ಸಾಲ ವಸೂಲಿಗೆ ಸಾಕಷ್ಟು ಆದ್ಯತೆ ನೀಡಿದರೂ ಕೂಡ ಬರಗಾಲದಿಂದ ಕುಂಠಿತಗೊಂಡಿದೆ: ಅಸ್ಕಿ
ಅಥಣಿ 25: ಸಾಲ ವಸೂಲಿಗೆ ಸಾಕಷ್ಟು ಆದ್ಯತೆ ನೀಡಿದ್ದರೂ ಕೂಡ ಬರಗಾಲ, ಪ್ರವಾಹದಂತಹ ಪ್ರಕೃತಿ ವಿಕೋಪಗಳ ಪರಿಣಾಮ ಸಾಲ ವಸೂಲಾತಿ ಕುಂಠಿತಗೊಂಡಿದೆ ಎಂದು ಪಿಎಲ್.ಡಿ ಬ್ಯಾಂಕಿನ ಅಧ್ಯಕ್ಷ ದುಂಡಪ್ಪ ಅಸ್ಕಿ ಹೇಳಿದರು. ಅವರು ಅಥಣಿ ಮತ್ತು ಕಾಗವಾಡ ತಾಲೂಕಿನ ಪಿಎಲ್.ಡಿ ಬ್ಯಾಂಕಿನ 62ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡುತ್ತಿದ್ದರು.
ನಿಗದಿತ ಪ್ರಮಾಣದಲ್ಲಿ ಸಾಲ ವಸೂಲಾತಿ ಆಗದೇ ಹೋಗಿದ್ದರೂ ಕೂಡ ತಾಲೂಕಿನ ರೈತ ಬಾಂಧವರಿಗೆ ಅಭಿವೃದ್ಧಿ ಕಾರ್ಯಗಳಿಗೆ ಸಾಲ ಸೌಲಭ್ಯ ಕಳೆದ 62 ವರ್ಷಗಳಿಂದ ಕೊಡುತ್ತಲೇ ಬಂದಿದ್ದು, ಅಥಣಿ ಶಾಸಕ ಲಕ್ಚ್ಮಣ ಸವದಿ ಹಾಗೂ ಕಾಗವಾಡ ಶಾಸಕ ರಾಜು ಕಾಗೆ ಮಾರ್ಗದರ್ಶನದಲ್ಲಿ ಮುಂದಿನ ಅವಧಿಯಲ್ಲಿ ಬ್ಯಾಂಕನ್ನು ಮುನ್ನಡೆಸಿಕೊಂಡು ಹೋಗುತ್ತೇವೆ ಎಂದ ಅವರು ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡಿ ಸರಕಾರದ ಬಡ್ಡಿ ರಿಯಾಯತಿ ಸೌಲಭ್ಯ ಪಡೆದುಕೊಂಡು ಬ್ಯಾಂಕಿನ ಪ್ರಗತಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಬ್ಯಾಂಕಿನಿಂದ ರೈತರಿಗೆ 2022-23 ನೇ ಸಾಲಿನಲ್ಲಿ 245.55 ಲಕ್ಷ ಸಾಲ ವಿತರಣೆ ಮಾಡಲಾಗಿತ್ತು. 2023-24 ನೇ ಸಾಲಿಗಾಗಿ 227.51 ಲಕ್ಷ ರೂ.ಗಳ ಸಾಲ ಹಂಚಿಕೆಯ ಗುರಿ ಇಟ್ಟುಕೊಂಡಿದ್ದು, 2022-23 ನೇ ಸಾಲಿನಲ್ಲಿ ಬ್ಯಾಂಕಿಗೆ 27.15 ಲಕ್ಷ ರೂ.ಗಳಷ್ಟು ಲಾಭ ಆಗಿದೆ ಎಂದ ಅವರು ಈ ಪೈಕಿ ಭೂ ಅಭಿವೃದ್ಧಿಗಾಗಿ 30 ಲಕ್ಷ, ತೋಟಗಾರಿಕೆಗಾಗಿ 100.50 ಲಕ್ಷ, ಕೃಷಿ ಯಾಂತ್ರಿಕರಣಕ್ಕಾಗಿ 63.88 ಲಕ್ಷ ಮತ್ತು ವಿವಿಧ ಉದ್ದೇಶಗಳಿಗೆ 33.13 ಲಕ್ಷ ಸಾಲ ಮೀಸಲಿಡಲಾಗಿದೆ ಎಂದರು.
