ದತ್ತ ಸಹಕಾರಿ ಸಕ್ಕರೆ ಕಾರ್ಖಾನೆಯ ಚುನಾವಣೆ ಪ್ರಚಾರ ಸಭೆ
ಕಾಗವಾಡ 18 : ಕಳೆದ ಅನೇಕ ವರ್ಷಗಳಿಂದ ರೈತ ಸದಸ್ಯರು ನಮ್ಮ ಬೆಂಬಲಕ್ಕೆ ಗಟ್ಟಿಯಾಗಿ ನಿಂತಿದ್ದರಿಂದ ಅವರ ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿಗಾಗಿ ಕೆಲಸ ಮಾಡುವ ಅವಕಾಶ ದೊರಕಿದ್ದು, ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿ, ರೈತ ಸದಸ್ಯರ ಹಿತ ಕಾಪಾಡುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದೇವೆ. ಇನ್ನೂ ಮುಂದೇಯೂ ರೈತ ಸದಸ್ಯರು ನಮಗೆ ಆಶೀರ್ವಾದ ಮಾಡಿ ತಮ್ಮ ಸೇವೆ ಮಾಡಲು ಮತ್ತೊಮ್ಮೆ ಅವಕಾಶ ನೀಡಬೇಕೆಂದು ಶ್ರೀ ದತ್ತ ಶೇತಕಾರಿ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಗಣಪತರಾವ್ ಪಾಟೀಲ ಮನವಿ ಮಾಡಿದರು.
ಅವರು ಗುರುವಾರ ದಿ. 18 ರಂದು ಪಟ್ಟಣದ ಅಂಬಾಬಾಯಿ ಹಾಗೂ ವಿಠ್ಠಲ ಮಂದಿರದ ಸಭಾಭವನದಲಿ ಮುಂಬರುವ ಜುಲೈ 24 ರಂದು ನಡೆಯಲಿರುವ ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಚಾರ ಸಭೆಯನ್ನು ಉದ್ದೇಶಿಸಿ, ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಮಾಜ ಸೇವಕ ಸುಭಾಷ ಕಠಾರೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾರ್ಖಾನೆಯ ನಿರ್ದೇಶಕರಾದ ಅಮರ ಯಾದವ, ಇಂದ್ರಜೀತ ಪಾಟೀಲ, ಮಹಿಪತರಾವ ನಿಂಬಾಳ್ಕರ, ಜ್ಯೋತಿಕುಮಾರ ಪಾಟೀಲ, ಅರುಣ ದೇಸಾಯಿ, ಪ್ರೊ. ಬಿ.ಜೆ. ಪಾಟೀಲ್, ಅಜೀತ ಚೌಗುಲೆ, ಸೌರಭ ಪಾಟೀಲ, ರಾಜಗೌಡಾ ಪಾಟೀಲ, ಕಾಕಾ ಪಾಟೀಲ, ರಮೇಶ ಚೌಗುಲಾ, ಪ್ರಕಾಶ ಪಾಟೀಲ, ಅರುಣ ಜೋಶಿ, ಶಶಿಕಾಂತ ಜೋಶಿ, ಚಿದಾನಂದ ಅವಟಿ, ಬಾಳಾಸಾಬ ಕಲ್ಲೋಳೆ ಸೇರಿದಂತೆ ರೈತ ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.