ಉತ್ಸವ ರಾಕ್ಗಾರ್ಡನ್ನಲ್ಲಿ ಯೋಗ ದಿನಾಚರಣೆ
ಶಿಗ್ಗಾವಿ 21: ‘ಯೋಗ’ ಎಂದರೆ ಒಗ್ಗೂಡುವಿಕೆ. ಇದರಿಂದ ಮನಸ್ಸಿನ ಜತೆಗೆ ದೇಹವೂ ಶುದ್ಧೀಕರಣಗೊಳ್ಳುತ್ತದೆ ಎಂದು ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ.ಭಾಸ್ಕರ್ ಹೇಳಿದರು.
ತಾಲೂಕಿನ ಗೊಟಗೋಡಿಯ ಉತ್ಸವ ರಾಕ್ಗಾರ್ಡನ್ನ ಜಾನಪದ ರಂಗಮಂದಿರದಲ್ಲಿ ಬುಧವಾರ ನಡೆದ ‘ಒಂಬತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ’ ಕಾರ್ಯಕ್ರಮ’ ಉದ್ಘಾಟಿಸಿ ಮಾತನಾಡಿದ ಅವರು ಯೋಗ ಎಂದರೆ ಒಗ್ಗಟ್ಟು. ಅದು ಮಾನವತೆ, ಪ್ರಕೃತಿ ಮತ್ತು ಜಗತ್ತಿನ ಕೋಟ್ಯಂತರ ಜನರನ್ನು ಒಗ್ಗೂಡಿಸುತ್ತದೆ. ನಮ್ಮಲ್ಲಿನ ವ್ಯತ್ಯಾಸಗಳ ಹೊರತಾಗಿಯೂ ನಾವೆಲ್ಲರೂ ಮನುಷ್ಯರು ಎಂಬ ಸತ್ಯವನ್ನು ಅರ್ಥ ಮಾಡಿಸುತ್ತದೆ ಎಂದು ನುಡಿದರು.‘ವಿಶ್ವಕುಟುಂಬಕ್ಕಾಗಿ ಯೋಗ’ (ವಸುದೈವಕುಟುಂಬಂ) ಈ ವರ್ಷದ ಸಂದೇಶ. ಈ ಶುಭ ದಿನದ ನೆಪದಲ್ಲಿ ನಾವು ಒಗ್ಗಟ್ಟನ್ನು ಅಪ್ಪಿಕೊಂಡು, ಉತ್ತಮ ಸೌಹಾರ್ದಯುತ ಜಗತ್ತನ್ನು ಕಟ್ಟೋಣ ಎಂಬ ಸಂಕಲ್ಪ ಮಾಡೋಣ ಎಂದು ಪ್ರೊ.ಟಿ.ಎಂ.ಭಾಸ್ಕರ್ ತಿಳಿಸಿದರು.
ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶಿಗ್ಗಾವಿಯ ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿ ಭಾರತಿ ಅಕ್ಕ, ನಮ್ಮ ಮನಸ್ಸು ಮತ್ತು ದೇಹ ಸಧೃಡವಾಗಿರಬೇಕಾದರೆ ‘ಯೋಗ’ ಉತ್ತಮ ಸಾಧನ. ಇದನ್ನು ಎಲ್ಲರೂ ಅಳವಡಿಸಿ ಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ ಉತ್ಸವ ರಾಕ್ಗಾರ್ಡನ್ ಸಮಿತಿ ಅಧ್ಯಕ್ಷೆ ವೇದಾ ರಾಣಿದಾಸನೂರ ಯೋಗ ಎಲ್ಲರನ್ನೂ ಒಗ್ಗೂಡಿಸುತ್ತದೆ ಎಂಬುದು ಸಾರ್ವಕಾಲಿಕ ಸತ್ಯಇಂದಿನ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯೋಗಾಸಕ್ತರು ಸೇರಿರುವುದು ಇದಕ್ಕೆ ಸಾಕ್ಷಿ. ಇದು ನಿಜವಾಗಿಯೂ ಉತ್ತಮ ಬೆಳವಣಿಗೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಹಾಗೂ ಯೋಗಾಸಕ್ತರಿಗೆ ಯೋಗ ಶಿಕ್ಷಕ ಮಂಜುನಾಥ ಯೋಗಸಾನಗಳನ್ನು ಹೇಳಿಕೊಟ್ಟರು. ಉತ್ಸವ ರಾಕ್ಗಾರ್ಡನ್ ಸಮಿತಿ ಕಾರ್ಯದರ್ಶಿ ಪ್ರಕಾಶದಾಸನೂರ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದರು. ಗಾರ್ಡನ್ನ ಮೆನೇಜರ್ ಬಸವರಾಜ ಮಡಿವಾಳರ, ನಿರ್ದೇಶಕ ಆನಂದಗೌಡ ಪಾಟೀಲ್, ಸಿಬ್ಬಂದಿಗಳು, ಗೊಟಗೋಡಿ ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು. ಮುಖ್ಯ ಶಿಕ್ಷಕಿ ಅನುಪಮಾ ಹೆಬ್ಬಾರ್ ಸ್ವಾಗತಿಸಿದರು. ಸಾಗರ ದಾಸನೂರ ನಿರೂಪಿಸಿ, ವಂದಿಸಿದರು.