ಪಿಎಲ್.ಡಿ ಬ್ಯಾಂಕಿನ ಮಾಜಿ ಅಧ್ಯಕ್ಷ ಶೀತಲ ಪಾಟೀಲ ಮಾತನಾಡಿ, ಅಥಣಿ ಪಿಎಲ್.ಡಿ ಬ್ಯಾಂಕಿನ ಕಟ್ಟಡ ಶಿಥಿಲಗೊಂಡಿದ್ದು, ಕಟ್ಟಡದ ನವೀಕರಣ ಮಾಡಬೇಕೋ ಅಥವಾ ನೂತನ ಕಟ್ಟಡ ಮಾಡಬೇಕೋ ಎನ್ನುವುದನ್ನು ಆಡಳಿತ ಮಂಡಳಿಯಲ್ಲಿ ನಿರ್ಧರಿಸುವುದಾಗಿ ಹೇಳಿದರು. ಪಿಎಲ್.ಡಿ ಬ್ಯಾಂಕಿನ ನಿರ್ದೇಶಕ ಮಂಡಳಿ ಸದಸ್ಯ ಮಹಾದೇವ ಕೋರೆ ಮಾತನಾಡಿ, ವಾರ್ಷಿಕ ವರದಿ ಮತ್ತು ಅಢಾವೆ ಪತ್ರಿಕೆ ಮುದ್ರಣ ಮಾಡಿದ ಪುಸ್ತಕದಲ್ಲಿ ಕಳೆದ ವರ್ಷ ಹಾಲಿ ಶಾಸಕರೊಂದಿಗೆ ಮಾಜಿ ಶಾಸಕರ ಭಾವಚಿತ್ರ ಪ್ರಕಟಿಸಿದಂತೆ ಪ್ರಸಕ್ತ ಸಾಲಿನಲಿನ ಪುಸ್ತಕದಲ್ಲಿ ಮಾಜಿ ಸಚಿವ ಶ್ರೀಮಂತ ಪಾಟೀಲರ ಭಾವ ಚಿತ್ರ ಪ್ರಕಟಿಸಬೇಕಿತ್ತು ಮುಂದಿನ ವರ್ಷ ಇದನ್ನು ಸರಿ ಪಡೆಸಿ ಎಂದ ಅವರು ಪಿಎಲ್.ಡಿ ಬ್ಯಾಂಕಿನಲ್ಲಿ ರೈತರು ಸಾಲ ಸೌಲಭ್ಯದ ಜೊತೆಗೆ ಠೇವಣಿ ಕೂಡ ಇಡಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಬ್ಯಾಂಕಿನ ಸದಸ್ಯ ರಾಜು ನಾಡಗೌಡ ಮಾತನಾಡಿದರು. ಬ್ಯಾಂಕಿನ ಉಪಾಧ್ಯಕ್ಷ ಭರತ ಮಾಳಿ, ನಿರ್ದೇಶಕ ಮಂಡಳಿ ಸದಸ್ಯರಾದ ಅಶೋಕ ಪಡನಾಡ, ರವೀಂದ್ರ ಗಾಣಿಗೇರ, ವಿನಯ ಪಾಟೀಲ, ಮಾನಸಿಂಗ ಮಗರ, ಸತ್ಯಪ್ಪಾ ಬಿರಾದಾರ, ಅಪ್ಪಾಸಾಹೇಬ ವಾಘಮೋರೆ, ಶ್ರೀಶೈಲ ನಾಯಿಕ, ಶ್ರೀಮತಿ ತಂಗೆವ್ವಾ ಖೋತ, ಸುಜಾತಾ ಖಡಕಿ, ಹೇಮಲತಾ ಪಾಟೀಲ, ವ್ಯವಸ್ಥಾಪಕ ಆರ್.ಎಚ್.ಬಂಡಿವಡ್ಡರ ಸಭೆಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಅಮರ ದುರ್ಗಣ್ಣವರ, ರಾಮಗೌಡ ಗುಮತಾಜ ಸೇರಿದಂತೆ ಬ್ಯಾಂಕಿನ ಸದಸ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಬ್ಯಾಂಕಿನ ಸಿಬ್ಬಂದಿ ಸಂತೋಷ ಬನಸೋಡೆ ನಿರೂಪಿಸಿದರು. ನಿರ್ದೇಶಕ ರಾಜಗೌಡ ಪಾಟೀಲ ವಂದಿಸಿದರು.