾತಂತ್ರ್ಯ ಯೋಧರ ಪತ್ನಿಯರಿಗೆ ಅವರ ಮನೆಗೆ ತೆರಳಿ ಸನ್ಮಾನಿಸುವುದು, ಕೆಎಸ್‍ಆರ್‍ಟಿಸಿಯಲ್ಲಿ ಅಪಘಾತ ರಹಿತ ಚಾಲನೆ ಮಾಡಿದ 12 ಜನ ಚಾಲಕರಿಗೆ ಜಿಲ್ಲಾಮಟ್ಟದಲ್ಲಿ ಘೋಷಣೆಯಾದ ಬೆಳ್ಳಿಪದಕ ಹಾಗೂ ಪ್ರಮಾಣಪತ್ರ ವಿತರಿಸುವುದು, ಎಸ್‍ಎಸ್‍ಎಲ್‍ಸಿಯಲ್ಲಿ ಜಿಲ್ಲೆಗೆ ಹೆಚ್ಚಿಗೆ ಅಂಕಪಡೆದು ಹೆಸರು ಮಾಡಿದ ವಿದ್ಯಾರ್ಥಿನಿಗೆ ಸನ್ಮಾನ, ಸೇವೆಯಲ್ಲಿ ವೀರಮರಣಹೊಂದಿದ ಸೈನಿಕರ ಕುಟುಂಬದವರಿಗೆ ಗೌರವ ಸನ್ಮಾನ ಹಮ್ಮಿಕೊಳ್ಳಲಾಗಿದೆ.

ಕೋವಿಡ್ ನಿಯಮ ಪಾಲನೆ ಕಡ್ಡಾಯ: ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಂಪೂರ್ಣ ಕೋವಿಡ್ ನಿಯಮ ಪಲಿಸಲು ಕಟ್ಟು ನಿಟ್ಟಿನ ಕ್ರಮಕ್ಕೆ ತಹಸೀಲ್ದಾರರು ಆರೋಗ್ಯ ಇಲಾಖೆಗೆ ಸೂಚನೆ ನೀಡಿದರು. ಕಾರ್ಯಕ್ರಮದ ವೇದಿಕೆಯನ್ನು ಸ್ಯಾನಿಟೈಜರ್ ಮಾಡುವುದು, ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡುವುದು ಅಗತ್ಯವೆಂದು ತಿಳಿಸಿದರು. ಹಾಗೂ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಧ್ವಜ ಬಳಸದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಆದೇಶಿಸಿದರು.

ಎಂ.ಎಲ್‍ಬಿಸಿ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎಸ್.ಜಿಡಗಿ, ತಾಪಂ ಇಓ ಎಸ್‍ಪಿ ನಕ್ಕರಗುಂದಿ, ಎಎಸೈ ಎಚ್.ಎ.ಹವಾಲ್ದಾರ್, ಹೆಸ್ಕಾಂ ಸೆಕ್ಷನ್ ಆಫೀಸರ್ ಎಸ್.ಎಚ್.ಹಿರೇಮಠ, ಪ್ರಾಚಾರ್ಯ ವಿಠ್ಠಲ ಕಳಸಾ, ಶಾಲಾ ಶಿಕ್ಷಕ ಸಂತೋಷ ಪಟ್ಟಣಶೆಟ್ಟಿ, ವಿ.ಪಿ.ಚೊಳಾ, ಎಂ.ಓ.ಸುರಪುರ, ಜೆ.ಎಂ. ಬುಳ್ಳಾ, ಎಂ.ಎಸ್.ಉಂಕಿ, ಆರೋಗ್ಯ ಇಲಖೆಯ ಎ.ಎಲ್. ಬಡಿಗೇರ, ಆರ್.ಎಂ.ಸಾಳಗುಂದಿ,  ಸಾರಿಗೆ ಇಲಾಖೆಯ ಕೆ.ಎಂ.ಗೋಲಂದಾಜ, ಪುರಸಭೆಯ ಎಂ.ಆರ್.ಸುಗಂಧಿ , ಕಂದಾಯ ಇಲಾಖಾ ಸಿಬ್ಬಂದಿ ತುಪ್ಪದ ಸೇರಿದಂತೆ ಇನ್ನಿತರರು ಇದ್ದರು.

ಸುದ್ದಿ ಓದಿ